Friday, June 14, 2024

ಸತ್ಯ | ನ್ಯಾಯ |ಧರ್ಮ

ಕ್ವಿಟ್ ಇಂಡಿಯಾ: ಈ ಘೋಷಣೆ ಹುಟ್ಟಿದ್ದು ಹೇಗೆ? ಈ ಚಳವಳಿಯಲ್ಲಿ ತಮ್ಮ ಪ್ರಾಣ ಪಣಕ್ಕೊಡ್ಡಿ ಹೋರಾಡಿದ ಯೋಧರು ಯಾರು?

ಅದು 1942ನೇ ಇಸವಿಯ ಆಗಸ್ಟ್ 8ನೇ ತಾರೀಖು, ಅಂದಿನ ಸಂಜೆ, ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದರು. ಅವರೆಲ್ಲರೂ ಸ್ವಾತಂತ್ರ್ಯದ ಕೆಚ್ಚನ್ನು ತುಂಬಿಕೊಂಡ ಭಾರತೀಯರಾಗಿದ್ದರು

ಈ ಜನರನ್ನು ಉದ್ದೇಶಿಸಿ 73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದರು. ಅವರ ಒಂದೊಂದು ಮಾತಿಗೂ ಜನರು ತೆರೆದ ಕಿವಿಯಾಗಿದ್ದರು. ಭಾಷಣದ ನಡುವೆ ಮುಷ್ಟಿ ಕಟ್ಟಿ ಕೈ ಮೇಲಕ್ಕೆತ್ತಿದ ಅವರು “ಕರೋ ಯಾ ಮರೋ [ಸಾಧಿಸಿ, ಇಲ್ಲವೇ ಸಾಯಿರಿ]” ಎಂದು ಘೋಷಣೆ ಕೂಗಿದರು.

ಈ ಒಂದು ಘೋಷಣೆಯೇ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು. ಅಂದು ಅವರು ನೀಡಿದ ಇನ್ನೊಂದು ಘೋಷಣೆ ʼಬ್ರಿಟಿಷರೇ ಭಾರತ ಬಿಟ್ಟು ತೊಲಗಿʼ ಹೀಗೆ ಕೆಚ್ಚಿನಿಂದ ಘೋಷಣೆ ಕೂಗಿದ್ದು ಮತ್ಯಾರೂ ಅಲ್ಲ. ಅವರೇ ಮಹಾತ್ಮ ಗಾಂಧಿ ಅಥವಾ ಮೋಹನ್ ದಾಸ್ ಕರಮ್ ಚಂದ್ ಗಾಂಧಿ.

ಗಾಂಧಿಯವರ ಈ ಘೋಷಣೆಯಿಂದ ಅಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮೈಯಲ್ಲಿ ವಿದ್ಯುತ್‌ ಸಂಚಾರವಾಯಿತು. ಆ ದಿನ ಬಾಂಬೆಯಲ್ಲಿ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಪತನದ ಆರಂಭಕ್ಕೆ ನಾಂದಿ ಹಾಡಲಾಯಿತು. ಎಲ್ಲೆಡೆ ಬ್ರಿಟಿಷ್‌ ವಿರೋಧಿ ಘೋಷಣೆಗಳು ಮೊಳಗತೊಡಗಿದವು. ಕ್ವಿಟ್ ಇಂಡಿಯಾ ಘೋಷಣೆ ಎಲ್ಲ ದಿಕ್ಕುಗಳಲ್ಲೂ ಪ್ರತಿಧ್ವನಿಸಿತು. ಆ ದಿನದ ಸೂರ್ಯ ಸ್ವಾತಂತ್ರ್ಯದ ಉದಯದ ಕನಸಿನೊಡನೆ ಕಡಲಿನಲ್ಲಿ ಲೀನವಾದನು.

ಭಾರತದ ಸ್ವಾತಂತ್ರ್ಯಕ್ಕೆ ಕೆಲವು ವರ್ಷಗಳ ಮೊದಲು ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳವಳಿಯು ‘ಕ್ವಿಟ್ ಇಂಡಿಯಾ’ ಚಳವಳಿಯಾಗಿದ್ದು, ಇದರಲ್ಲಿ ದೇಶಾದ್ಯಂತ ಲಕ್ಷಾಂತರ ಜನರು ಭಾಗವಹಿಸಿದ್ದರು ಮತ್ತು ದೇಶದ ಎಲ್ಲಾ ಜೈಲುಗಳು ಬ್ರಿಟಿಷ್ ಸರ್ಕಾರದಿಂದ ಕಾರ್ಯಕರ್ತರ ಬಂಧನದಿಂದ ತುಂಬಿದ್ದವು.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವು ವರ್ಷಗಳ ಮೊದಲು ಆರಂಭವಾದ ದೊಡ್ಡ ಚಳವಳಿ ಎಂದರೆ ‘ಕ್ವಿಟ್ ಇಂಡಿಯಾ’ ಚಳವಳಿ. ಈ ಆಂದೋಲನದಲ್ಲಿ ದೇಶಾದ್ಯಂತ ಲಕ್ಷಾಂತರ ಜನರು ಭಾಗವಹಿಸಿದ್ದರು. ಬ್ರಿಟಿಷ್ ಸರ್ಕಾರ ಎಲ್ಲೆಂದರಲ್ಲಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದ ಕಾರಣ ದೇಶದ ಜೈಲುಗಳೆಲ್ಲ ಭರ್ತಿಯಾಗಿದ್ದವು.

