Thursday, January 8, 2026

ಸತ್ಯ | ನ್ಯಾಯ |ಧರ್ಮ

​ಬೊಗಸೆ ದಕ್ಕಿದ್ದು- 65 : ಉನ್ನಾವ್ ಅತ್ಯಾ*ಚಾರ ಪ್ರಕರಣ ಹುಟ್ಟುಹಾಕಿರುವ ಪ್ರಶ್ನೆಗಳು!

“..ಅತ್ಯಾಚಾರಿಗೆ ಅತ್ಯಂತ ಸೂಕ್ಷ್ಮ ನ್ಯಾಯಾಂಗ ತಾಂತ್ರಿಕತೆಯನ್ನು ತುದಿಗಾಲಲ್ಲಿ ನಿಂತು ಅನ್ವಯಿಸಿ ಬಿಡುಗಡೆ ನೀಡುವ ನ್ಯಾಯಾಂಗವು, ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಲೆಂದೇ ಅಂತಾ ಸೂಕ್ಷ್ಮ ನ್ಯಾಯಾಂಗ ತಾಂತ್ರಿಕತೆಯನ್ನು ಅನ್ವಯಿಸುತ್ತಿರುವುದೇಕೆ?..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಉನ್ನಾವ್ ಅತ್ಯಾಚಾರ ಪ್ರಕರಣದ ಇಡೀ ಕಾನೂನು ಕಥೆಯು ಭಾರತೀಯ ನ್ಯಾಯಾಂಗ ವ್ಯವಸ್ಥೆಯೊಳಗೆ ಹಿಂದಿನಿಂದಲೂ ಇರುವ ಬಿರುಕುಗಳಿಗೆ ಹಿಡಿದ ಒಂದು ನಿರಾಕರಿಸಲಾಗದ ಕನ್ನಡಿಯಂತಿದೆ. ಬಿಜೆಪಿಯ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್‌ನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಡಿಸೆಂಬರ್ 29, 2025ರಂದು ಸುಪ್ರೀಂ ಕೋರ್ಟ್ ತಡೆ ವಿಧಿಸಿರುವುದು- ಹಲವರು ಭಾವಿಸಿರುವಂತೆ- ಶಿಕ್ಷೆಯ ವಿರುದ್ಧ ಸಾಂಸ್ಥಿಕ ರಕ್ಷಣೆಯ (Institutional immunity against punishment) ಕಡೆಗೆ ನ್ಯಾಯಾಂಗದ ದುರಂತಕಾರಿ ಪತನವನ್ನು ತಾತ್ಕಾಲಿಕವಾಗಿಯಾದರೂ ತಡೆದು ನಿಲ್ಲಿಸಿ, ಅದರ ವಿಶ್ವಾಸಾರ್ಹತೆಯ ಬಗ್ಗೆಯೇ ಎದ್ದಿರುವ ಸಾರ್ವಜನಿಕ ಸಂಶಯವನ್ನೂ ಸ್ವಲ್ಪ ಮಟ್ಟಿಗೆ ಶಮನಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪು- ಬದುಕುಳಿದ ಸಂತ್ರಸ್ತರಿಗೆ ನೆಮ್ಮದಿಯ ಕ್ಷಣವನ್ನು ನೀಡುವುದರ ಜೊತೆಗೆ, ಶಿಕ್ಷೆಗೊಳಗಾದ ಅತ್ಯಾಚಾರಿ ಸೆಂಗಾರ್ ಬಹುತೇಕ ಮುಕ್ತವಾಗಿ ಸಮಾಜದಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟ ಹೈಕೋರ್ಟ್ ನ್ಯಾಯಾಧೀಶರಿಬ್ಬರ “ಅತಿ-ತಾಂತ್ರಿಕ” (Hyper-technical) ಕಾನೂನು ಚಮತ್ಕಾರಿಕತೆಯನ್ನೂ ತೀಕ್ಷ್ಣವಾಗಿ ಗಮನಕ್ಕೆ ತಂದಿದೆ. ಈ ಚಮತ್ಕಾರಿಕೆಯನ್ನು ಸಮಾಜ ವ್ಯವಸ್ಥೆಯಲ್ಲಿ ಅಂಚಿಗೆ ತಳ್ಳಲ್ಪಟ್ಟವರು ಮತ್ತು ವ್ಯವಸ್ಥೆಯ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದು, ಅದರ ವಿರುದ್ಧ ಹೋರಾಡಿದವರಿಗೆ ಸ್ವಾತಂತ್ರ್ಯವನ್ನು ನಿಯಮಿತವಾಗಿ ನಿರಾಕರಿಸುತ್ತಿರುವ ನ್ಯಾಯಾಂಗದ ಕ್ರಮಗಳಿಗೆ ಯಾರಾದರೂ ಹೋಲಿಸಿ ನೋಡಬಹುದು. ಅತ್ಯಾಚಾರಿಗೆ ಅತ್ಯಂತ ಸೂಕ್ಷ್ಮ ನ್ಯಾಯಾಂಗ ತಾಂತ್ರಿಕತೆಯನ್ನು ತುದಿಗಾಲಲ್ಲಿ ನಿಂತು ಅನ್ವಯಿಸಿ ಬಿಡುಗಡೆ ನೀಡುವ ನ್ಯಾಯಾಂಗವು, ಸರಕಾರದ ವಿರೋಧವನ್ನು ದೇಶದ್ರೋಹದ ಹಣೆಪಟ್ಟಿ ಹಚ್ಚಿ, ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಲೆಂದೇ ಅಂತಾ ಸೂಕ್ಷ್ಮ ನ್ಯಾಯಾಂಗ ತಾಂತ್ರಿಕತೆಯನ್ನು ಅನ್ವಯಿಸುತ್ತಿರುವುದೇಕೆ? ನ್ಯಾಯಾಂಗ ವಿವೇಚನೆ (Jurisprudence) ಇಬ್ಬಗೆಯಾಗಿರುವುದು ಏಕೆ? ಈ ಪ್ರಶ್ನೆಗಳು ಇಂದು ಈ ವಿದ್ಯಮಾನವನ್ನು ಗಮನಿಸುತ್ತಿರುವ ಎಲ್ಲರಲ್ಲೂ ಹೆಚ್ಚುಹೆಚ್ಚಾಗಿ ಮೂಡುತ್ತಿವೆ ಅಲ್ಲವೆ!?

