ತನ್ನನ್ನು ತಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಜ್ಯೋತಿ ಸುಪರ್ಣ ಚಿಂಚೋಳಿ ಎಂಬುವವರು ತಮ್ಮ ಟ್ವಿಟರ್ ಅಕೌಂಟ್ ಮೂಲಕ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಮತ್ತು ಅವರ ಕುಟುಂಬವನ್ನು ಹೀಯಾಳಿಸಿರುವ ಘಟನೆ ನಡೆದಿದೆ.
ಕಾಂತಾರ ಸಿನಿಮಾದಲ್ಲಿ ಅಭಿನಯಿಸಿರುವ ರಿಷಬ್ ಶೆಟ್ಟಿಯವರನ್ನು ಹೊಗಳುವ ಭರದಲ್ಲಿ ಕನ್ನಡದ ಮೇರು ನಟರನ್ನು ತೆಗಳುವ ಟ್ವೀಟ್‌ಗಳನ್ನು ಈಕೆ ಹಾಕಿರುವುದು ಅನೇಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ತಾನು ಬರೆದಿರುವ ಟ್ವೀಟಿನಲ್ಲಿ ಈಕೆ ಕೆಳಗಿನಂತೆ ಬರೆದುಕೊಂಡಿದ್ದಾರೆ:
ʼಬಾಲಿವುಡ್‌ನಲ್ಲಿ ಕರಣ್ ಜೋಹಾರ್ ತರ ಕರ್ನಾಟಕದಲ್ಲಿ ಡಾ.ರಾಜ್‌ಕುಮಾರ್ ಅವರ ನೆಪೊಕಿಡ್‌ಗಳು (ಸ್ವಜನಪಕ್ಷಪಾತಿ ಮಕ್ಕಳು) ದೇವರಾಗಿಬಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಉಳೀಬೇಕು ಅಂದ್ರೆ ಇವರಿಗೆ ಸಲಾಂ ಹೊಡೀಲೇಬೇಕು. (ಇನ್ಕೊ ಸಲಾಂ ಕರ್‌ನಾ ಪಡೇಗಾ). ರಿಶಬ್ ಶೆಟ್ಟಿ ಕೂಡಾ ತಾನು ದಿವಂಗತ ಪುನೀತ್ ರಾಜ್‌ಕುಮಾರ್‌ಗೆ ಪಾತ್ರ ನಿರ್ವಹಿಸಲು ಕೇಳಿಕೊಂಡಿದ್ದೆ ಎಂದು ಹೇಳಬೇಕಾಯಿತುʼ ಎಂದಿರುವ ಈ ಮೋದಿಭಕ್ತೆ ಮುಂದುವರೆದು, ʼಪ್ರಾಮಾಣಿಕವಾಗಿ ಹೇಳಿ, ಈ ಪಾತ್ರವನ್ನು ಮಾಡಲು ಪುನೀತ್ ಕೈಯಲ್ಲಿ ಸಾದ್ಯವಿತ್ತೆ? ಬೂತ ಮತ್ತು ದೈವಾರಾಧನೆ ಸಂಸ್ಕೃತಿಯಲ್ಲಿ ರಿಷಬ್ ಶೆಟ್ಟಿಯವರ ಬೇರುಗಳು ಆಳವಾಗಿ ಇದ್ದ ಕಾರಣ ಇಂತಹ ಒಂದು ಪ್ರಭಾವಶಾಲಿ ಮತ್ತು ಡಿವೈನ್ ಅನಿಸುವ ಅಭಿನಯ ನೀಡಲು ಸಾಧ್ಯವಾಯಿತುʼ ಎಂದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಈಕೆ ರಿಷಬ್ ಶೆಟ್ಟಿ ದಶಕಗಳ ಕಾಲ ಸ್ಯಾಂಡಲ್‌ವುಡ್‌ನಲ್ಲಿ ಬಹಳ ಹೆಣಗಬೇಕಾಯಿತು. ಇಲ್ಲವಾಗಿದ್ದರೆ ಬಹಳ ಹಿಂದೆಯೇ ಅವರು ಸ್ಯಾಂಡಲ್‌ವುಡ್‌ನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರುʼ ಎಂಬ ಮಾತುಗಳನ್ನೂ ಬರೆದಿದ್ದಾರೆ.