ಕ್ವಿಟ್ ಇಂಡಿಯಾ ಕಥೆ..

ಜುಲೈ 14, 1942ರಂದು ವಾರ್ಧಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಬ್ರಿಟಿಷ್ ದೊರೆಗಳು ಭಾರತವನ್ನು ಜನರ ಕೈಗೆ ಒಪ್ಪಿಸಬೇಕು ಎಂದು ಸಮ್ಮೇಳನ ನಿರ್ಧರಿಸಿತು. ಅದಾದ ಒಂದು ತಿಂಗಳೊಳಗೆ, ಆಗಸ್ಟ್ 7ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಬಾಂಬೆಯಲ್ಲಿ ಮತ್ತೆ ಸಭೆ ಸೇರಿತು. ಆಗಸ್ಟ್ 8ರಂದು ಆ ಸಭೆಯಲ್ಲಿ ʼಬ್ರಿಟಿಷರೇ ಭಾರತ ಬಿಟ್ಟು ತೊಲಗಿʼ ಎನ್ನುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಅಂದು ಸಂಜೆ ಗೋವಾಲಿಯಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಗಾಂಧಿ ಈ ನಿರ್ಣಯವನ್ನು ಪ್ರಕಟಿಸಿದರು.

 ಅಂದು ಸಂಜೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ನಡೆದ ಅಧಿವೇಶನದಲ್ಲಿ ಮುಖ್ಯವಾಗಿ ನಾಲ್ಕು ಜನರು ಮಾತನಾಡಿದರು, ಮೊದಲು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನಿರ್ಣಯದ ಪ್ರತಿಯನ್ನು ಓದಿದರು, ನಂತರ ಸರ್ದಾರ್ ಪಟೇಲ್ ಸಭಿಕರನ್ನುದ್ದೇಶಿಸಿ ಮಾತನಾಡಿದರು ಮತ್ತು ನೆಹರೂ ಸಭೆಯ ನಿರ್ಣಯವನ್ನು ಸಮರ್ಥಿಸಿಕೊಂಡರು.

ಕ್ವಿಟ್‌ ಇಂಡಿಯಾ ಚಳವಳಿ

ಈ ಮೂವರ ಭಾಷಣದ ನಂತರ ಗಾಂಧಿ ಉಪನ್ಯಾಸ ನೀಡಿದರು. ಮಹಾತ್ಮಾ ಗಾಂಧಿಯವರ ಉಪನ್ಯಾಸ ಇಂಗ್ಲಿಷ್‌ನಲ್ಲಿತ್ತು. ಆ ಭಾಷಣದಲ್ಲಿ ಅವರು ‘ಕ್ವಿಟ್ ಇಂಡಿಯಾ’ ಘೋಷಣೆಯನ್ನು ಕೂಗಿದರು.

ಆಂಗ್ಲರಿಗೆ ನೀಡುವ ಕೊನೆಯ ಎಚ್ಚರಿಕೆ ತೀಕ್ಷ್ಣವಾಗಿರಬೇಕೆಂದು ಸಮಿತಿ ನಿರ್ಧರಿಸಿತ್ತು. ಹೀಗಾಗಿ ಈ ವಿಷಯದ ಕುರಿತು ಚರ್ಚಿಸಲು ಗಾಂಧಿ ಹಲವರನ್ನು ಸಂಪರ್ಕಿಸಿದ್ದರು. “ಕ್ವಿಟ್‌ ಇಂಡಿಯಾ” ಎನ್ನುವುದು ಜನರು ನೀಡಿದ ಹಲವು ಘೋಷಣೆಗಳಲ್ಲಿ ಒಂದಾಗಿತ್ತು.

ಮೊದಲಿಗೆ ಹಲವರು ʼಗೆಟ್‌ ಔಟ್‌ʼ ಎನ್ನುವ ಘೋಷಣೆಯ ಸಲಹೆಯನ್ನು ನೀಡಿದ್ದರು. ಆದರೆ ಆ ಸಲಹೆಯನ್ನು ಗಾಂಧಿ ಒಪ್ಪಿರಲಿಲ್ಲ. ಆ ಘೋಷಣೆ ಅಹಂಕಾರದಿಂದ ಕೂಡಿದೆಯೆನ್ನುವುದು ಅವರ ಅನಿಸಿಕೆಯಾಗಿತ್ತು. ಸರ್ದಾರ್‌ ಪಟೇಲ್‌ ಅವರು ʼರಿಟ್ರೀಟ್‌ ಇಂಡಿಯಾʼ ಮತ್ತು ʼವಿತ್‌ ಡ್ರಾ ಇಂಡಿಯಾʼ ಎನ್ನುವ ಘೋಷಣೆಗಳನ್ನೂ ನೀಡಿದ್ದರು. ಆದರೆ ಅವು ಅನುಮೋದನೆಗೊಳ್ಳಲಿಲ್ಲ.