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನ ರಜಾ ಪೀಠದ ತಡೆಯಾಜ್ಞೆಯು ಕಾನೂನಿನ “ವಿಕೃತ” ವ್ಯಾಖ್ಯಾನಕ್ಕೆ ನೇರ ಪ್ರತಿಕ್ರಿಯೆಯಾಗಿತ್ತು. ಹೈಕೋರ್ಟ್‌ನ ತರ್ಕದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪೀಠವು, ಶಾಸಕರನ್ನೇ “ಸಾರ್ವಜನಿಕ ಸೇವಕ” (Public servent) ಎಂದು ಪರಿಗಣಿಸದಿದ್ದರೆ, ಕೆಳಮಟ್ಟದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು- ಚುನಾಯಿತ ಪ್ರತಿನಿಧಿಗಿಂತ ಹೆಚ್ಚಿನ ಮಟ್ಟದ  ಹೊಣೆಗಾರಿಕೆಯನ್ನು ಹೊಂದಿರುತ್ತಾರೆಯೇ ಎಂದು ಕಟುವಾಗಿ ಕೇಳಿದೆ. ಅಂತಹ ವ್ಯಾಖ್ಯಾನವು ಅಪಾಯಕಾರಿ ಲೋಪದೋಷವನ್ನು ಸೃಷ್ಟಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ. ಹಾಗಾದಲ್ಲಿ, ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು – ಅತ್ಯುನ್ನತ ಸಾರ್ವಜನಿಕ ನಂಬಿಕೆಯನ್ನು ಹೊಂದಿರುವವರು- ಪೋಕ್ಸೊ ಕಾಯ್ದೆಯ ತೀವ್ರತಮ (aggravated) ದಂಡನೆಗಳಿಂದ ವಿನಾಯಿತಿ ಪಡೆಯಬಹುದು. ಇದನ್ನು ಪರಿಗಣಿಸಿದ ಪರಿಣಾಮವಾಗಿಯೇ, ಸುಪ್ರೀಂ ಕೋರ್ಟ್ ಸೆಂಗಾರ್ ಬಿಡುಗಡೆಯನ್ನು ತಡೆಹಿಡಿದು, ಬದುಕುಳಿದ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಈಗಾಖಲೇ ಪ್ರತ್ಯೇಕವಾಗಿ ಸೆಂಗಾರ್‌ನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ನೆನಪಿಸಿತು.