ಈಕೆ ಬರೆದುಕೊಂಡಿರುವ ಟ್ವೀಟ್ ಲಿಂಕ್ ಇಲ್ಲಿದೆ:
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿ ಟಿ ರವಿ, ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಜ್ಯೋತಿ ಸುಪರ್ಣ ಚಿಂಚೋಳಿ ಅಕೌಂಟನ್ನು ಫಾಲೋ ಮಾಡುತ್ತಿದ್ದು ಆರೆಸ್ಸೆಸ್-ಬಿಜೆಪಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಮಹಿಳೆ ಇವರಾಗಿರುವುದು ಕಂಡುಬರುತ್ತದೆ.
ಈ ಸಂಘಪರಿವಾರದ ಕಾರ್ಯಕರ್ತೆ ಪುನೀತ್ ರಾಜ್‌ಕುಮಾರ್ ಅವರನ್ನು ಹೀಯಾಳಿಸಿರುವ ಈ ಪೋಸ್ಟಿಗೆ ಕನ್ನಡಿಗರು ವ್ಯಾಪಕವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆಲ್ಲದೇ ನಿಧನರಾಗಿರುವವರ ಕುರಿತು ಬಾಯಿಗೆ ಬಂದಂತೆ ಮಾತಾಡುವ ನಿಮಗೆ ಸಂಸ್ಕಾರ ಕಲಿಸಿದ್ದು ಯಾರು ಎಂದು ಆಕೆಯನ್ನು ಪ್ರಶ್ನಿಸಿದ್ದಾರೆ.
ಅಪ್ಪು ಎಂಟನೇ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ನಟ. ತನ್ನೊಳಗೆ ಇರುವ ಅಸಾಧಾರಣ ಪ್ರತಿಭೆಯಿಂದಲೇ ಕನ್ನಡಿಗರ ಹೃದಯವನ್ನು ಗೆದ್ದು ಅಜರಾಮರವಾಗಿ ಉಳಿದಿರುವ ನಟ ಪುನೀತ್ ರಾಜ್‌ಕುಮಾರ್. ʼಹೋಗಿ ಪುನೀತ್ ನಟಿಸಿರುವ ಆ ಸಿನಿಮಾಗಳನ್ನು ನೋಡಿಕೊಂಡು ಮಾತಾಡಿʼ ಎಂದು ಮಾತಿನ ಚಾಟಿ ಬೀಸಿದ್ದಾರೆ.
ಈ ಆರೆಸ್ಸೆಸ್ ಕಾರ್ಯಕರ್ತೆ ಕಮೆಂಟ್ ಒಂದರಲ್ಲಿ ಕನ್ನಡವನ್ನು ಹೀಗಳಿದು ಸಂಸ್ಕೃತ ಮತ್ತು ಮರಾಠಿ ಭಾಷೆಗಳನ್ನು ಹೊಗಳಿರುವ ಇಮೇಜನ್ನೂ ಹಾಕಿ ಇಂತವರ ಬಗ್ಗೆ ಕನ್ನಡಿಗರು ಎಚ್ಚರ ವಹಿಸಬೇಕು ಎಂದು ಟ್ವೀಟಿಗರು ಬರೆದಿದ್ದಾರೆ.
ಹಲವರು ರಿಷಬ್ ಶೆಟ್ಟಿಯವರು ಈಕೆ ಪುನೀತ್ ರಾಜ್‌ಕುಮಾರ್ ಕುರಿತು ಮಾಡಿರುವ ಅಹಹೇಳನದ ಕುರಿತು ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಫೋಟೋ ಕಮೆಂಟ್ ಮಾಡಿರುವ ಒಬ್ಬ ಟ್ವೀಟಿಗರು ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಪ್ರೋತ್ಸಾಹಿಸಿದ್ದ ಕುರಿತು ನೆನಪಿಸಿದ್ದಾರೆ.
ಮತ್ತೆ ಕೆಲವರು ಇದು ಕನ್ನಡಿಗರನ್ನು ವಿಭಜಿಸುವ ಸಂಘಪರಿವಾರದ ನೀತಿ. ಅಪ್ಪು ಹೆಸರಿನಲ್ಲಿ ತಮ್ಮ ತೀಟೆ ತೀರಿಸಿಕೊಳ್ಳುವ ಚೀಪ್ ಗಿಮಿಕ್ ಎಂದು ಟೀಕಿಸಿದ್ದಾರೆ.