ಆಗ ಕಾಂಗ್ರೆಸ್ ಸದಸ್ಯ ಯೂಸುಫ್ ಮಹರ್ ಅಲಿಯವರು ‘ಕ್ವಿಟ್ ಇಂಡಿಯಾ’ ಎನ್ನುವ ಘೋಷಣೆಯನ್ನು ಸೂಚಿಸಿದಾಗ, ಗಾಂಧಿ ತಕ್ಷಣವೇ ಒಪ್ಪಿಕೊಂಡರು. ಈ ಹಿಂದೆ ಸೈಮನ್ ಕಮಿಷನ್ ರಚನೆಯಾದ ಸಂದರ್ಭದಲ್ಲೂ ಯೂಸುಫ್ ಮಹರ್ ಅಲಿ ‘ಸೈಮನ್ ಗೋ ಬ್ಯಾಕ್’ ಎಂಬ ಜನಪ್ರಿಯ ಘೋಷಣೆಯನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಸಮಾಜವಾದಿ ಸಿದ್ಧಾಂತದ ನಾಯಕರಲ್ಲಿ ಯೂಸುಫ್ ಒಬ್ಬರಾಗಿದ್ದರು. ಯೂಸುಫ್ ಅವರು ಕ್ವಿಟ್ ಇಂಡಿಯಾ ಘೋಷಣೆಯನ್ನು ಸೂಚಿಸಿದ ಸಂದರ್ಭದಲ್ಲಿ ಬಾಂಬೆ ಮೇಯರ್ ಆಗಿ ಕೆಲಸ ಮಾಡುತ್ತಿದ್ದರು.

ಬಂಧನಗಳ ಸರಮಾಲೆ…

ಈ ʼಕ್ವಿಟ್‌ ಇಂಡಿಯಾʼ ಘೋಷಣೆ ಜನರಿಗೂ ಮೆಚ್ಚುಗೆಯಾಯಿತು. ಈ ಆಂದಲೋನಕ್ಕೆ ಜನಸಾಗರವೇ ಹರಿದು ಬಂದಿತು. ಬ್ರಿಟಿಷರ ವಿರುದ್ಧದ ಈ ಅಂತಿಮ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿಯವರು ಸಂಪೂರ್ಣವಾಗಿ ಸಿದ್ಧರಾಗಿದ್ದರು. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಳವಳಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಆಂದೋಲನದ ತೀವ್ರತೆಯನ್ನು ಗಮನಿಸಿದ ಬ್ರಿಟಿಷ್ ಸರ್ಕಾರವು ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಲು ಪ್ರಾರಂಭಿಸಿತು. ಗೋವಾಲಿಯಾ ಮೈದಾನದಲ್ಲಿ ಮೊದಲು ಮಾತನಾಡಿದ ನಾಲ್ವರು ನಾಯಕರಾದ ಮೌಲಾನಾ ಅಬುಲ್ ಕಲಾಂ ಆಜಾದ್, ನೆಹರು, ಪಟೇಲ್ ಮತ್ತು ಗಾಂಧಿಯವರನ್ನು ಬಂಧಿಸಿದರು. ಬಂಧನದ ಮರುದಿನ ಅವರನ್ನು ಜೈಲಿಗೆ ಹಾಕಲಾಯಿತು.s

ಅಂದು ಗಾಂಧಿಯವರನ್ನು ಪುಣೆಯ ಅಗಾಖಾನ್ ಮಹಲ್‌ನಲ್ಲಿ ಇರಿಸಲಾಗಿತ್ತು ಮತ್ತು ಇತರ ಮೂವರನ್ನು ದೇಶಾದ್ಯಂತ ವಿವಿಧ ಜೈಲುಗಳಿಗೆ ಕಳುಹಿಸಲಾಯಿತು. ಕೆಲವರು ಜೈಲಿಗೆ ಹೋದರೆ, ಇನ್ನೂ ಕೆಲವರು ಭೂಗತರಾಗಿ ಹೋರಾಟ ಮುಂದುವರೆಸಿದರು.

ಈ ಸಮಯದ ಕೆಲವು ಘಟನೆಗಳು ಕುತೂಹಲಕಾರಿಯಾಗಿವೆ.

ಸೇಠ್ ಜೀ ವೇಷ ಧರಿಸಿದ ಸಾನೆ ಗುರೂಜಿ

ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಘೋಷಣೆಯನ್ನು ನೀಡಿದ ನಂತರ ಪಾಂಡುರಂಗ ಸದಾಶಿವ ಸಾನೆ (ಸಾನೆ ಗುರೂಜಿ) ಖಾಂಡೇಶ್‌ನ ಅಮ್ಮಲ್ನೇರ್‌ನಲ್ಲಿದ್ದರು. ದೇಶದಲ್ಲಿ ಅನೇಕ ಸಮಾಜವಾದಿಗಳು ಭೂಗತರಾಗಿದ್ದಾರೆ ಮತ್ತು ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆಂದು ಅವರಿಗೆ ತಿಳಿಯಿತು.