ನ್ಯಾಯಮೂರ್ತಿಗಳಾದ ಸುಬ್ರಮಣಿಯನ್ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಇವರಿಬ್ಬರಿದ್ದ ದಿಲ್ಲಿ ಹೈಕೋರ್ಟ್ ಡಿಸೆಂಬರ್ 23ರಂದು ನೀಡಿದ ಆದೇಶದಿಂದ ಸುಪ್ರೀಂ ಕೋರ್ಟಿನ ಈ ಹಸ್ತಕ್ಷೇಪ ಅಗತ್ಯವಾಗಿತ್ತು. ಇದು ದೇಶಾದ್ಯಂತ ಆಘಾತಕಾರಿ ಅಲೆಗಳನ್ನು ಉಂಟುಮಾಡಿತು. ಐಪಿಸಿಯ ಸೆಕ್ಷನ್ 21ರ ಅಡಿಯಲ್ಲಿ “ಸಾರ್ವಜನಿಕ ಸೇವಕ” ಎಂಬುದರ ವ್ಯಾಖ್ಯಾನಕ್ಕೆ ಸಂಬಂಧಿಸಿದ ತಾಂತ್ರಿಕತೆಯ ಮೇಲೆ ಹೈಕೋರ್ಟ್- ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಪೋಕ್ಸೋ ಕಾಯ್ದೆಯು ಐಪಿಸಿಯ ವ್ಯಾಖ್ಯಾನವನ್ನು ಅಳವಡಿಸಿಕೊಂಡಿರುವುದರಿಂದ ಮತ್ತು ಐಪಿಸಿಯು ಶಾಸಕರನ್ನು “ಸ್ಪಷ್ಟವಾಗಿ ಪಟ್ಟಿ ಮಾಡದ” ಕಾರಣ, ಜೀವಾವಧಿ ಶಿಕ್ಷೆಯನ್ನು ಹೊಂದಿರುವ “ಉಲ್ಬಣಗೊಂಡ” (Aggravated) ಆರೋಪಗಳು ಅನ್ವಯಿಸುವುದಿಲ್ಲ ಎಂದು ಈ ನ್ಯಾಯಾಧೀಶರು “ವಾದಿಸಿದ್ದರು”. ಪೋಕ್ಸೋದ ಸೆಕ್ಷನ್ 4ರ “ಮೂಲ” ಆರೋಪದ ಅಡಿಯಲ್ಲಿಯೂ ಸಹ, ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆಯು ಮಾನ್ಯ ಶಿಕ್ಷೆಯಾಗಿಯೇ ಇದೆ ಎಂಬುದನ್ನು ಹೈಕೋರ್ಟ್ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಯಾಕೆಂದು ತೀರ್ಪು ನೀಡಿದ ನ್ಯಾಯಾಧೀಶರ ಹೊರತು, ಸುಪ್ರೀಂ ಕೋರ್ಟಿಗೂ ಅರ್ಥವಾದಂತಿಲ್ಲ. ಬಲಿಪಶು ಅಥವಾ ಸಂತ್ರಸ್ತ ಕೇಂದ್ರಿತ ಕಾನೂನಿನ ಆಶಯ, ಆತ್ಮಕ್ಕಿಂತ (legal spirit ಎಂಬರ್ಥದಲ್ಲಿ) ಪಠ್ಯದ ಲೋಪದೋಷಕ್ಕೆ ಆದ್ಯತೆ ನೀಡುವ ಮೂಲಕ, ಒಂದು ಅಪ್ರಾಪ್ತ ಹೆಣ್ಣು ಮಗಳನ್ನು ಭಯಭೀತಗೊಳಿಸಲು ತನ್ನ ಬಲಿಷ್ಟ ರಾಜಕೀಯ ಯಂತ್ರವನ್ನು ಬಳಸಿದ ವ್ಯಕ್ತಿಯು ಮಾಡಿದ ಅಪರಾಧದ ಗುರುತ್ವವನ್ನೇ ಹೈಕೋರ್ಟ್ ಪರಿಣಾಮಕಾರಿಯಾಗಿ ಕ್ಷುಲ್ಲಕಗೊಳಿಸಿದೆ ಎಂಬುದೇ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶ.

ಈ ಪ್ರಕರಣವು ನರಭಕ್ಷಕ ಪ್ರಭುತ್ವ-ರಾಜಕೀಯ ಸಂಬಂಧದ ವಿರುದ್ಧ ಬದುಕುಳಿದ ಸಂತ್ರಸ್ತೆಯ ಕೆಚ್ಚೆದೆಯ ಹೋರಾಟಕ್ಕೆ ಒಂದು ಭಯಾನಕ ಸಾಕ್ಷಿಯಾಗಿದೆ. 2017ರಲ್ಲಿ, ಉದ್ಯೋಗಕ್ಕಾಗಿ ಹೋಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸೆಂಗಾರ್ ಎಂಬ ದುಷ್ಟ ಅತ್ಯಾಚಾರ ಎಸಗಿದಾಗಿನಿಂದ, ಈ ಪ್ರಸಂಗವು ವ್ಯವಸ್ಥಿತ ಬೆದರಿಕೆಯ ಒಂದು ರಕ್ತ ಹೆಪ್ಪುಗಟ್ಟಿಸುವ ಅಭಿಯಾನವಾಗಿ ಹೊರಹೊಮ್ಮಿತು. ಆಕೆಯ ಕುಟುಂಬವು ನ್ಯಾಯ ಕೋರಿದಾಗ, ಸೆಂಗಾರ್‌ನ ಒತ್ತಡದಿಂದ ಪೊಲೀಸರು ಆಕೆಯ ತಂದೆಯನ್ನೇ ಸುಳ್ಳು ಆರೋಪಗಳ ಮೇಲೆ ಬಂಧಿಸಿದರು; ನಂತರ ಸೆಂಗಾರ್‌ನ ಸಹೋದರನಿಂದ ಕ್ರೂರವಾಗಿ ಥಳಿಸಲ್ಪಟ್ಟ ನಂತರ ತಂದೆ ಪೊಲೀಸ್ ಕಸ್ಟಡಿಯಲ್ಲಿಯೇ ಮೃತಪಟ್ಟರು. ಎಲ್ಲಿಯೂ ನ್ಯಾಯಸಿಗದೇ, ಕೊನೆಗೆ 2018ರಲ್ಲಿ ಮುಖ್ಯಮಂತ್ರಿಯವರ ನಿವಾಸದ ಹೊರಗೆ ಆತ್ಮಹತ್ಯೆಗೆ ಯತ್ನಿಸಿದಾಗ ಸಂತ್ರಸ್ತೆಯ ಹತಾಶೆ ಉತ್ತುಂಗಕ್ಕೇರಿತ್ತು. ಸಿಬಿಐ ತನಿಖೆಯ ಅಧಿಕಾರವನ್ನು ವಹಿಸಿಕೊಂಡ ನಂತರವೂ, ಈ ಭಯಾನಕ ಬೆದರಿಕೆ, ಹಿಂಸಾಚಾರ ಮುಂದುವರಿಯಿತು. 2019ರಲ್ಲಿ ಒಂದು ಅನುಮಾನಾಸ್ಪದ ಕಪ್ಪು ಬಣ್ಣದ ನಂಬರ್ ಪ್ಲೇಟ್‌ ಇಲ್ಲದ ಟ್ರಕ್ ಡಿಕ್ಕಿ ಹೊಡೆದು, ಸಂತ್ರಸ್ತೆಯ ಕುಟುಂಬದ ಇಬ್ಬರು ಸದಸ್ಯರು ಸಾವನ್ನಪ್ಪಿದರು ಮತ್ತು ಆಕೆ ಮತ್ತು ಆಕೆಯ ವಕೀಲರು ಗಂಭೀರ ಸ್ಥಿತಿಯಲ್ಲಿದ್ದರು. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ದಿಲ್ಲಿಗೆ ವರ್ಗಾಯಿಸಿದ ನಂತರವೇ, ಡಿಸೆಂಬರ್ 2019ರಲ್ಲಿ ಸೆಂಗಾರ್‌‌ನಿಗೆ ಅಂತಿಮವಾಗಿ ಶಿಕ್ಷೆ ವಿಧಿಸಲಾಯಿತು.

