Tuesday, July 15, 2025

ಸತ್ಯ | ನ್ಯಾಯ |ಧರ್ಮ

ದಾಂಪತ್ಯ ವಿವಾದಗಳಲ್ಲಿ ರಹಸ್ಯ ಧ್ವನಿ ಮುದ್ರಣಗಳನ್ನು ಸಾಕ್ಷಿಯಾಗಿ ಬಳಸಬಹುದು: ಸುಪ್ರೀಂ ಕೋರ್ಟ್

ದೆಹಲಿ: ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ ದಂಪತಿಗಳ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣಗಳನ್ನು ಸಾಕ್ಷಿಯಾಗಿ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಈ ಧ್ವನಿಮುದ್ರಣಗಳು ಅವರ ವಿವಾಹವು ಬಲವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಈ ವಿಷಯವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಅದು ರದ್ದುಗೊಳಿಸಿದೆ.

ಪಂಜಾಬ್‌ನ ಭಟಿಂಡಾದ ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ಪತ್ನಿ ತನ್ನೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದಾಳೆ ಎಂದು ಅವರು ಆರೋಪಿಸಿದ್ದರು.

ಈ ಸಂದರ್ಭದಲ್ಲಿ ಅವರು ತಮ್ಮ ನಡುವಿನ ಫೋನ್ ಸಂಭಾಷಣೆಗಳ ದಾಖಲೆಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದರು. ಕೋರ್ಟ್ ಇವುಗಳನ್ನು ಪರಿಗಣನೆಗೆ ತೆಗೆದುಕೊಂಡು ಪತಿಯ ಪರವಾಗಿ ತೀರ್ಪು ನೀಡಿತ್ತು. ಆದರೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ತನ್ನ ಪತಿಯ ಪರವಾಗಿ ಕುಟುಂಬ ನ್ಯಾಯಾಲಯದ ತೀರ್ಪನ್ನು ಪತ್ನಿ ಪ್ರಶ್ನಿಸಿದರು.

ನಮ್ಮ ನಡುವಿನ ಸಂಭಾಷಣೆಗಳನ್ನು ನನ್ನ ಒಪ್ಪಿಗೆಯಿಲ್ಲದೆ ಮತ್ತು ಗೊತ್ತಾಗದಂತೆ ರೆಕಾರ್ಡ್ ಮಾಡಲಾಗಿದೆ ಮತ್ತು ಅವುಗಳನ್ನು ಪುರಾವೆಯಾಗಿ ಪರಿಗಣಿಸಿದರೆ, ಅದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ವಾದಿಸಿದರು. ಹೈಕೋರ್ಟ್ ಅವರ ಮನವಿಯನ್ನು ಒಪ್ಪಿದ ನಂತರ ಪತಿ ಸುಪ್ರೀಂ ಕೋರ್ಟ್ ಸಂಪರ್ಕಿಸಿದರು.

ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸೋಮವಾರ ಈ ಕುರಿತು ಒಂದಷ್ಟು ಮುಖ್ಯ ಹೇಳಿಕೆಗಳನ್ನು ನೀಡಿತು. “ಗಂಡ ಮತ್ತು ಹೆಂಡತಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣಗಳನ್ನು ಸಾಕ್ಷಿಯಾಗಿ ಪರಿಗಣಿಸಿದರೆ, ವೈವಾಹಿಕ ಸಂಬಂಧಗಳಿಗೆ ಧಕ್ಕೆ ಬರುತ್ತದೆ ಮತ್ತು ಅದು ಸಂಗಾತಿಯ ಕಣ್ಗಾವಲಿಗೆ ಪ್ರೋತ್ಸಾಹಿಸುತ್ತದೆ ಎಂದು ಕೆಲವರು ವಾದಿಸುತ್ತಾರೆ. ಆದರೂ, ಈ ವಾದವು ಸಮರ್ಥನೀಯ ಎಂದು ನಮಗೆ ಎನ್ನಿಸುತ್ತಿಲ್ಲ.

ಅವರು ಪರಸ್ಪರರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ಪರಿಸ್ಥಿತಿಯಲ್ಲಿರುವುದನ್ನು ನೋಡಿದಾಗ, ಅವರಿಬ್ಬರ ವೈವಾಹಿಕ ಸಂಬಂಧ ಎಷ್ಟು ಹದಗೆಟ್ಟಿದೆ ಎಂಬುದು ಅರ್ಥವಾಗುತ್ತದೆ. ಆದ್ದರಿಂದ, ಆ ಧ್ವನಿಮುದ್ರಣಗಳನ್ನು ಸಾಕ್ಷಿಯಾಗಿ ಪರಿಗಣಿಸಬಹುದು” ಎಂದು ಪೀಠ ಸ್ಪಷ್ಟಪಡಿಸಿತು.

ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ವಿಚ್ಛೇದನ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸಬಹುದು ಎಂದು ಕೋರ್ಟ್‌ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page