Saturday, March 7, 2026

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾ ನಿರ್ದೋಷಿ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಡೀಗಢ : ಎರಡು ದಶಕಗಳ ಹಿಂದೆ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾನನ್ನು ನಿರ್ದೋಷಿ ಎಂದು ಘೋಷಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಈ ಹಿಂದೆ ಕೆಳ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ರಾಮ್ ರಹೀಮ್ ಪರ ವಕೀಲ ಜಿತೇಂದರ್ ಖುರಾನಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಆರೋಪಗಳು ಸಾಬೀತಾಗಿಲ್ಲ : ಹೈಕೋರ್ಟ್

2002ರಲ್ಲಿ ಹರಿಯಾಣದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಮೇಲೆ ಗುಂಡಿನ ದಾಳಿ ನಡೆದಿರುವುದು ಮತ್ತು ನಂತರ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮೃತಪಟ್ಟಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಡೇರಾ ಆಶ್ರಮದಲ್ಲಿ ನಡೆಯುತ್ತಿದ್ದ ಅಕೃತ್ಯಗಳನ್ನು ಬೆಳಕಿಗೆ ತಂದಿದ್ದಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಅಂದು ಕೇಳಿಬಂದಿದ್ದವು.

ಈ ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯವು, 2019 ರಲ್ಲಿ ಗುರ್ಮೀತ್ ರಾಮ್ ರಹೀಮ್ ಸೇರಿದಂತೆ ಇನ್ನಿತರ ಮೂವರನ್ನು ದೋಷಿಗಳೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈ ತೀರ್ಪನ್ನು ಸವಾಲು ಮಾಡಿ ಡೇರಾ ಬಾಬಾ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ನಡೆದ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಧರ್ಮಾಸನ ಅಭಿಪ್ರಾಯಪಟ್ಟಿದೆ. ಆರೋಪಗಳು ಸಾಬೀತಾಗಿಲ್ಲ ಎಂದು ಸ್ಪಷ್ಟಪಡಿಸಿ ಪ್ರಕರಣದಿಂದ ವಿಮುಕ್ತಿಗೊಳಿಸಿದೆ.

ರಾಜಕೀಯ ಹಿತಾಸಕ್ತಿಗಳಿವೆ : ಪ್ರತಿಪಕ್ಷಗಳು, ಸಿಖ್ ಧಾರ್ಮಿಕ ಸಂಸ್ಥೆಗಳು

ಈ ಹತ್ಯೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದರೂ, ರಾಮ್ ರಹೀಮ್ ಸಿಂಗ್ ಸದ್ಯಕ್ಕೆ ಜೈಲಿನಲ್ಲೇ ಮುಂದುವರಿಯಲಿದ್ದಾರೆ. ತಮ್ಮ ಆಶ್ರಮದ ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 2017 ರಲ್ಲಿ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪ್ರಸ್ತುತ ಅವರು ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ನಡುವೆ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರವು ಪದೇ ಪದೇ ಪೆರೋಲ್ ಮಂಜೂರು ಮಾಡುತ್ತಿರುವುದರ ಬಗ್ಗೆ ಕಳೆದ ಕೆಲವು ಸಮಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಚುನಾವಣಾ ಸಮಯದಲ್ಲಿಯೇ ಅವರಿಗೆ ಪೆರೋಲ್ ಸಿಗುವ ಹಿಂದೆ ರಾಜಕೀಯ ಹಿತಾಸಕ್ತಿಗಳಿವೆ ಎಂದು ಪ್ರತಿಪಕ್ಷಗಳು ಮತ್ತು ಸಿಖ್ ಧಾರ್ಮಿಕ ಸಂಸ್ಥೆಗಳು ಆರೋಪಿಸಿವೆ.

ಇಂದಿನ ತಾಜಾ ತೀರ್ಪಿಗೆ ಡೇರಾ ಬಾಬಾ ಅನುಯಾಯಿಗಳು ಸಂತಸ ವ್ಯಕ್ತಪಡಿಸುತ್ತಿದ್ದರೆ, ಪತ್ರಕರ್ತ ಛತ್ರಪತಿ ಅವರ ಕುಟುಂಬ ಸದಸ್ಯರು ಮಾತ್ರ ತೀವ್ರ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಸವಾಲು ಮಾಡಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಆಲೋಚನೆಯಲ್ಲಿ ಅವರು ಇರುವುದಾಗಿ ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page