ಯುವತಿ ಕಿರುಚಾಟ ಕೇಳಿ ಬೆನ್ನಟ್ಟಿದ ಸಾರ್ವಜನಿಕರು; ಬಿಹಾರಿ ಮೂಲದ ಯುವಕರು ಸೆರೆಗೆ

ಬೆಂಗಳೂರು: ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲಾಗುತ್ತಿದೆ ಎಂಬ ಅನುಮಾನದಿಂದ ಸಾರ್ವಜನಿಕರು ಕಾರನ್ನು ಬೆನ್ನಟ್ಟಿ, ಅದರಲ್ಲಿದ್ದ ಕೆಲ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಂಡೈ ವೆನ್ಯೂ ಕಾರಿನಲ್ಲಿ ದಾಸರಹಳ್ಳಿ ಕಡೆಯಿಂದ ಯುವತಿಯನ್ನು ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿದ್ದ ಯುವತಿ ಕಿರುಚಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಅನುಮಾನಗೊಂಡು ವಾಹನವನ್ನು ತಡೆಯಲು ಮುಂದಾಗಿದ್ದಾರೆ.

ಸಾರ್ವಜನಿಕರು ಹಿಂಬಾಲಿಸುತ್ತಿದ್ದಂತೆ ಕಾರಿನಲ್ಲಿದ್ದವರು ವೇಗವಾಗಿ ವಾಹನ ಚಲಾಯಿಸಿಕೊಂಡು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಾರು ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ, ಕಾರನ್ನು ತಡೆಯಲು ಮುಂದಾದ ಸಾರ್ವಜನಿಕರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಮಾರಕಾಸ್ತ್ರ ಬಳಸಿ ಹಲ್ಲೆಗೆ ಮುಂದಾಗಿದ್ದರು ಎನ್ನುವ ಮಾಹಿತಿಯೂ ಪೊಲೀಸರ ಪರಿಶೀಲನೆಯಲ್ಲಿದೆ.

ಘಟನೆಯಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು ಕಾರನ್ನು ಬೆನ್ನಟ್ಟಿ ಆರೋಪಿಗಳನ್ನು ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ಪಡೆದ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಯುವತಿ ಹಾಗೂ ಕಾರಿನಲ್ಲಿದ್ದ ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಯಂತೆ ಆರೋಪಿಗಳು ಬಿಹಾರ ಮೂಲದವರು ಎನ್ನಲಾಗಿದ್ದು, ವಿಜಯನಗರ ಎಸಿಪಿ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.

ಪ್ರತ್ಯಕ್ಷದರ್ಶಿಗಳಾದ ದೀಪಕ್ ಮತ್ತು ಕಿರಣ್ ಅವರು, ಯುವತಿಯನ್ನು ಕಟ್ಟಡವೊಂದರಿಂದ ಕರೆದುಕೊಂಡು ಬರುತ್ತಿದ್ದಾಗ ಆಕೆ ಕಿರುಚಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಲು ಮುಂದಾಗಿದ್ದಾಗಿ ತಿಳಿಸಿದ್ದಾರೆ. ಬಳಿಕ ಕಾರಿನಲ್ಲಿದ್ದವರು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ತಾವು ಹಿಂಬಾಲಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಗಿ ಹೇಳಿದ್ದಾರೆ.

ಇನ್ನು ಯುವತಿ ಹಾಗೂ ಆರೋಪಿಗಳ ನಡುವಿನ ಸಂಬಂಧವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಯುವತಿಯನ್ನು ಅಪಹರಿಸಲಾಗಿತ್ತೇ ಅಥವಾ ಬೇರೆ ಕಾರಣಕ್ಕಾಗಿ ಆಕೆಯನ್ನು ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಘಟನೆಯ ನಿಖರ ಹಿನ್ನೆಲೆ ತಿಳಿದುಬರಲಿದೆ.

Related Articles

ಇತ್ತೀಚಿನ ಸುದ್ದಿಗಳು