ಶಿವಮೊಗ್ಗ: ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ದಾಖಲಿಸಿಕೊಳ್ಳಲು ಆಕೆಯ ಪೋಷಕರಿಂದ ಲಂಚ ಸ್ವೀಕರಿಸುತ್ತಿದ್ದ ವಸತಿ ಶಾಲೆಯ ಪ್ರಿನ್ಸಿಪಾಲ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ (shivamogga) ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಹುಣಸೆಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ (Kittur Rani Channamma Residential School) ಪ್ರಿನ್ಸಿಪಾಲ್ ನಾಮದೇವ ಬಂಧಿತ ಆರೋಪಿಯಾಗಿದ್ದಾರೆ. ಬಾಲಕಿಯೊಬ್ಬಳನ್ನು 7ನೇ ತರಗತಿಗೆ ಈ ವಸತಿ ಶಾಲೆಗೆ ಸೇರಿಸಲು ಪೋಷಕರು ಮುಂದಾಗಿದ್ದರು. ಆದರೆ, ಅಡ್ಮಿಷನ್ ಮಾಡಿಕೊಡಲು ಪ್ರಿನ್ಸಿಪಾಲ್ ನಾಮದೇವ ಅವರು ₹20,000 ಹಣ ನೀಡುವಂತೆ ಪೋಷಕರಿಗೆ ಒತ್ತಾಯಿಸಿದ್ದರು. ಶಾಲೆಗೆ ‘ಡ್ರಮ್ ಸೆಟ್’ ಖರೀದಿಸಬೇಕಿದೆ ಎಂಬ ನೆಪವೊಡ್ಡಿ ಅವರು ಈ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಪ್ರಿನ್ಸಿಪಾಲ್ ನಡೆಯಿಂದ ಬೇಸತ್ತ ಬಾಲಕಿಯ ಪೋಷಕರು ಈ ಕುರಿತು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಜುಲೈ 20ರ ಸೋಮವಾರದಂದು ನಿಗದಿಪಡಿಸಿದಂತೆ ಮೊದಲ ಕಂತಿನ ರೂಪದಲ್ಲಿ ₹10,000 ಲಂಚದ ಹಣವನ್ನು ಪೋಷಕರಿಂದ ಪ್ರಿನ್ಸಿಪಾಲ್ ಸ್ವೀಕರಿಸುತ್ತಿದ್ದ. ಈ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಹಣದ ಸಮೇತ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಇನ್ಸ್‌ಪೆಕ್ಟರ್ ರುದ್ರೇಶ್ ನೇತೃತ್ವದ ತಂಡದಿಂದ ದಾಳಿ ನಡೆದಿತ್ತು.
ಆರೋಪಿ ಪ್ರಿನ್ಸಿಪಾಲ್ ನಾಮದೇವ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
