ಬೆಂಗಳೂರು ಸೇರಿದಂತೆ ರಾಜ್ಯದ ಸಂಚಾರ ದಟ್ಟಣೆ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಸಂಚಾರ ನಿಯಮಗಳನ್ನು ಪದೇಪದೇ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿ (ಡಿಎಲ್) ಅಮಾನತುಗೊಳಿಸಲು ‘ಪಾಯಿಂಟ್ ಆಧಾರಿತ ವ್ಯವಸ್ಥೆ’ (Point-based system) ಜಾರಿಗೊಳಿಸುವುದು, ಇಂತಹ ಉಲ್ಲಂಘನೆದಾರರಿಗೆ ಪರವಾನಗಿ ರದ್ದುಪಡಿಸುವ ಮುನ್ನ ಕಡ್ಡಾಯ ತರಬೇತಿ ನೀಡುವುದು ಹಾಗೂ ಸಮುದಾಯ ಸೇವೆ (Community Service) ಶಿಕ್ಷೆಯನ್ನು ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಜೊತೆಗೆ, ನಿರಂತರವಾಗಿ ನಿಯಮ ಮುರಿಯುವವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಬ್ಲ್ಯಾಕ್ಲಿಸ್ಟ್ ಮಾಡುವ ಕಠಿಣ ಕ್ರಮಗಳ ಪ್ರಸ್ತಾಪ ಮುಂದಿಡಲಾಗಿದೆ.
ವಾಹನ ದಟ್ಟಣೆ ತಗ್ಗಿಸಲು ರಾಜ್ಯಮಟ್ಟದಲ್ಲಿ ಅಧಿಕೃತ ‘ಕಾರ್ಪೂಲಿಂಗ್ ಮತ್ತು ಶೇರ್ಡ್ ರೈಡ್’ ನೀತಿ ರೂಪಿಸುವುದು, ರೈಡ್ ಅಗ್ರಿಗೇಟರ್ಗಳಿಗೆ ‘ಒಂದು ನಗರ, ಒಂದೇ ದರ’ (One City, One Fare) ಮಾದರಿ ತರುವುದು ಹಾಗೂ ಕೇಂದ್ರದ ಇತ್ತೀಚಿನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಅಗ್ರಿಗೇಟರ್ ನಿಯಮಾವಳಿಗಳನ್ನು ನವೀಕರಿಸುವ ಕುರಿತು ಸಮಾಲೋಚನೆ ನಡೆದಿದೆ. ಮೆಟ್ರೋ ಮತ್ತಿತರ ಸಾರ್ವಜನಿಕ ಸಾರಿಗೆಗೆ ಪೂರಕವಾಗಿ ಕೊನೆಯ ಹಂತದ ಸಂಪರ್ಕಕ್ಕಾಗಿ (last-mile connectivity) ಶೇರ್ಡ್ ಆಟೋಗಳ ನಿಯಂತ್ರಣ ಮತ್ತು ಉತ್ತೇಜನಕ್ಕೂ ಒತ್ತು ನೀಡಲಾಗಿದೆ.
ಇದಲ್ಲದೆ, ನೋಂದಣಿಯಾಗದ ಇ-ಬೈಕ್ಗಳ ವಿರುದ್ಧ ಕಠಿಣ ಕ್ರಮ, ಬೆಂಗಳೂರು ಟ್ರಾಫಿಕ್ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ಸಾರಥಿ (Sarathi) ತಂತ್ರಾಂಶ ಸಂಯೋಜನೆ, ಪಿಯುಸಿ (ಮಾಲಿನ್ಯ ತಪಾಸಣೆ) ಕಡ್ಡಾಯಗೊಳಿಸುವಿಕೆ, ಹಾಗೂ ಅಪಾಯಕಾರಿ ಹಾಫ್ ಹೆಲ್ಮೆಟ್ಗಳು, ಅತಿಯಾದ ಶಬ್ದದ ಹಾರನ್ಗಳು, ಮಾರ್ಪಡಿಸಿದ ಸೈಲೆನ್ಸರ್ಗಳು ಮತ್ತು ಹೊಳೆಯುವ ಎಲ್ಇಡಿ ಲೈಟ್ಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಔಟರ್ ರಿಂಗ್ ರೋಡ್ (ORR) ಭಾಗದ ಟ್ರಾಫಿಕ್ ಸಮಸ್ಯೆ ನಿವಾರಣೆ ಹಾಗೂ ವಾಹನ ಸ್ಕ್ರ್ಯಾಪಿಂಗ್ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ವಿಸ್ತೃತ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