ಈ ವೇಳೆ ಸಾನೆ ಗುರೂಜಿ ಅವರು ಸತಾರಾ ಮತ್ತು ಖಾಂಡೇಶ್ ಪ್ರದೇಶಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ರಹಸ್ಯ ಸಭೆ ನಡೆಸಿ ಮಾರ್ಗದರ್ಶನ ನೀಡಿದರು. ಮುಂಬೈಯಲ್ಲಿ ಸಾನೆ ಗುರೂಜಿ ಭೂಗತರಾಗಿ ಅಡುಗೆಯವರೊಂದಿಗೆ ಇದ್ದರು.

ಭೂಗತರಾದ ಕಾರ್ಯಕರ್ತರು ತಾವಿರುವ ಪ್ರದೇಶಗಳಿಗೆ ಕೋಡ್ ಭಾಷೆಯಲ್ಲಿ ಹೆಸರಿಟ್ಟರು. ಸಾಂತ್ವಾಡಿ, ಹಡಲ್ ಹೌಸ್, ಮೂಶಿಕ್ ಮಹಲ್ ಇವುಗಳಲ್ಲಿ ಕೆಲವು. ಸಾನೆ ಗುರೂಜಿ ಅವರು ಭೂಗತ ಜನರನ್ನು ಭೇಟಿಯಾಗಲು ಹೋಗುವಾಗ ಬೇರೆ ವೇಷ ಧರಿಸುತ್ತಿದ್ದರು.

ಒಮ್ಮೆ ಅವರು ವ್ಯಾಪಾರಿಯಂತೆ ಶೇಟುಗಳ ವೇಷ ತೊಟ್ಟರೆ, ಇನ್ನೊಮ್ಮೆ ರೈತನ ವೇಷದಲ್ಲಿರುತ್ತಿದ್ದರು. ಒಮ್ಮೆ ಅವರು ಜಯಪ್ರಕಾಶ್‌ ನಾರಾಯಣ್‌ ಅವರಿಗೆ ಊಟ ತಲುಪಿಸುವ ಸಲುವಾಗಿ ವೈದ್ಯರ ವೇಷ ತೊಟ್ಟಿದ್ದರು.

18 ಏಪ್ರಿಲ್ 1943ರ ಹೊತ್ತಿಗೆ ಸಾನೆ ಗುರೂಜಿಯವರ ಭೂಗತ ಚಟುವಟಿಕೆಗಳು ಕೊನೆಗೊಂಡವು. ಅಂದು ಪೊಲೀಸರು ಮೂಶಿಕ್ ಮಹಲ್ಲಿನಲ್ಲಿ ಅವರನ್ನು ಬಂಧಿಸಿದ್ದರು. ಇವರೊಂದಿಗೆ ಶ್ರೀ ಭಾವು ಲಿಮಯೆ ಮತ್ತು ಎನ್.ಜಿ.ಗೋರೆ ಸೇರಿದಂತೆ 14 ಮಂದಿ ಕಾರ್ಯಕರ್ತರನ್ನು ಸರ್ಕಾರ ವಶಕ್ಕೆ ಪಡೆದು ಯರವಾಡ ಜೈಲಿಗೆ ಕಳುಹಿಸಿತು.

ಇಲ್ಲಿಯೂ ಸಾನೆ ಗುರೂಜಿ ಅವರು ಈಗಾಗಲೇ ಜೈಲಿನಲ್ಲಿದ್ದ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ನಂತರ ಅವರನ್ನು ಯರವಾಡದಿಂದ ನಾಸಿಕ್‌ ಜೈಲಿಗೆ ಕಳುಹಿಸಲಾಯಿತು.

ಕ್ವಿಟ್ ಇಂಡಿಯಾ ಚಳವಳಿಯ ಯಶಸ್ಸಿನ ನಂತರ, ಸಾನೆ ಗುರೂಜಿಯವರನ್ನು ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು 46 ಎತ್ತಿನ ಬಂಡಿಗಳ ಮೆರವಣಿಗೆಯಲ್ಲಿ ಜಲಗಾಂವ್ ಪಟ್ಟಣಕ್ಕೆ ಕರೆದೊಯ್ದರು.

ಗಾಂಧಿಯನ್ನು ಭೇಟಿಗಾಗಿ ಪ್ರಾಣ ಲೆಕ್ಕಿಸದ ಅರುಣಾ ಅಸಫ್ ಅಲಿ

ಅರುಣಾ ಅಸಫ್ ಅಲಿಯವರು ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಭಾಗವಹಿಸಿದ್ದರು. ಗಾಂಧಿಯವರಿಗೂ ಆಕೆಯ ಭೂಗತ ಚಲನೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಗಾಂಧಿಯನ್ನು ಭೇಟಿಯಾಗುವ ಸಲುವಾಗಿ ಅರುಣಾ ಅಸಫ್ ಅಲಿವರು ತೋರಿದ ಧೈರ್ಯ ಐತಿಹಾಸಿಕವಾದದ್ದು.

ಅರುಣಾ ಅಸಫ್ ಅಲಿ ಸಮಾಜವಾದಿ ಸಿದ್ಧಾಂತಕ್ಕೆ ಸೇರಿದವರು. ಆ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಎಲ್ಲ ಸಮಾಜವಾದಿ ನಾಯಕರನ್ನು ಒಬ್ಬೊಬ್ಬರಾಗಿ ಜೈಲಿಗೆ ಕಳುಹಿಸಲಾಗುತ್ತಿತ್ತು. ಆ ಸಮಯದಲ್ಲಿ ಬ್ರಿಟಿಷರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿಸಿ ಜಯಪ್ರಕಾಶ ನಾರಾಯಣ್‌ ಅವರನ್ನು ಐಸ್‌ ಬ್ಲಾಕ್‌ ಮೇಲೆ ಮಲಗಿಸಿ ಹಿಂಸಿಸಲಾಗಿತ್ತು.

ಅರುಣಾ ಯೂಸಫ್‌ ಅಲಿ

ಈ ಸುದ್ದಿ ಕೇಳಿ ಇಡೀ ದೇಶವೇ ಅಂದು ಆಘಾತಕ್ಕೆ ಒಳಗಾಗಿತ್ತು. ಇದರಿಂದ ಆಕ್ರೋಶಕ್ಕೆ ಒಳಗಾದ ಅರುಣ ಅಸಿಫ್‌ ಅಲಿ ಸರ್ಕಾರದ ವಿರುದ್ಧ ಹೋರಾಡಲೂ ಯಾವುದೇ ಮಟ್ಟಕ್ಕೆ ಇಳಿಯಲು ಸಿದ್ಧರಾದರು. ಅವರು ದೇಶಾದ್ಯಂತ ಪ್ರವಾಸ ಮಾಡಿ ಚಳವಳಿಯಲ್ಲಿ ಭಾಗವಹಿಸುವಂತೆ ಯುವಕರನ್ನು ಹುರಿದುಂಬಿಸಿದರು. ಅವರ ಆರೋಗ್ಯ ಹದಗೆಡುತ್ತಿದ್ದರೂ ದೇಶಕ್ಕಾಗಿ ನಡೆಯುತ್ತಿದ್ದ ಈ ಹೋರಾಟದಿಂದ ಅವರು ಹಿಮ್ಮೆಟ್ಟಿರಲಿಲ್ಲ. ದೇಶದೆಲ್ಲೆಡೆ ಓಡಾಡುತ್ತಾ ಭೂಗತವಾಗಿ ಹೋರಾಟ ಸಂಘಟಿಸುತ್ತಿದ್ದರು.

ಅರುಣಾರ ಆರೋಗ್ಯದ ಕುರಿತು ಕಳವಳಗೊಂಡ ಗಾಂಧಿ ಅವರನ್ನು ತನ್ನ ಭೇಟಿಗಾಗಿ ಕರೆದರು. ಅವರೊಂದಿಗಿನ ಭೇಟಿಯ ಜವಬ್ದಾರಿಯನ್ನು ಅಂದು ಪಿ ಜಿ ಪ್ರಧಾನ್‌ ಅವರಿಗೆ ವಹಿಸಲಾಗಿತ್ತು.

ಆಗ ಪುಣೆಯ ಪಾರ್ಸಿ ಆಸ್ಪತ್ರೆಯ ಹಿಂಭಾಗದ ಗುಡಿಸಲಿನಲ್ಲಿ ಗಾಂಧಿ ವಾಸವಾಗಿದ್ದರು. ಗುಡಿಸಲು ಕ್ಷಯರೋಗ ಆಸ್ಪತ್ರೆಯ ಭಾಗವಾಗಿದ್ದರಿಂದ ಇಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ಅರುಣಾ ಈ ಸಂದರ್ಭವನ್ನು ಅವಕಾಶವನ್ನಾಗಿ ಬಳಸಿಕೊಂಡು ಇಲ್ಲಿಗೆ ಬಂದರು.

ಆ ದಿನ ಅವರು ಓರ್ವ ಪಾರ್ಸಿ ಮಹಿಳೆಯ ವೇಷ ಧರಿಸಿ ಬಂದಿದ್ದರು. ಗಾಂಧಿಯವರನ್ನು ಭೇಟಿಯಾಗಲು ಅವರಿಗೆ ಕಪಾಡಿಯ ಎನ್ನುವ ಕೋಡ್‌ ವರ್ಡ್‌ ನೀಡಲಾಗಿತ್ತು.

ಅರುಣಾರನ್ನು ಭೇಟಿಯಾದ ಗಾಂಧಿಯವರು ಅರುಣಾರ ಬಳಿ ಪೊಲೀಸರಿಗೆ ಶರಣಾಗುವಂತೆ ವಿನಂತಿಸಿದರು. ಆದರೆ ಅವರು “ನನಗೆ ನಿಮ್ಮ ಮೇಲೆ ಬಹಳ ಗೌರವವಿದೆ. ಆದರೆ ನಮ್ಮಿಬ್ಬರ ನಡುವೆ ಅಭಿಪ್ರಾಯ ಭೇದವಿದೆ. ನಾನೊಬ್ಬಳು ಕ್ರಾಂತಿಕಾರಿ. ಹೀಗಾಗಿ ಕ್ರಾಂತಿಕಾರಿಯಂತೆಯೇ ವರ್ತಿಸುತ್ತೇನೆ. ನನ್ನ ಈ ನಡೆ ನಿಮಗೆ ಇಷ್ಟವಾದರೆ ನನ್ನನ್ನು ಆಶೀರ್ವದಿಸಿ” ಎಂದು ಹೇಳಿದರು.