ಈಗ ಒಂದು ಬಾರಿ ಕಣ್ಣುಮುಚ್ಚಿಕೊಂಡು ಈ ಬೀಭತ್ಸ ಘಟನಾ ಸರಣಿಯನ್ನು ಕಲ್ಪಿಸಿಕೊಳ್ಳಿ: ನಿಮ್ಮ ಕುಟುಂಬದಲ್ಲೇ ಇದು ನಡೆದಿದೆ! ಹಣವಿಲ್ಲದೇ, ಸ್ಥಾನಮಾನವಿಲ್ಲದೇ ಇಷ್ಟೊಂದು ಜೀವಭಯ, ಬೆದರಿಕೆ, ಪೊಲೀಸರಿಗೆ ಗೊತ್ತಿದ್ದೇ ತಂದೆ ಮತ್ತು ಇಬ್ಬರು ಚಿಕ್ಕಮ್ಮಂದಿರ ಕೊಲೆ, ಸಂತ್ರಸ್ತೆ ಮತ್ತು ವಕೀಲರ ಕೊಲೆಯತ್ನಗಳ ಬಳಿಕವೂ ನೀವು ನ್ಯಾಯಾಲಯದ ಹೋರಾಟ ಮುಂದುವರಿಸಬಲ್ಲಿರಾ? ನಿಮ್ಮಲ್ಲಿ ಆ ಚೈತನ್ಯ ಇದೆಯೇ? ಕೊನೆಗೂ ನ್ಯಾಯ ಸಿಕ್ಕಾಗ, ಉನ್ನತ ನ್ಯಾಯಾಲಯವೊಂದು- ಆತ ಅಪರಾಧಿ ಅಲ್ಲವೆಂಬ ಕಾರಣಕ್ಕಾಗಿ ಅಲ್ಲ; ಕೇವಲ ಒಂದು ಪುಟ್ಟ ಕಾನೂನು ತಾಂತ್ರಿಕತೆಯ ನೆಪದಲ್ಲಿ ಆತನ ಶಿಕ್ಷೆಯನ್ನು ಅಮಾನತುಗೊಳಿಸಿದರೆ ನಿಮಗೆ ಏನನಿಸಬಹುದು?

