Saturday, June 15, 2024

ಸತ್ಯ | ನ್ಯಾಯ |ಧರ್ಮ

 ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ: ಅತಿಶಿ, ಸೌರಭ್ ಸೇರಿ ಹಲವರು ಪೊಲೀಸ್‌ ವಶಕ್ಕೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷವು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ದೆಹಲಿಯ ಎಎಪಿ ಮುಖಂಡರು ಮತ್ತು ಬೆಂಬಲಿಗರು ಆಪ್ ಮತ್ತು ಬಿಜೆಪಿ ಪ್ರಧಾನ ಕಛೇರಿ ಬಳಿಯಿರುವ ಐಟಿಒ ಬಳಿ  ಬೆಳಗ್ಗೆಯಿಂದಲೇ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ, ಈ ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ 144 ಸೆಕ್ಷನ್ ಕರ್ಪ್ಯೂ ಜಾರಿ ಮಾಡಲಾಗಿದೆ. ಪ್ರತಿಭಟನಾ ನಿರತ ಸಚಿವರಾದ ಸೌರಭ್‌ ಭಾರದ್ವಾಜ್‌, ಅತಿಶಿ ಸೇರಿದಂತೆ ಹಲವು ಆಪ್‌ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.

ಎಎಪಿ ಬೆಂಬಲಿಗರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಪ್ರಧಾನ ಕಚೇರಿ ಇರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಸಂಚಾರಕ್ಕೆ ತಡೆ ನೀಡಿದ್ದಾರೆ.

ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಕೇಜ್ರಿವಾಲ್‌:  ನಾಟಕೀಯ ಬೆಳವಣಿಗೆಯೊಂದರಲ್ಲಿ ತಮ್ಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದಾರೆ.
ಕಳೆದ ವಾರ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಆರ್‌ ಎಸ್ ನಾಯಕಿ ಕೆ.ಕವಿತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ವಿಶೇಷ ಪೀಠವು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ
ಕೇಜ್ರಿವಾಲ್ ಅವರು ಕೆಳ ಹಂತದ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಾಮೀನು ಸೇರಿದಂತೆ ಯಾವುದೇ ಪರಿಹಾರಕ್ಕೆ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಕೆ.ಕವಿತಾ ಅವರಿಗೆ ವಿಶೇಷ ಪೀಠವು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು