Saturday, August 23, 2025

ಸತ್ಯ | ನ್ಯಾಯ |ಧರ್ಮ

ಶಾಸಕ ಶಿವಲಿಂಗೇಗೌಡರಿಂದ ಹಿಂದುಳಿದ ಜಾತಿಗಳಿಗೆ ಅವಮಾನ ಪ್ರತಿಭಟನೆ ಎಚ್ಚರಿಕೆ – ಜವರಪ್ಪ

ಹಾಸನ : ಹಿಂದುಳಿದ ಸಮುದಾಯಗಳಿಗೆ ಸರಕಾರದ ಸೌಲಭ್ಯಗಳನ್ನು ಅಹಿಂದ ನಾಯಕರಾದ ಸಿದ್ದರಾಮಯ್ಯ ಒತ್ತು ಕೊಡುತ್ತಿರುವುದನ್ನ ಸಹಿಸಿಕೊಳ್ಳದ ಶಾಸಕ ಶಿವಲಿಂಗೇಗೌಡರು ವಿಧಾನಸೌದ ಸಭೆಯಲ್ಲಿ ತಮ್ಮ ನಾಲಿಗೆ ಹರಿಬಿಟ್ಟು ಆ ಸೌಲಭ್ಯ ನಮಗೂ ಕೊಡಿ ಎಂದು ಸರಕಾರವನ್ನು ಟೀಕಿಸಿ ಹಿಂದುಳಿದ ಜಾತಿಗಳಿಗೆ ಅವಮಾನ ಮಾಡಲಾಗಿದೆ ಎಂದು ಯಾದವ ಸಮಾಜದ ಮುಖಂಡರು ಹಾಗೂ ಅರಸೀಕೆರೆ ತಾಲೂಕು ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಜವರಪ್ಪ ಆಕ್ರೋಶವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅಧಿವೇಶನದಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಾನು ಕುರಿಗಾಹಿ ಕುಟುಂಬದಲ್ಲಿ ಹುಟ್ಟಿದ್ದೇನೆ. ನಮಗೂ ಹಕ್ಕುಗಳನ್ನು ನೀಡಿ ಎಂದು ಹೇಳುವ ಮೂಲಕ ನಮ್ಮ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ಹೂನ್ನಾರ ನಡೆಸಿದ್ದಾರೆ. ಅಧಿವೇಶನದ ವೇಳೆ ಕುರಿಗಾಹಿಗಳಿಗೆ ಭದ್ರತೆ ಹಾಗೂ ಇನ್ನಷ್ಟು ಹಕ್ಕುಗಳನ್ನು ಒದಗಿಸುವ ಸಲುವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿವನಂಗೆ ಗೌಡರು ಈ ಮಾತನ್ನು ಹೇಳಿರುವುದು ನಮಗೆ ಬೇಸರ ತಂದಿದೆ. ತುಂಬಿದ ಸದನದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಯಾದವ ಸಮಾಜ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುರಿಗಳನ್ನು ಮೇಯಿಸಲು ಮಳೆ ಬಿಸಿಲೆನ್ನದೆ ಊರಿಂದ ಊರಿಗೆ ಓಡಾಡುವಾಗ ನಮಗೆ ಯಾವುದೇ ಭದ್ರತೆ ಇಲ್ಲ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಕುರಿಗಾಹಿಗಳಿಗೆ ಒಂದಷ್ಟು ಭದ್ರತೆ ಒದಗಿಸಿದ್ದರು. ಇದೀಗ ಇನ್ನಷ್ಟು ಭದ್ರತೆ ಒದಗಿಸಲು ಯೋಜನೆ ರೂಪಿಸುವಾಗಲೇ ಶಿವಲಿಂಗೇಗೌಡರು ಕಡ್ಡಿ ಪಡಿಸುತ್ತಿರುವುದು ಖಂಡನೀಯ ಎಂದರು. ಅರಸೀಕೆರೆ ಕ್ಷೇತ್ರದಲ್ಲಿ ತೀರ ಜಾತಿ ರಾಜಕಾರಣ ಮಾಡುವ ಶಾಸಕರ ಪೈಕಿ ಶಿವಲಿಂಗೇಗೌಡ ಮುಂಚೂಣಿಯಲ್ಲಿದ್ದಾರೆ. ಇತರ ಸಮುದಾಯಗಳಿಗಿಂತ ಹೆಚ್ಚು ಮತಗಳನ್ನು ನೀಡಿ ಅವರನ್ನು ಯಾದವ ಸಮಾಜದ ಮತದಾರರು ಅವರಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಆದರೆ ಕನಿಷ್ಠ ಕೃತಜ್ಞತೆಯು ಇಲ್ಲದ ಶಿವಲಿಂಗೇಗೌಡರು ಸಮುದಾಯದ ಮೇಲೆ ದ್ವೇಷ ಸಾಧಿಸುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ ಎಂದು ಪ್ರಶ್ನೆ ಮಾಡಿದರು.


ತಮ್ಮ ಹಿಂಬಾಲಕರಿಗೆ ಮಣೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಕೆಲಸವನ್ನು ಮಾಡಿದ್ದು, ಅಧಿಕಾರಿಗಳ ವರ್ಗಾವಣೆ ದಂದೆಯಲ್ಲಿ ಜಿಲ್ಲೆ ಒಳಗೆ ಹಣ ವಸೂಲಿ ಮಾಡಲು ಇಳಿದಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೇ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕೂಡಲೇ ಶಿವಲಿಂಗೇಗೌಡರು ಯಾದವ ಸಮುದಾಯದ ಕ್ಷಮೆ ಯಾಚಿಸಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಹಕ್ಕುಗಳಿಗೆ ಬೆಂಬಲ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ನಿವಾಸದ ಮುಂದೆಯೇ ಕುರಿ ಕಂಬಳಿ ಹಾಕಿಕೊಂಡು ಸಮುದಾಯದ ಜನಾಂಗ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಇದೆ ವೇಳೆ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಅಜಪ್ಪ, ಜಯರಾಮ್, ರಂಗಸ್ವಾಮಿ, ರಘು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page