ಅಂತಹ ಅಪರಾಧಿಗೆ ಹೈಕೋರ್ಟ್ ನೀಡಿದ ಸಂಕ್ಷಿಪ್ತ ಜಾಮೀನು ಭಾರತದಲ್ಲಿನ “ಎರಡು-ವೇಗದ” ನ್ಯಾಯ ವ್ಯವಸ್ಥೆಯ ಬಗ್ಗೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನ್ಯಾಯಾಂಗವು “ಜಾಮೀನು ನಿಯಮ, ಜೈಲು ಅಪವಾದ” ಎಂಬ ತತ್ವವನ್ನು ಹೆಚ್ಚಾಗಿ ಉಲ್ಲೇಖಿಸುತ್ತದೆಯಾದರೂ, ಈ ತ್ವರಿತ ನ್ಯಾಯದ ಅನುಗ್ರಹವು ಸ್ಥಾಪಿತ ವ್ಯವಸ್ಥೆಯ ವಿರೋಧಿ ಕಾರ್ಯಕರ್ತರು, ವಿದ್ಯಾರ್ಥಿಗಳು ಅಥವಾ ಬಡವರಿಗೆ ಕೇವಲ ಅಪರೂಪದಲ್ಲಿ ವಿಸ್ತರಿಸಲ್ಪಡುತ್ತದೆ. ಅವರಲ್ಲಿ ಹಲವರು ಒಂದೇ ಒಂದು ವಿಚಾರಣೆಯಿಲ್ಲದೆ ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳಾಗಿಯೇ ಬಳಲುತ್ತಿದ್ದಾರೆ. ಅವರ ಸ್ವಾತಂತ್ರ್ಯ, ಮಾನವ ಹಕ್ಕುಗಳ ಬಗ್ಗೆ ಯಾಂತ್ರಿಕವಾಗಿ ವರ್ತಿಸುವ ನ್ಯಾಯಾಂಗ ವ್ಯವಸ್ಥೆಯು, ಘೋಷಿತ ಅಪರಾಧಿಗಳ ಸ್ವಾತಂತ್ರ್ಯದ ಬಗ್ಗೆ “ಮಿತಿಮೀರಿದ” ಕಾಳಜಿ ಯಾಕೆ ತೋರಿಸುತ್ತದೆ ಎಂಬ ಪ್ರಶ್ನೆ ಜನರಲ್ಲಿ ಮೂಡದಿರುವುದು ಸಾಧ್ಯವಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ಶ್ರೀಮಂತ ಮತ್ತು ರಾಜಕೀಯವಾಗಿ ಸಂಪರ್ಕ ಹೊಂದಿದ ಅಪರಾಧಿಗಳು “ಮೇಲ್ಮನವಿ ಆರ್ಥಿಕತೆ”ಯಿಂದ ಪ್ರಯೋಜನ ಪಡೆಯುತ್ತಾರೆ. ಸಾವಿರಾರು ಪುಟಗಳ ಪುರಾವೆಗಳಲ್ಲಿ ತಾಂತ್ರಿಕ ದೋಷಗಳನ್ನು ಹುಡುಕಿ ವಾದಿಸುವ, ಗಂಟೆಯ ಲೆಕ್ಕದಲ್ಲಿ ಲಕ್ಷಗಟ್ಟಲೆ ಫೀಸು ವಿಧಿಸುವ ಉನ್ನತ ಮಟ್ಟದ ವಕೀಲರನ್ನು ನೇಮಿಸಿ ಅವರು ಕಾನೂನಿಂದ ಬಚಾವಾಗಬಲ್ಲರು. ಆದರೆ, ಆ ಪ್ರಕರಣಗಳ ಬಡ ಬಲಿಪಶುಗಳು ಪ್ರಕರಣವನ್ನು ಜೀವಂತವಾಗಿಡಲು ಮತ್ತು ನ್ಯಾಯಪಡೆಯಲೆಂದೇ ತಮ್ಮ ಪ್ರತಿಯೊಂದು ಆರ್ಥಿಕ ಮತ್ತು ಭಾವನಾತ್ಮಕ ಸಂಪನ್ಮೂಲವನ್ನು ಖಾಲಿ ಮಾಡಬೇಕಾಗುತ್ತದೆ. ವ್ಯವಸ್ಥೆಯಲ್ಲಿನ ವಿಳಂಬವು ಪ್ರಬಲರಿಗೆ ಒಂದು ಸಾಧನವಾಗುತ್ತದೆ; ವರ್ಷಗಳು ಕಳೆದಂತೆ, ಸಾಕ್ಷಿಗಳು ಪ್ರತಿಕೂಲರಾಗುತ್ತಾರೆ, ನೆನಪು ಮಸುಕಾಗುತ್ತದೆ ಮತ್ತು ರಾಜಕೀಯ ಉಬ್ಬರವಿಳಿತಗಳು ಬದಲಾಗುತ್ತವೆ. ಅವರಾಧಿಗಳು ಜಾಮೀನಿನಲ್ಲೇ ಬದುಕಿ ಶಿಕ್ಷೆಯಿಲ್ಲದೇ ಪಾರಾಗುತ್ತಾರೆ. ಆಗಾಗ್ಗೆ ಸೈದ್ಧಾಂತಿಕ ಪಕ್ಷಪಾತದ “ಒಳನುಸುಳುವಿಕೆ”ಯು ನ್ಯಾಯಾಂಗ ವಿವೇಚನೆಯನ್ನು ಟೀಕಿಸಲು ಅನುವು ಮಾಡಿಕೊಡುತ್ತದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಮತ್ತು ಸೈದ್ಧಾಂತಿಕ ಪಕ್ಷಪಾತದ ಕುರಿತು ಸಾರ್ವಜನಿಕರಲ್ಲಿ ಸಂಶಯ ಹುಟ್ಟಿಸುವ ತೀರ್ಪುಗಳು ನ್ಯಾಯಾಂಗ ಪಾವಿತ್ರ್ಯ ಮತ್ತು ಪ್ರಶ್ನಾತೀತತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಇದು ದೇಶಕ್ಕೇ ಅಪಾಯಕಾರಿ.

ಜಾತಿ, ಧರ್ಮ ಮತ್ತು ಲಿಂಗದ ಕುರಿತ “ಕಾಣದ” ವ್ಯಕ್ತಿಗತ ಪಕ್ಷಪಾತಗಳು- ವಿಭಿನ್ನ ಪೀಠಗಳು ಅಪರಾಧದ ಗುರುತ್ವ, ಗಂಭೀರತೆಯನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಮೇಲೆ ಮೌನ ಪ್ರಭಾವವನ್ನು ಬೀರುತ್ತವೆ. ಸೆಂಗಾರ್‌ನಂತಹ ಪ್ರಬಲ ಠಾಕೂರ್ ನಾಯಕನಿಗೆ ತಾಂತ್ರಿಕತೆಯ ಮೇಲೆ ಪರಿಹಾರ ನೀಡಿದಾಗ, ವಿಚಾರಣೆಯಿಲ್ಲದೆ “ರಾಷ್ಟ್ರೀಯ ಭದ್ರತೆ”ಯ ಆಧಾರದ ಮೇಲೆ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಿದಾಗ, ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯು ತುಲನೆಗೆ ಒಳಪಟ್ಟು ಛಿದ್ರಗೊಳ್ಳುತ್ತದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ನಿರ್ದಿಷ್ಟ ದೋಷವನ್ನು ಸರಿಪಡಿಸಿದ್ದರೂ, ಉನ್ನಾವ್ ಪ್ರಕರಣವು ಕಾನೂನು ಬಲಿಷ್ಟರಿಗೆ ಗುರಾಣಿ ಮತ್ತು ದುರ್ಬಲರಿಗೆ ಕತ್ತಿಯಾಗುವಂತ ವ್ಯವಸ್ಥೆಯ ಕೊಳೆತ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ವ್ಯವಸ್ಥೆಯು ಚುನಾಯಿತ ಪ್ರತಿನಿಧಿಯ ಹೊಣೆಗಾರಿಕೆಯನ್ನು ತಾಂತ್ರಿಕವಾಗಿ ನೋಡುವುದನ್ನು ನಿಲ್ಲಿಸಿ, ದೇಶದ ನಾಗರಿಕರ ಸ್ವಾತಂತ್ರ್ಯವನ್ನು ರಾಜಿಯಿಲ್ಲದ ಹಕ್ಕಾಗಿ ನೋಡಲಾರಂಭಿಸಿದಾಗ ಮಾತ್ರ ಸಂತ್ರಸ್ತರಿಗೆ ನಿಜವಾದ ನ್ಯಾಯ ದೊರೆಯುತ್ತದೆ.

ಒಟ್ಟಿನಲ್ಲಿ ನ್ಯಾಯಾಂಗವೊಂದೇ ಈ ದೇಶದ ಅಡಿಪಾಯವಾದ ಸಂವಿಧಾನವನ್ನು ರಕ್ಷಿಸಬಲ್ಲ ಒಂದು ಸಾಂವಿಧಾನಿಕ ಅಂಗವಾಗಿರುವುದರಿಂದ, ಅದನ್ನು ಸಂಶಯಾತೀತವಾಗಿ, ಸಾರ್ವಜನಿಕರ ಅತ್ಯುನ್ನತ ಗೌರವಕ್ಕೆ ಅರ್ಹವಾಗಿರುವಂತ ಸಂಸ್ಥೆಯಾಗಿ ಕಾಯ್ದುಕೊಳ್ಳುವುದು ಅತ್ಯವಶ್ಯ. ಈಗೀಗ, ಕೆಳಹಂತದಿಂದ ಮೇಲಿನ ತನಕ ಆಗಾಗ ಸಂಶಯಾಸ್ಪದ ಮಾತ್ರವಲ್ಲ; ವಿಚಿತ್ರವಾದ, ವಿವಾದಾಸ್ಪದ, ಮತ್ತು ವೈಯಕ್ತಿಕ ಅಭಿಪ್ರಾಯ ತುಂಬಿದ ತೀರ್ಪುಗಳು ಆಗಾಗ ಬರುತ್ತಿರುವುದು ಆತಂಕಕಾರಿ. ದೇಶದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಬಹುತೇಕ ಕೊಳೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಂಗದ ಶುದ್ಧೀಕರಣದ ಅಗತ್ಯದ ಕುರಿತ ಮಾತುಗಳು ಹೆಚ್ಚು ಹೆಚ್ಚಾಗಿ ಕೇಳಿಬರುತ್ತಿವೆ. ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ ಹೆಜ್ಜೆ ಇಡಬಹುದೆಂದು ನಿರೀಕ್ಷಿಸಬಹುದೆ? ಅಥವಾ ದೇಶದ ಜನರೇ ಈ ಕುರಿತು ಹಕ್ಕೊತ್ತಾಯ ಮಾಡಬೇಕೆ!?

Related Articles

ಇತ್ತೀಚಿನ ಸುದ್ದಿಗಳು

You cannot copy content of this page