Thursday, June 20, 2024

ಸತ್ಯ | ನ್ಯಾಯ |ಧರ್ಮ

I.N.D.I.A ಮೈತ್ರಿಕೂಟದ ಸಭೆ : ಗೌಪ್ಯವಾಗಿರುವ ಪ್ರಧಾನಿ ಅಭ್ಯರ್ಥಿ ಹೆಸರು

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿರುವ INDIA ಮೈತ್ರಿಕೂಟದ ಸಭೆಯಲ್ಲಿ ಮಹತ್ವದ ವಿಚಾರಗಳು ಪ್ರಸ್ತಾಪಕ್ಕೆ ಬರಲಿವೆ ಎಂದು ಮೂಲಗಳಿಂದ ತಿಳಿದಿದೆ. ಪ್ರಮುಖವಾಗಿ ಮೂರು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಹಿನ್ನಡೆ ಕಂಡ ನಂತರ, ಮುಂದಿನ ಹಾದಿಯ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.

ಚುನಾವಣಾ ಸೋಲಿನ ನಂತರ ಕಾಂಗ್ರೆಸ್ ಪಕ್ಷವು ತನ್ನ ಮಿತ್ರ ಪಕ್ಷಗಳ ಜೊತೆಗೆ ಗಂಭೀರ ಚರ್ಚೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ.

ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಸಿಪಿಐ (ಎಂ), ಎಎಪಿ, ಮತ್ತು ಪಿಡಿಪಿ ಇತರರನ್ನೊಳಗೊಂಡ INDIA ಮೈತ್ರಿಕೂಟವು ಜಂಟಿ ಪ್ರಚಾರ, ಸೀಟು ಹಂಚಿಕೆ ಮತ್ತು ಕ್ಷೇತ್ರ ಮರುಹಂಚಿಕೆಗಾಗಿ ನೀಲನಕ್ಷೆಯ ಬಗ್ಗೆ ಚರ್ಚಿಸಲು ಇಂದು ನವದೆಹಲಿಯಲ್ಲಿ ಸಭೆ ನಡೆಸಲಿದೆ.

ವಿಶೇಷವಾಗಿ ಬಿಜೆಪಿ 2024 ರ ಲೋಕಸಭಾ ಚುನಾವಣೆಯ ತಂತ್ರಗಾರಿಕೆಯನ್ನು ಆದರಿಸಿ ಈ ಸಭೆ ನಡೆಯಲಿದ್ದು ಮೈತ್ರಿಕೂಟದಲ್ಲಿ ಒಮ್ಮತಕ್ಕೆ ಬರುವ ಬಗ್ಗೆ ಚರ್ಚಿಸಲು ಚಿಂತನೆ ನಡೆಸಿವೆ.

ಇಂಡಿಯಾ ಬ್ಲಾಕ್ ಸಭೆಯಲ್ಲಿ ಅಪ್‌ಡೇಟ್ ಮಾಡಲಾದ ಟಾಪ್ 10 ಅಂಶಗಳು ಇಲ್ಲಿವೆ
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅಶೋಕ ಹೋಟೆಲ್‌ನಲ್ಲಿ INDIA ಬ್ಲಾಕ್ ಸಭೆ ನಡೆಯಲಿದೆ. ಇದು ದೇಶದ ವಿರೋಧ ಪಕ್ಷಗಳ ಬಣದ ನಾಲ್ಕನೇ ಸಭೆಯಾಗಿದೆ. ಹಿಂದಿನ ಸಭೆಯು ಜೂನ್ 23 (ಪಾಟ್ನಾದಲ್ಲಿ), ಜುಲೈ 17-18 (ಬೆಂಗಳೂರಿನಲ್ಲಿ), ಮತ್ತು ಆಗಸ್ಟ್ 31-ಸೆಪ್ಟೆಂಬರ್ 1 (ಮುಂಬೈನಲ್ಲಿ) ನಡೆದಿತ್ತು.

INDIA ಮೈತ್ರಿಕೂಟದ ನಾಯಕರು ಹೇಗೆ 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಸೋಲಿಸಬೇಕು ಎಂಬುದರ ಕುರಿತು ಕಾರ್ಯತಂತ್ರಗಳ ಬಗ್ಗೆ ಪ್ರಸ್ತಾಪಕ್ಕೆ ಬರಲಿದೆ.

