ನ್ಯೂಜಿಲೆಂಡ್‌ನ ಪ್ರವಾಸಿಗರನ್ನು ಮರಾಠಿಯಲ್ಲಿ ನಿಂದಿಸುವ ವೀಡಿಯೊ ವೈರಲ್ ಆಗಿದ್ದು, ಪುಣೆ ಗ್ರಾಮೀಣ ಪೊಲೀಸರು ಶನಿವಾರ ಅಪರಿಚಿತ ವ್ಯಕ್ತಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರವಾಸಿ ಲ್ಯೂಕ್ ಎಂಬವರು ಏಪ್ರಿಲ್ 6 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಿಂಹಗಢ ಕೋಟೆಗೆ ಭೇಟಿ ನೀಡಿದ ಬಗ್ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ವೀಡಿಯೊದಲ್ಲಿ ಅವರು ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿದ್ದ ಛತ್ರಪತಿ ಸಂಭಾಜಿ ನಗರದಿಂದ ಬಂದಿದ್ದೇವೆ ಎಂದು ಹೇಳುತ್ತಿದ್ದಂತೆ ಯುವಕರ ಗುಂಪಲ್ಲೊಬ್ಬ ʼಜೈ ಶ್ರೀರಾಮ್ʼ ಎಂದು ಘೋಷಣೆ ಕೂಗುತ್ತಾನೆ. ನಂತರ ಈ ಯುವಕರ ಗುಂಪು ಪ್ರವಾಸಿಗನಿಗೆ ತಿಳಿಯದ ಮರಾಠಿಯಲ್ಲಿರುವ ಅಶ್ಲೀಲ ಮತ್ತು ನಿಂದನೀಯ ಪದಗಳನ್ನು ಹೇಳಿಕೊಡುತ್ತವೆ.
ಈ ವಿಡಿಯೋ ವೈರಲ್ ಆದ ನಂತರ, ಹಲವಾರು ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಸಿಗರನ್ನು ನಿಂದನೀಯ ಭಾಷೆ ಬಳಸಿ ಮೋಸ ಮಾಡಿರುವ ಈ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶನಿವಾರ ಪೊಲೀಸರು ಈ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದು, ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ ಮತ್ತು ಪ್ರಚೋದನೆಗಾಗಿ ಶಿಕ್ಷೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಆದಾಗ್ಯೂ, ವೀಡಿಯೊದಲ್ಲಿ ಕಂಡುಬರುವವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಲ್ಯೂಕ್ ತಮ್ಮ ವೀಡಿಯೊಗೆ ಒಂದು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ: “ಹುಡುಗರು ನನಗೆ ಬೇಜಾರು ಮಾಡಿಲ್ಲ ಮತ್ತು ಎಲ್ಲರೂ ಕ್ಷಮಿಸಿ. ಜೈ ಮಹಾರಾಷ್ಟ್ರ.”
ಇದರ ನಂತರ ಮಹಾರಾಷ್ಟ್ರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಗ್ಗೆ ಇನ್ನೂ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.