ರಾಹುಲ್ ಗಾಂಧಿ ಪೌರತ್ವ ರದ್ದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

ನವದೆಹಲಿ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪೌರತ್ವ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (ಲಕ್ನೋ ಪೀಠ) ವಜಾಗೊಳಿಸಿ ಆದೇಶಿಸಿದೆ.ರಾಹುಲ್ ಗಾಂಧಿಯವರ ಪೌರತ್ವವನ್ನು ಪ್ರಶ್ನಿಸುವ ಅರ್ಜಿಯನ್ನು ಹೈಕೋರ್ಟ್‌ನ ಲಕ್ನೋ ಪೀಠ ವಿಲೇವಾರಿ ಮಾಡಿದ್ದಲ್ಲದೇ, ಅರ್ಜಿದಾರರಾದ ಎಸ್ ವಿಘ್ನೇಶ್ ಶಿಶಿರ್ ಅವರು ಇತರ ಕಾನೂನು ಪರ್ಯಾಯ ಪರಿಹಾರಗಳನ್ನ ಕಂಡುಕೊಳ್ಳಲು ಸ್ವಾತಂತ್ರ್ಯರು ಮತ್ತು ಕೇಂದ್ರ ಈ ಬಗ್ಗೆ ನಿರ್ಧರಿಸಲಿ ಎಂದು ಹೇಳಿದೆ.

ಇದು ಎರಡು ರಾಷ್ಟ್ರಗಳ ಸರ್ಕಾರಗಳ ನಡುವಿನ ವಿಷಯವಾಗಿದ್ದು, ಮೊದಲು ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಅರ್ಜಿದಾರರಿಗೆ ತಕ್ಷಣ ತಿಳಿಸುವಂತೆ ಕೇಂದ್ರಕ್ಕೆ ಹೈಕೋರ್ಟ್​ ನಿರ್ದೇಶಿಸಿದೆ. ಕೇಂದ್ರ ಸರ್ಕಾರವು ಅಂತಿಮ ನಿರ್ಧಾರಕ್ಕೆ ಬಂದ ನಂತರದಲ್ಲಿ ಮತ್ತೊಮ್ಮೆ ನ್ಯಾಯಾಲಯಕ್ಕೆ ಬರಬಹುದು ಎಂದೂ ಅರ್ಜಿದಾರರಿಗೆ ಕೋರ್ಟ್ ಸ್ವಾತಂತ್ರ್ಯ ನೀಡಿದೆ.ನ್ಯಾ.ಎ.ಆರ್. ಮಸೂದಿ ಮತ್ತು ನ್ಯಾ.ರಾಜೀವ್ ಸಿಂಗ್ ಅವರನ್ನೊಳಗೊಂಡ ಪೀಠವು, ಅರ್ಜಿದಾರರ ದೂರನ್ನು ಪರಿಹರಿಸಲು ಕೇಂದ್ರ ಸರ್ಕಾರವು ನಿರ್ದಿಷ್ಟ ಸಮಯವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಅರ್ಜಿಯನ್ನು ಕೋರ್ಟ್​​​ನಲ್ಲಿ ಬಾಕಿ ಇಡಲು ಯಾವ ಸಮಂಜಸವಲ್ಲ ಎಂದಿರುವ ಕೋರ್ಟ್​​​​ ಅರ್ಜಿ ವಜಾಗೊಳಿಸಿದೆ.

ವಕೀಲ ಮತ್ತು ಬಿಜೆಪಿ ನಾಯಕ ವಿಘ್ನೇಶ್ ಶಿಶಿರ್ ಸಲ್ಲಿಸಿದ ಅರ್ಜಿಯಲ್ಲಿ, ರಾಹುಲ್ ಗಾಂಧಿ ಅವರು ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಭಾರತ ಎರಡರ ದ್ವಿಪೌರತ್ವವನ್ನು ಹೊಂದಿದ್ದಾರೆ. ಆದ್ದರಿಂದ ಸಂವಿಧಾನದ 84 (A) ವಿಧಿಯಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಹಿಂದಿನ ವಿಚಾರಣೆಯ ಸಮಯದಲ್ಲಿ, ಗಾಂಧಿಯವರು ಭಾರತೀಯ ಪ್ರಜೆಯೇ ಎಂಬುವುದನ್ನು ನೇರವಾಗಿ ತಿಳಿಸಲು ವಿಫಲವಾದ ಗೃಹ ಸಚಿವಾಲಯದ ವರದಿಯ ಬಗ್ಗೆ ನ್ಯಾಯಾಲಯ ಅತೃಪ್ತಿ ಹೊರಹಾಕಿದ್ದು ಗೊತ್ತೇ ಇದೆ.

Related Articles

ಇತ್ತೀಚಿನ ಸುದ್ದಿಗಳು