Thursday, July 17, 2025

ಸತ್ಯ | ನ್ಯಾಯ |ಧರ್ಮ

ಪುತ್ತೂರಿನ ʼಕೈʼ ಮುಷ್ಠಿಗಳು !!

ಮೊನ್ನೆ ತಾನೇ ಮಂಗಳೂರಿನ ಸಭೆಯಲ್ಲಿ ಕಾಂಗ್ರೆಸ್‌  ಸೇರಿದ್ದ ಅಶೋಕ್ ರೈಗಳನ್ನು ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲವು ಮುಂದಾಳುಗಳು ಇನ್ನು ಕೂಡಾ ಹೃತ್ಪೂರ್ವಕವಾಗಿ ಸ್ವಾಗತಿಸಿಲ್ಲ. ಅವರು ಡಿ ವಿ ಸದಾನಂದ ಗೌಡರ ಆಪ್ತ  ಮತ್ತು ಪಾಲುದಾರ ಎನ್ನುವ ಅಪಪ್ರಚಾರವೇ ಪುತ್ತೂರಿನ ಕಾಂಗ್ರೆಸ್  ಪಕ್ಷದೊಳಗೆ ಅವರನ್ನು ಬದಿಗಿರಿಸಲಾಗುತ್ತಿದೆ- ವಿ.ಕೆ.ವಾಲ್ಪಾಡಿ.

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ  ಪುತ್ತೂರು ಕಾಂಗ್ರೆಸ್ಸಿಂದ ಕೆಪಿಸಿಸಿಗೆ ಅತಿ ಹೆಚ್ಚು ಹಣ ಸಂದಾಯವಾಗಿದೆ ಅನ್ನಬಹುದು. ಬರೋಬ್ಬರಿ ಹದಿನಾಲ್ಕು ಕೈಗಳಿಂದ ಮುಷ್ಠಿ ಕಾಣಿಕೆ ಅಲ್ಲಿಗೆ ಬಿದ್ದಿದೆ. ಅದರಲ್ಲೂ ಅಲ್ಲಿಯ ಕಾಂಗ್ರೆಸ್ಸಿಗರು ಕೆಲವರ ಜೋಕ್ ಎಂದರೆ ಎಂ ಎಸ್ ಮುಹಮ್ಮದ್ ಅವರೆಲ್ಲಿಂದ ಅಷ್ಟು ಹಣ ಕಟ್ಟಿದರು ?! ಅಂತ. ಯಾಕೆಂದರೆ ಅಷ್ಟಕ್ಕೂ ಅವರು ಬಡವ, ಬೇರೆ ಯಾರೋ ಕಟ್ಟಿಸಿರಬೇಕು .ಅದೇ ಪೊಲಿಟಿಕ್ಸ್!

 ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ದಿವ್ಯ ಪ್ರಭ ಚಿಲ್ತಡ್ಕ,

 ಮಮತಾ ಗಟ್ಟಿ, ಕೃಪಾ ಅಮರ್ ಆಳ್ವ, ಪ್ರಸಾದ್ ಕೌಶಲ ಶೆಟ್ಟಿ, (ಕಾಂಗ್ರೆಸ್ಸಿನ ಬಲ ಭೀಮರಾಗಿದ್ದ ದಿ।ಬಿ ಸಂಕಪ್ಪ ರೈಗಳ ಮೊಮ್ಮಗ)ಎಂ ಬಿ ವಿಶ್ವನಾಥ ರೈ, ಡಾ।ರಾಜರಾಮ್ ಕೆ ಬಿ, ಸತೀಶ್ ಕೆಡಿಂಜೆ, ಚಂದ್ರಹಾಸ ಶೆಟ್ಟಿ, ಎಂ ಎಸ್ ಮುಹಮ್ಮದ್. ಒಟ್ಟು ಹದಿನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಅವೆಲ್ಲರಲ್ಲಿ ಪರದೆಗೆ ಬಂದು ಕಾಣಿಸುವ ಪ್ರಮುಖರು ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಭರತ್ ಮುಂಡೋಡಿ ಮತ್ತು ದಿವ್ಯಪ್ರಭ ಚಿಲ್ತಡ್ಕ. ಬಾಕಿ ಉಳಿದವರೇನಿದ್ದರೂ ಪೋಷಕ ನಟರು, ದೀಪ ಹಿಡಿಯುವವರು.

ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯಲ್ಲಿ  ಈ ಬಾರಿ ನಿರಾಯಾಸವಾಗಿ ಗೆಲ್ಲುವ ಅಭ್ಯರ್ಥಿಯೆಂದರೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತ್ರ. ಆಕೆ ಈಗಲೂ ಬೆಳಗಾತ ಮನೆಯಿಂದ ಹೊರ ಬಂದರೆ ವಾಪಾಸು ಮನೆ ಚಾವಡಿಗೆ ಕಾಲಿಡುವಾಗ ನಡು ರಾತ್ರಿಯಾಗುತ್ತದೆ. ಅದು ಈಗ ಟಿಕೇಟಿನಾಸೆಗಂತಲ್ಲ. ಬಿಜೆಪಿಗೆ ಸೇರಿಕೊಂಡಿದ್ದಾಗಲೇ, ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ  ಮೊದಲೇ ಆಕೆ ಜನಸೇವೆ ಮಾಡಿಕೊಂಡಿದ್ದವರು. ಅವರು ಇಡೀ ಪುತ್ತೂರಿನ ಮತ್ತು ಆಸುಪಾಸಿನ ಮನೆ ಕುಟುಂಬದವರ್ಗೆಲ್ಲರಿಗೂ ಬೇಕಾದವರಾಗುತ್ತ ಬಂದವರು. ಹಿಂದುತ್ವ ರಾಜಕೀಯದಿಂದಾಗಿ ಆಕೆ ಸೋಲಬೇಕಾಯಿತು ಅಷ್ಟೆ.

ಆ ಹದಿನಾಲ್ಕು ಮಂದಿಯಲ್ಲಿ ಶಕುಂತಳಾ ಶೆಟ್ಟಿಗೆ ಯಾರೂ ವಿರೋಧಿಗಳಿಲ್ಲ ಎಂಬುದು ಸತ್ಯ. ಹಾಗಂತ ಕಾವು ಹೇಮನಾಥ ಶೆಟ್ಟಿ ಮತ್ತು ಶಕುಂತಳಾ ಮಧ್ಯೆ ಮಾತ್ರ ಭಿನ್ನಮತ ಇರುವುದು. ಶಕುಂತಳಾ ಅವರೇ ಕಾವು ಅವರ ಕಾಲೆಳೆಯುತ್ತ ಬರುತ್ತಿರುವುದು ವಿನಃ ಕಾವು ಹೇಮನಾಥ ಶೆಟ್ಟಿ ತಾನಾಗಿ ಶಕುಂತಳಾ ಅವರಿಗೆ ವಿರೋಧಿಯಾಗಿಲ್ಲ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಅನ್ನುವಷ್ಟಕ್ಕೆ ಅವರ ವಾದಗಳು ಬಹಿರಂಗವಾಗಿವೆ. ಕಾವು ವಿರುದ್ಧ ಶಕುಂತಳಾ ಶೆಟ್ಟಿ ಕೆಪಿಸಿಸಿಗೂ ಚಾಡಿ ಹೇಳುತ್ತ ಬಂದಿದ್ದಾರೆ ಅನ್ನುವ ಮಹಾ ಆರೋಪವೂ ಇದೆ.

 ಪ್ರತಿಯೊಬ್ಬರು ಕೂಟಾ ಶಕ್ಕಕ್ಕನಿಗೆ ನಮ್ಮ ಸಪೋರ್ಟು ಎಂದೂ ಹೇಳುವುದು ಅಚ್ಚರಿಯೋ ಅಥವಾ  ಹದಿಮೂರು ಮಂದಿ ಅವರೆಲ್ಲರೊಳಗಿನ ಭಿನ್ನಮತವೊ ತಿಳಿಯದು!

ಶಕುಂತಳಾ ಶೆಟ್ಟಿಗೆ ಪುತ್ತೂರಿನ ಬ್ರಾಹ್ಮಣ ಸಮುದಾಯ ತೆರೆದ ಮತ ಹಾಕುವಷ್ಟು ಬೆಂಬಲ ತೋರಿಸುತ್ತಾರೆ. ಅದಕ್ಕೆ ಕಾರಣ ಆಕೆ ಬಂದಿರುವುದು ಬಿಜೆಪಿಯಿಂದ ಮತ್ತು ಮಾಜಿ ಶಾಸಕ ಡಾ.ಉರಿಮಜಲು ರಾಮ ಭಟ್ಟರ  ಶಿಷ್ಯೆಯಾಗಿದ್ದುದು. ಬ್ರಾಹ್ಮಣರ ಮತ ಸಂಖ್ಯೆ ಕಡಿಮೆಯಾಗಿದ್ದರೂ ಅವರು ನಾಲ್ಕು ಮಂದಿಗೆ ಹೇಳಿಯೇ ಹೇಳುತ್ತಾರೆ- “ಅಣ್ಣೆರ್ ಸಕುವಕ್ಕಕೇ ಓಟು ಪಾಡ್ಯೆರೆ ಪಂಡೇರ್” (ಅಣ್ಣನವರು ಶಕ್ಕು ಅಕ್ಕನಿಗೇ ಓಟು ಹಾಕಲು ಹೇಳಿದರು) ಎಂದು ಕೃಷಿಕೂಲಿ ಕಾರ್ಮಿಕರು ಹೇಳಿಕೊಂಡು ಮತ ಹಾಕುತ್ತಾರೆ.

ಆಕೆಗೆ ಕಳೆದ ಬಾರೀ ಹತ್ತೊಂಬತ್ತು ಸಾವಿರ ಮತಗಳ ಅಂತರದ ಸೋಲಾಗಿತ್ತಷ್ಟೆ. ಈ ಬಾರಿ ಗೌಡ ಸಮಾಜದವರಿಂದಲೂ ಸುಮಾರು ಹತ್ತು ಶೇಕಡ ಮತ ಶಕು ಅವರಿಗೆ ಸಿಗುತ್ತದೆ ಗ್ಯಾರಂಟಿ.

ಕಾವು ಹೇಮನಾಥ ಶೆಟ್ಟರದ್ದು ದುರಂತ ನಾಯಕನದ್ದೇ ಪಾಡು. ಯೋಗ್ಯ ಸಂಘಟಕ, ಬಹಳಷ್ಟು ಜನ ಸೇವೆ ಮಾಡುತ್ತಲೇ ಬರುತ್ತಿರುವವರು. ಲಾಗಾಯ್ತಿಂದಲೂ ಟಿಕೆಟ್ ವಂಚಿತರಾಗುತ್ತಲೇ ಬರುತ್ತಿದ್ದಾರೆ. 

ಇನ್ನೊಂದು ಹೊಸ ಹೆಸರು ಧನಂಜಯ ಅಡ್ಪಂಗಾಯ. ಸ್ನಾತಕೋತ್ತರ ಪದವೀಧರನಾಗಿರುವ ಅವರು  ನೆರೆಯ ಸುಳ್ಯದವರು. ಖಡಕ್ ಮನುಷ್ಯ. ಕಾರ್ಯಕ್ಷೇತ್ರ ಸುಳ್ಯವೇ ಆಗಿದ್ದರಿಂದ ಇಲ್ಲಿನ ಗೌಡ ಸಮಾಜದ ಮತವನ್ನು ನಿರೀಕ್ಷೆಗೂ ಮೀರಿ ಪಡೆಯಬೇಕಾದೀತು.

ಭರತ್ ಮುಂಡೋಡಿ ಕೂಡ ಬಹಳ ಹಿರಿಯ ಕಾರ್ಯಕರ್ತ. ಒಳ್ಳೆಯ ಮಾತುಗಾರ. ಯಾರೊಂದಿಗೂ ನಿಷ್ಠೂರತೆ ಇಲ್ಲದ ರಾಜಕಾರಣಿ. ಆದರೆ ಅವರೀಗ ಅಷ್ಟೊಂದು ಚಲಾವಣೆಯಲ್ಲಿಲ್ಲದ ರಾಜಕಾರಣಿ. ಅವರು ಕೂಡ ಸುಳ್ಯದವರು.

ದಿವ್ಯ ಪ್ರಭ ಗೌಡ ಅವರು ಪುತ್ತೂರಿನಲ್ಲಿ ಬಹಷ್ಟು ಜನಪರ ಕಾರ್ಯ ಮಾಡುತ್ತಿರುವ ಮಹಿಳೆ. ಸಾಕಷ್ಟು ಧನ ಸಹಾಯ ಕೊಡುತ್ತಿರುವ ಸಮಾಜ ಸೇವಕಿ. ಅವರು ಗೌಡ ಸಮುದಾಯದವರ ಮತ ಪಡೆಯುವಂತಹ ಅನೇಕ ಜನಪರ ಕೆಲಸ ಮಾಡುತ್ತ ಬರುತ್ತಿದ್ದಾರೆ. 

ಮೊನ್ನೆ ತಾನೇ ಮಂಗಳೂರಿನ ಸಭೆಯಲ್ಲಿ ಕಾಂಗ್ರೆಸ್‌  ಸೇರಿದ್ದ ಅಶೋಕ್ ರೈಗಳನ್ನು ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲವು ಮುಂದಾಳುಗಳು ಇನ್ನು ಕೂಡಾ ಹೃತ್ಪೂರ್ವಕವಾಗಿ ಸ್ವಾಗತಿಸಿಲ್ಲ. ಅವರು ಡಿ ವಿ ಸದಾನಂದ ಗೌಡರ ಆಪ್ತ  ಮತ್ತು ಪಾಲುದಾರ ಎನ್ನುವ ಅಪಪ್ರಚಾರವೇ ಪುತ್ತೂರಿನ ಕಾಂಗ್ರೆಸ್  ಪಕ್ಷದೊಳಗೆ ಅವರನ್ನು ಬದಿಗಿರಿಸಲಾಗುತ್ತಿದೆ.

ವಿ.ಕೆ.ವಾಲ್ಪಾಡಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page