ತತ್ವ ಸಿದ್ಧಾಂತಗಳು ಬೇರೆಯಾಗಿದ್ದರೂ ಅಂದು ಆಕೆ ಗಾಂಧಿಯವರನ್ನು ಭೇಟಿಯಾಗಲು ಹೋಗಿದ್ದರು. ಮತ್ತು ತನ್ನ ಸೈದ್ಧಾಂತಿಕ ಬದ್ಧತೆಯನ್ನು ಗಾಂಧಿಯವರೆದುರು ಸ್ಪಷ್ಟವಾಗಿ ನುಡಿದಿದ್ದರು. ಅವರನ್ನು ಹಿಡಿಯುವ ಪ್ರಯತ್ನಗಳು ವಿಫಲವಾದ ಕಾರಣ ಹತಾಶ ಬ್ರಿಟಿಷರು ಆಕೆಯನ್ನು ಹಿಡಿದುಕೊಟ್ಟವರಿಗೆ 5,000 ರೂಪಾಯಿಗಳ ಬಹುಮಾನ ಕೊಡುವುದಾಗಿ ಘೋಷಿಸಿದ್ದರು.

ಝಾನ್ಸಿಯ ರಾಣಿ ಲಕ್ಷ್ಮಿಬಾಯಿಯ ನಂತರ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ದಿಟ್ಟ ಮಹಿಳೆಯರಲ್ಲಿ ಅರುಣಾ ಕೂಡಾ ಒಬ್ಬರು ಎಂದು ಯೂಸುಫ್ ಮಹರ್ ಅಲಿ ಹೇಳುತ್ತಾರೆ.

ಮದುವೆಯಾದ ಎರಡು ತಿಂಗಳಿಗೆ ಜೈಲು ಸೇರಿದ ಯಶವಂತ್ ರಾವ್

ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ 1942ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಕ್ವಿಟ್ ಇಂಡಿಯಾ ಘೋಷಣೆ ಜಾರಿಗೆ ಬಂದ ಕೂಡಲೇ ಚಳವಳಿಗೆ ಧುಮುಕಿದರು. ಚಳುವಳಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಕ್ಕಾಗಿ ಅವರು ಮದುವೆಯಾದ ಎರಡು ತಿಂಗಳೊಳಗೆ ಜೈಲಿಗೆ ಹೋಗಬೇಕಾಯಿತು.

ಯಶವಂತ ರಾವ್‌ ಅವರನ್ನು ಮದುವೆಯಾಗಿದ್ದ ವೇಣುತಾಯಿ ತಾನೊಬ್ಬ ಕ್ರಾಂತಿಕಾರಿಯನ್ನು ಮದುವೆಯಾಗಿರುವುದಾಗಿ ಘೋಷಿಸಿದರು. ಅವರು ಜೂನ್‌ 2 1942ರಂದು ಮದುವೆಯಾದರು. ಮದುವೆಯ ಆರಂಭಿಕ ವರ್ಷಗಳಲ್ಲಿ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂತಾದರೂ ಅವರು ಅದರಿಂದ ಎದೆಗುಂದಲಿಲ್ಲ.

ಯಶವಂತ್ ರಾವ್ ಚಳವಳಿಯಲ್ಲಿ ಸಕ್ರಿಯರಾಗಿದ್ದರಿಂದ ಅವರ ಪತ್ನಿ ವೇಣುತಾಯಿಯನ್ನೂ ಬಂಧಿಸಲಾಗಿತ್ತು. ಅವು ಸಂಕ್ರಾಂತಿ ಹಬ್ಬದ ದಿನಗಳು. ಮದುವೆಯಾದ ಮೊದಲ ಸಂಕ್ರಾಂತಿಯಂದು ತನ್ನಿಂದಾಗಿ ಹೆಂಡತಿ ಜೈಲಿಗೆ ಹೋಗಬೇಕಾಯಿತು ಎಂದು ಯಶವಂತ್ ರಾವ್ ಆಗಾಗ ದುಃಖಿಸುತ್ತಿದ್ದರು. ಆದರೆ ವೇಣುತಾಯಿ ಈ ಎಲ್ಲಾ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಿದರು.

ಗಾಂಧಿ ಆಪ್ತ ಮಹಾದೇವ ದೇಸಾಯಿ ನಿಧನ

ಮಹದೇವ್ ದೇಸಾಯಿ 1917ನೇ ಇಸವಿಯಿಂದ ಮಹಾತ್ಮ ಗಾಂಧಿಯವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅಂದಿನಿಂದ ಸಾಯುವವರೆಗೂ ಅಂದರೆ 25 ವರ್ಷಗಳ ಕಾಲ ಗಾಂಧಿಯ ಒಡನಾಡಿಯಾಗಿ ನೆರಳಿನಂತೆ ಜೊತೆಗಿದ್ದರು. ಅವರು ಗಾಂಧಿಯವರಿಗಾಗಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದರು. ಕಾರ್ಯದರ್ಶಿ, ಬರಹಗಾರ, ಅನುವಾದಕ, ಸಲಹೆಗಾರ, ಸಂವಹನಕಾರ…ಮತ್ತು ಇನ್ನೂ ಬಹಳಷ್ಟು. ಗಾಂಧಿಯವರಿಗೆ ಊಟ ಬಡಿಸುತ್ತಿದ್ದವರು ಕೂಡಾ ಅವರೇ.

