Home ರಾಜ್ಯ ಮಂಡ್ಯ ಆಡಿಯೋ ವಿವಾದ: ಶಿವರಾಮೇಗೌಡಗೆ ‘ಕೈ’ಕೊಡಲಿದೆಯೇ ಕಾಂಗ್ರೆಸ್? ಉಚ್ಚಾಟನೆಗೆ ಹೆಚ್ಚಿದ ಒತ್ತಡ

ಆಡಿಯೋ ವಿವಾದ: ಶಿವರಾಮೇಗೌಡಗೆ ‘ಕೈ’ಕೊಡಲಿದೆಯೇ ಕಾಂಗ್ರೆಸ್? ಉಚ್ಚಾಟನೆಗೆ ಹೆಚ್ಚಿದ ಒತ್ತಡ

0

ಮಂಡ್ಯ, ಫೆಬ್ರವರಿ 2: ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರಿಗೆ ವೈರಲ್ ಆಗಿರುವ ಆಡಿಯೋ ಸಂಭಾಷಣೆಯೊಂದು ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಆಡಿಯೋ ಕ್ಲಿಪ್‌ನಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಶಿವರಾಮೇಗೌಡ ಅವರನ್ನು ಪಕ್ಷದಿಂದ ಹೊರಹಾಕುವ ಸಾಧ್ಯತೆಗಳು ದಟ್ಟವಾಗಿವೆ.

ಪಕ್ಷದ ಕಾರ್ಯಕರ್ತನೊಬ್ಬನ ಜೊತೆಗಿನ ದೂರವಾಣಿ ಕರೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಂಡ್ಯದ ಹಿರಿಯ ನಾಯಕರಾದ ದಿವಂಗತ ಅಂಬರೀಶ್, ಜಿ. ಮಾದೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅತ್ಯಂತ ಕೀಳುಮಟ್ಟದ ಪದಗಳನ್ನು ಬಳಸಿ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಸ್ವಪಕ್ಷೀಯ ಸಚಿವರಾದ ಚಲುವರಾಯಸ್ವಾಮಿ ಅವರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯಿಂದ ಕೆಂಡಾಮಂಡಲವಾಗಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್ ಘಟಕ, ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ಪಟ್ಟು ಹಿಡಿದಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದಿದ್ದು, “ಪಕ್ಷದ ಮತ್ತು ಹಿರಿಯ ನಾಯಕರ ಗೌರವಕ್ಕೆ ಧಕ್ಕೆ ತರುವಂತಹ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಈ ಆಡಿಯೋ ನಕಲಿ ಎಂದು ವಾದಿಸಿರುವ ಶಿವರಾಮೇಗೌಡ, ತಮ್ಮ ತೇಜೋವಧೆ ಮಾಡಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಇದನ್ನು ಸೃಷ್ಟಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮಂಡ್ಯದ ಸ್ಥಳೀಯ ಕಾಂಗ್ರೆಸ್ ನಾಯಕರು ಈ ಸಮಜಾಯಿಷಿಯನ್ನು ಒಪ್ಪಲು ತಯಾರಿಲ್ಲ. ಹಿಂದೆ ಜೆಡಿಎಸ್‌ನಲ್ಲಿದ್ದಾಗಲೂ ಇದೇ ಮಾದರಿಯ ಆಡಿಯೋ ವಿವಾದದಿಂದಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಚಾಟಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಜೆಡಿಎಸ್‌ನಲ್ಲಿ ನಡೆದ ಇತಿಹಾಸವೇ ಈಗ ಕಾಂಗ್ರೆಸ್‌ನಲ್ಲೂ ಮರುಕಳಿಸುವ ಸೂಚನೆಗಳಿದ್ದು, ಶಿವರಾಮೇಗೌಡರಿಗೆ ಕಾಂಗ್ರೆಸ್ ಬಾಗಿಲು ಮುಚ್ಚುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

You cannot copy content of this page

Exit mobile version