Home ಬ್ರೇಕಿಂಗ್ ಸುದ್ದಿ ಖರ್ಗೆ ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ – ದಲಿತಪರ ಒಕ್ಕೂಟದಿಂದ ಪ್ರತಿಭಟನೆ

ಖರ್ಗೆ ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ – ದಲಿತಪರ ಒಕ್ಕೂಟದಿಂದ ಪ್ರತಿಭಟನೆ

ಹಾಸನ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಘಟನೆ ಖಂಡಿಸಿ ದಲಿತಪರ ಸಂಘಟನೆಗಳ ವತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ದಸಂಸ ಮುಖಂಡ ಕೃಷ್ಣದಾಸ್, ಮಲ್ಲಿಕಾರ್ಜುನ ಖರ್ಗೆ ಅವರು ದಲಿತರು ಎಂಬ ಕಾರಣಕ್ಕೆ ಅವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿರುವುದು ಅಸ್ಪೃಶ್ಯತೆ ಆಚರಣೆಯ ಪ್ರತೀಕವಾಗಿದೆ. ಇದು ಬಿಜೆಪಿಯ ಮನುಸ್ಮೃತಿ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಆರೋಪಿಸಿದರು.

ದೇಶದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ರಮೇಶ್, ಎಂ.ಜಿ. ಪೃಥ್ವಿ, ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.

You cannot copy content of this page

Exit mobile version