ಫ್ರಾನ್ಸ್ ರಾಜಧಾನಿ ಪ್ಯಾರಿಸ್ಸಿನಲ್ಲಿ ನಡೆದ 17ನೇ ಬೇಸಿಗೆ ಪ್ಯಾರಾಲಿಂಪಿಕ್ಸ್ ಪಂಧ್ಯಾವಳಿಯಲ್ಲಿ 29 ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಪ್ಯಾರಾಲಿಂಪಿಕ್ 2024 ಕ್ರೀಡಾಕೂಟವು ಐತಿಹಾಸಿಕವಾಗಿದೆ. ನಮ್ಮ ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ನಮ್ಮ ದೇಶಕ್ಕೆ 29 ಪದಕಗಳನ್ನು ತಂದುಕೊಟ್ಟಿರುವುದು ಭಾರತಕ್ಕೆ ಹೆಮ್ಮೆ ತಂದಿದೆ. ಇದು ಟೂರ್ನಿಯ ಆರಂಭದಿಂದಲೂ ಭಾರತ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ.
ಈ ಯಶಸ್ಸಿಗೆ ನಮ್ಮ ಕ್ರೀಡಾಪಟುಗಳ ಅಚಲ ಬದ್ಧತೆ ಮತ್ತು ಅದಮ್ಯ ಛಲದ ಮನೋಭಾವವೇ ಕಾರಣ. ಅವರ ಕ್ರೀಡಾ ಸಾಧನೆಗಳು ನಮಗೆ ಅನೇಕ ಸ್ಮರಣೀಯ ಕ್ಷಣಗಳನ್ನು ನೀಡಿವೆ ಮತ್ತು ಅನೇಕ ಹೊಸ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿವೆ” ಎಂದು ಅವರು ಪೋಸ್ಟ್ ಮಾಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
29 ಪದಕ ಗೆದ್ದ ಭಾರತ
2024ರ ಪ್ಯಾರಾಲಿಂಪಿಕ್ ಕ್ರೀಡಾಕೂಟವು ನಿನ್ನೆ ಸಂಜೆ (ಸೆಪ್ಟೆಂಬರ್ 9) ಮುಕ್ತಾಯಗೊಂಡಿದೆ. ಕಾರ್ಯಕ್ರಮದಲ್ಲಿ 64,000 ಪ್ರೇಕ್ಷಕರು ಮತ್ತು 8,500 ಕ್ರೀಡಾಪಟುಗಳು ಭಾಗವಹಿಸಿದ್ದರು.
11 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕ ಸೇರಿದಂತೆ ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ.