Monday, March 24, 2025

ಸತ್ಯ | ನ್ಯಾಯ |ಧರ್ಮ

ರಾಷ್ಟ್ರ ಮಟ್ಟದ ಸುದ್ದಿಯಾಗುವತ್ತ ಕರ್ನಾಟಕ ಹನಿಟ್ರಾಪ್ ಪ್ರಕರಣ; ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಇಲ್ಲಿಯವರೆಗೂ ಕರ್ನಾಟಕದ ವಿಧಾನಸೌಧದ ಮೊಗಸಾಲೆಯಲ್ಲೇ ಗಿರಕಿ ಹೊಡೆಯುತ್ತಿದ್ದ ‘ಹನಿಟ್ರಾಪ್ ಕಹಾನಿ’ ಈಗ ರಾಷ್ಟ್ರ ಮಟ್ಟದ ಸುದ್ದಿ ಆಗುವತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ರಾಜಕಾರಣಿಗಳ ಹನಿಟ್ರಾಪ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕರ್ನಾಟಕದ ರಾಜಕಾರಣಿಗಳಿಗೆ ನಡೆಸಿದ್ದಾರೆ ಎನ್ನಲಾದ ಹನಿಟ್ರಾಪ್ ಪ್ರಕರಣ ರಾಜ್ಯಕ್ಕೆ ಮತ್ತು ರಾಜಕೀಯ ಕ್ಷೇತ್ರಕ್ಕೆ ತೀವ್ರ ಮುಜುಗರ ಉಂಟು ಮಾಡುವ ನಡೆಯಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಈ ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅರ್ಜಿದಾರರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಹೆಸರೂ ಕೂಡ ತಳುಕು ಹಾಕಿಕೊಂಡಿರುವುದನ್ನು ಅರ್ಜಿದಾರರು ವಿಚಾರಣೆ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಕೂಡ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಗೆ ಸೂಚಿಸಿದೆ.

ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್​ನಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ಈ ಹನಿಟ್ರಾಪ್ ವಿವಾದ ಭುಗಿಲೆದ್ದಿತ್ತು. ಇದರ ಜೊತೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ 48 ನಾಯಕರು ಇದೇ ರೀತಿಯ ಟ್ರ್ಯಾಪ್​ಗೆ ಬಲಿಯಾಗಿದ್ದಾರೆ ಎಂದು ಅವರು ಆರೋಪಿಸಿದರು. ಅದಾದ ನಂತರ ಸಚಿವ ಸತೀಶ್ ಜಾರಕಿಹೊಳಿ ಸಹ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಇದರ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲೇಬೇಕು.. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ನಡೆದ ಹನಿ-ಟ್ರ್ಯಾಪ್ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಸಿಲುಕಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದೆದುರು ತರಲಾಗಿದೆ. ವಿಷಯವನ್ನು ಇಂದು ಅಥವಾ ನಾಳೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಜೆಐ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page