ಮಹಾತ್ಮ ಗಾಂಧಿ ಕುರಿತು ಪುಸ್ತಕ ಬರೆದಿರುವ ರಾಮಚಂದ್ರ ಗುಹಾ ಹೇಳುವಂತೆ, ಗಾಂಧಿಯವರಿಗೆ ಮಹಾದೇವ ದೇಸಾಯಿಯವರು ತಯಾರಿಸುತ್ತಿದ್ದ ಕಿಚಡಿಯೆಂದರೆ ಬಹಳ ಇಷ್ಟ.

ಮಹಾದೇವ ದೇಸಾಯಿ

ಕ್ವಿಟ್ ಇಂಡಿಯಾ ಘೋಷಣೆ ಕೂಗಿದ್ದಕ್ಕಾಗಿ ಗಾಂಧಿಯವರನ್ನು ಬಂಧಿಸಿ ಪುಣೆಯ ಅಗಾಖಾನ್ ಅರಮನೆಯಲ್ಲಿ ಇರಿಸಲಾಗಿತ್ತು. ಅದೇ ಸಮಯದಲ್ಲಿ ಕಸ್ತೂರಬಾ ಗಾಂಧಿ ಮತ್ತು ಮಹಾದೇವ ದೇಸಾಯಿ ಅವರನ್ನೂ ಬಂಧಿಸಲಾಯಿತು. ಏತನ್ಮಧ್ಯೆ, ಮಹಾದೇವ ದೇಸಾಯಿ ಅವರು 15 ಆಗಸ್ಟ್ 1942ರಂದು ಹೃದಯಾಘಾತದಿಂದ ನಿಧನರಾದರು. ಆಗ ಅವರಿಗೆ 50 ವರ್ಷ ವಯಸ್ಸಾಗಿತ್ತು.

ಮಹಾತ್ಮ ಗಾಂಧೀಜಿಯವರು ಮಹದೇವ್ ದೇಸಾಯಿಯವರ ಸಾವಿನಿಂದ ತೀವ್ರ ಆಘಾತಕ್ಕೊಳಗಾದರು. ಸ್ವಾತಂತ್ರ್ಯ ಪೂರ್ವದ ಅತಿ ದೊಡ್ಡ ಚಳವಳಿಯಲ್ಲಿ ಮಹದೇವ ದೇಸಾಯಿ ಜೊತೆಯಲ್ಲಿ ಗಾಂಧಿ ಇರಲಿಲ್ಲ. ಮಹದೇವ್ ದೇಸಾಯಿ ನಿಧನದ ನಂತರ ಗಾಂಧಿ ಅವರನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು ಎಂದು ರಾಮಚಂದ್ರ ಗುಹಾ ಬರೆದಿದ್ದಾರೆ.

ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟಿನ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸ ಮಾಡುವಾಗ, ಗಾಂಧಿಯವರು ತಮ್ಮ ಹಿರಿಯ ಸೊಸೆ ಮನುವಿಗೆ ಹೇಳಿದರು, “ನನಗೆ ಮಹಾದೇವ ಬಹಳ ನೆನಪಾಗುತ್ತಿದ್ದಾನೆ, ಅವನು ಇದ್ದಿದ್ದರೆ ಪರಿಸ್ಥಿತಿ ಇಷ್ಟು ಕೆಟ್ಟದಾಗುತ್ತಿರಲಿಲ್ಲ”. 1942ರ ಚಳವಳಿಯಲ್ಲಿ ಮಹಾದೇವ್ ಅವರ ಸಾವು ಗಾಂಧಿಯವರಿಗೆ ತುಂಬಲಾರದ ನಷ್ಟವಾಗಿ ಕಾಡಿತು.

ಚಳವಳಿಯಲ್ಲಿ ಭಾಗವಹಿಸಿದ ಕನಕಲತಾ, ಕಾಶಿಬಾಯಿ ಹನ್ವರ್

ರೋಹಿಣಿ ಗವಾಂಕರ್ ಅವರು ಸಾಧನಾ ಪತ್ರಿಕೆಯ 1997ರ ಸಂಚಿಕೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅದರಲ್ಲಿ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಹಿಳೆಯರ ಪಾತ್ರವನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿದ್ದಾರೆ.

ಅವರಲ್ಲಿ ಅಸ್ಸಾಂನ 16 ವರ್ಷದ ಬಾಲಕಿ ಕನಕಲತಾ ಬರುವಾ ಎನ್ನುವ ಯುವತಿಯ ಶೌರ್ಯ ಚಿರಸ್ಥಾಯಿಯಾಗಿದೆ. ಅವರು 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದರು. ಧ್ವಜವಂದನೆ ಸಲ್ಲಿಸಲು ಯುವಕರೊಂದಿಗೆ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದರು. ಕನಕಲತಾ ಬರುವಾ ಆ ದಿನ ಪೊಲೀಸ್ ಠಾಣೆ ಹೊರಗೆ ಮಾತನಾಡಿದರು.

ಕನಕಲತಾ ಬರುವಾ

ಆದರೆ ದ್ವಜಾರೋಹಣಕ್ಕೂ ಮುನ್ನ ಪೊಲೀಸರು ಅಲ್ಲಿ ನೆರೆದಿದ್ದ ಯುವಜನರ ಮೇಲೆ ಗುಂಡು ಹಾರಿಸಿದರು. ಈ ಗುಂಡಿನ ದಾಳಿಯಲ್ಲಿ ಕನಕಲತಾ ಬರುವಾ ಸಾವನ್ನಪ್ಪಿದ್ದರು. “ಸ್ವಾತಂತ್ರ್ಯಕ್ಕಾಗಿ ಮಡಿದ ಮೊದಲ ಯುವತಿ ಕನಕಲತಾ ಬರುವಾ” ಎಂದು ಗವಾಂಕರ್ ಬರೆದಿದ್ದಾರೆ.

ಆಂದೋಲನದ ಸಮಯದಲ್ಲಿ, ಉಷಾ ಮೆಹ್ತಾ ಅವರು ಗಾಂಧಿಯವರ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಭೂಗತ ರೇಡಿಯೋ ಕೇಂದ್ರವೊಂದನ್ನು ನಡೆಸುತ್ತಿದ್ದರು. 1942ರ ಹೊತ್ತಿಗೆ ಉಷಾ ಮೆಹ್ತಾ ಕಾಲೇಜಿನಲ್ಲಿ ಓದುತ್ತಿದ್ದರು. ಜೊತೆಗೆ ಬಾಂಬೆಯಲ್ಲಿ ರೇಡಿಯೋ ಸ್ಟೇಷನ್ ಸಹ ನಡೆಸುತ್ತಿದ್ದರು. ಈ ರೇಡಿಯೋದಲ್ಲಿ ಎರಡನೇ ಮಹಾಯುದ್ಧ ಹಾಗೂ ದೇಶಾದ್ಯಂತ ನಡೆಯುತ್ತಿರುವ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಅವರು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ರೇಡಿಯೋ ಕೇಂದ್ರದ ಸ್ಥಳವನ್ನು ಪದೇಪದೇ ಬದಲಾಯಿಸಬೇಕಿತ್ತು. ಹೇಗಾದರೂ ಮಾಡಿ ರೇಡಿಯೋ ಕೇಂದ್ರವನ್ನು ವಶಕ್ಕೆ ಪಡೆಯುವ ಪ್ರಯತ್ನದಲ್ಲಿ ಪೊಲೀಸರಿದ್ದರು. ಕೊನೆಗೆ ದೇಶದ್ರೋಹಿಯೊಬ್ಬ ನೀಡಿದ ಮಾಹಿತಿಯ ಮೇರೆಗೆ ಉಷಾ ಅವರನ್ನು ಅವರು ರೇಡಿಯೋ ಸ್ಟೇಷನ್ನಿನಲ್ಲಿ ವಾರ್ತೆ ಓದುತ್ತಿರುವಾಗಲೇ ಪೊಲೀಸರು ಬಂಧಿಸಿದರು.  

ಗವಾಂಕರ್ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ ಇನ್ನೊಬ್ಬ ಮಹಿಳೆಯೆಂದರೆ ಅವರು ಕಾಶಿಬಾಯಿ ಹನ್ವರ್. ನಾನಾ ಪಾಟೀಲ್ ರಚಿಸಿದ ಪರ್ಯಾಯ ಸರ್ಕಾರದಲ್ಲಿ ಕೆಲಸ ಮಾಡಿದ ಮಹಿಳೆಯರು ಸತಾರಾ ಜಿಲ್ಲೆಯಲ್ಲಿ ಬ್ರಿಟಿಷರಿಂದ ತೀವ್ರ ಕಿರುಕುಳವನ್ನು ಎದುರಿಸಬೇಕಾಯಿತು.

ಕಾಶೀಬಾಯಿ ಹನ್ವರ್ ಎನ್ನುವ ಮಹಿಳೆಯನ್ನು ಹಿಡಿದಿದ್ದ ಪೊಲೀಸರು ಆಕೆಯ ಬಾಯಿ ಬಿಡಿಸುವ ಸಲುವಾಗಿ ಹಿಂಸೆ ನೀಡುವಾಗ ಆಕೆಯ ಜನನಾಂಗಕ್ಕೆ ಖಾರದಪುಡಿಯನ್ನು ಹಾಕಿದ್ದರು. ಆಕೆ ಈ ಎಲ್ಲಾ ಅವಮಾನ ಮತ್ತು ಮಾನಭಂಗವನ್ನು ಹಲ್ಲುಕಚ್ಚಿ ಅನುಭವಿಸಿದರೇ ಹೊರತು, ಒಬ್ಬ ಕಾರ್ಯಕರ್ತನ ಹೆಸರನ್ನೂ ಪೊಲೀಸರೆದು ಬಾಯಿ ಬಿಡಲಿಲ್ಲ.

ಮೂಲ: BBC

Related Articles

ಇತ್ತೀಚಿನ ಸುದ್ದಿಗಳು