2024 ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯ ಕುರಿತು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು 2024 ರ ಸಾರ್ವತ್ರಿಕ ಚುನಾವಣೆಯ ನಂತರ INDiA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆದಾಗ್ಯೂ, ಈ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒಳಗೊಂಡಿರುವ ಪೋಸ್ಟರ್‌ಗಳನ್ನು ಪಾಟ್ನಾದಲ್ಲಿ ಹಾಕಲಾಗಿತ್ತು. ಅವರನ್ನು INDIAಬ್ಲಾಕ್‌ನ ಮೈತ್ರಿಕೂಟದ ಪ್ರಧಾನಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಲಾಗಿದೆ. ಹೀಗಾಗಿ ಈ ಬಾರಿ ಪ್ರಧಾನಿ ಅಭ್ಯರ್ಥಿ ವಿಚಾರವಾಗಿಯೂ ಮಹತ್ವದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಸಾಕಷ್ಟು ಪ್ರಬಲವಾಗಿವೆ. “ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲಿ ಇರುತ್ತವೆಯೋ ಅಲ್ಲಿ ಬಿಜೆಪಿ ಅಸ್ತಿತ್ವ ಇಲ್ಲದಾಗಿದೆ. ಹೆಚ್ಚಿನ ಪ್ರಾದೇಶಿಕ ಪಕ್ಷಗಳು INDIA ಬಣದಲ್ಲಿವೆ,” ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು INDIA ಮೈತ್ರಿಕೂಟವನ್ನು ಯಶಸ್ವಿಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ದೆಹಲಿ ಕ್ಯಾಬಿನೆಟ್ ಸಚಿವೆ ಮತ್ತು ಹಿರಿಯ AAP ನಾಯಕ ಅತಿಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. .

INDIA ಬ್ಲಾಕ್ ಸಭೆಯಲ್ಲಿ, ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಇಂದಿನ ಸಭೆಯು ಫಲಿತಾಂಶ ಆಧಾರಿತವಾಗಿರುತ್ತದೆ ಎಂದು ಆಶಿಸಿದ್ದಾರೆ. ಮೈತ್ರಿಕೂಟವು ಬಿಜೆಪಿಯ ಎದುರು ಹೋರಾಡಬಹುದು ಮತ್ತು ಸೋಲಿಸಬಹುದು ಎಂಬ ಸಂದೇಶವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಇನ್ನು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ “ಕೇಂದ್ರ ಸರ್ಕಾರದ ಸರ್ವಾಧಿಕಾರಿ ವರ್ತನೆಯ ಬಗ್ಗೆ ಈ ಸಭೆ ಇನ್ನಷ್ಟು ಮಹತ್ವದ್ದಾಗಿದೆ … ಅವರು ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಜನರಿಗೆ ತಿಳಿಸುವುದು ಮುಖ್ಯ. ಈ

ಬಗ್ಗೆಯೂ ನಾವು ಚಿಂತನೆ ನಡೆಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಎಸಗಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ವಿರೋಧ ಪಕ್ಷಗಳು ಇಂದಿನ ಸಭೆಯಲ್ಲಿ ಕ್ರಮಕೈಗೊಳ್ಳಲಿವೆ ಎಂದು ಜೆಎಂಎಂ ಸಂಸದ ಮಹುವಾ ಮಜಿ ಹೇಳಿದ್ದಾರೆ. “ಗೆಲುವಿಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಸೀಟು ಹಂಚಿಕೆ ಮಾಡಬೇಕು,” ಎಂದು ಮಹುವಾ ಮಜಿ ತಿಳಿಸಿದ್ದಾರೆ.

ಇವು INDiA ಮೈತ್ರಿಕೂಟದ ಇಂದಿನ ಸಭೆಯಲ್ಲಿ ವಿವಿಧ ಮಿತ್ರ ಪಕ್ಷಗಳು ಅಭಿಪ್ರಾಯ ಮಂಡಿಸಲಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ಪ್ರಮುಖ ವಿಚಾರಗಳು ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು