Saturday, February 7, 2026

ಸತ್ಯ | ನ್ಯಾಯ |ಧರ್ಮ

ಮತ್ತೆ ಭುಗಿಲೆದ್ದ ಮಣಿಪುರ: ಚುರಾಚಂದ್‌ಪುರದಲ್ಲಿ ಭದ್ರತಾ ಪಡೆಗಳ ಮೇಲೆ ಪ್ರತಿಭಟನಾಕಾರರ ದಾಳಿ

ಇಂಫಾಲ: ಮಣಿಪುರ ಮತ್ತೆ ಹೊತ್ತಿ ಉರಿದಿದೆ. ನೂತನ ಉಪಮುಖ್ಯಮಂತ್ರಿಗಳಾಗಿ ನೆಂಚಾ ಕಿಪ್‌ಜೆನ್ ಮತ್ತು ಲೋಸಿ ದಿಖೋ ಪ್ರಮಾಣ ವಚನ ಸ್ವೀಕರಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದ ಬಳಿಕ, ಗುರುವಾರ ಸಂಜೆ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ತುಯಿಬಾಂಗ್ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ನೂರಾರು ಯುವ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯನ್ನು ಬಲವಂತವಾಗಿ ಅವರ ಬ್ಯಾರಕ್‌ಗಳಿಗೆ ಕಳುಹಿಸಲು ಪ್ರಯತ್ನಿಸಿದರು. ಭದ್ರತಾ ಪಡೆಗಳು ಇದಕ್ಕೆ ಪ್ರತಿರೋಧ ಒಡ್ಡಿದಾಗ, ಪ್ರತಿಭಟನಾಕಾರರು ಅವರ ಮೇಲೆ ಕಲ್ಲು ತೂರಾಟ ನಡೆಸಿದರು.

ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಯಿತು. ಚುರಾಚಂದ್‌ಪುರ ಜಿಲ್ಲೆಯ ಕುಕಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶುಕ್ರವಾರ 6 ರಿಂದ 12 ಗಂಟೆಗಳ ಬಂದ್‌ಗೆ ಏಳು ಕುಕಿ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ಇದೇ ವೇಳೆ, ನೆಂಚಾ ಕಿಪ್‌ಜೆನ್ ಅವರನ್ನು ಹತ್ಯೆ ಮಾಡಿದರೆ 20 ಲಕ್ಷ ರೂ. ಹಾಗೂ ಶಾಸಕರಾದ ಎಲ್.ಎಂ. ಖೌತೆ, ಎನ್. ಸೇನಾಪತಿ ಅವರನ್ನು ಹತ್ಯೆ ಮಾಡಿದರೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಕೆಲವು ಗುಂಪುಗಳು ಘೋಷಿಸಿವೆ.

ನೆಂಚಾ ಮತ್ತು ಇತರ ಮೂವರ ವಿರುದ್ಧ ಪ್ರತಿಭಟನೆ ಹೊಸದಾಗಿ ರಚನೆಯಾದ ಮಣಿಪುರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೆಂಚಾ ಕಿಪ್‌ಜೆನ್ ಪ್ರಮಾಣ ವಚನ ಸ್ವೀಕರಿಸಿರುವುದು ಕುಕಿ ಸಮುದಾಯದಲ್ಲಿ ಒಡಕು ಮೂಡಿಸಿದೆ. ಸರ್ಕಾರಕ್ಕೆ ಸೇರಿದ ಮೂವರು ಕುಕಿ ಶಾಸಕರು ತಮ್ಮ ಸಮುದಾಯಕ್ಕೆ ದ್ರೋಹ ಬಗೆದು ಮೈತೇಯಿ ಸಮುದಾಯದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಆ ಮೂವರನ್ನೂ ಸಾಮಾಜಿಕವಾಗಿ ಬಹಿಷ್ಕರಿಸುವುದಾಗಿ ಸಂಸ್ಥೆಯೊಂದು ಘೋಷಿಸಿದೆ. ಕುಕಿ-ಜೋ-ಮಿ ಸಮುದಾಯಕ್ಕೆ ಸೇರಿದ ಮೂವರು ಶಾಸಕರು ಮಣಿಪುರ ಸರ್ಕಾರವನ್ನು ಸೇರಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page