ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯ ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡಿದ್ದ ಸ್ಥಳೀಯ ದಲಿತ ಯೂಟ್ಯೂಬರ್ ಮಂಜುನಾಥ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಈ ಕ್ರಮವು ಸಂವಿಧಾನ ವಿರೋಧಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಮನಕಾರಿ ನೀತಿಯನ್ನು ಬಯಲು ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ನಡೆದ ಶಾಂತಿ ಸಭೆಗೆ ಟಿ. ನರಸೀಪುರ ಪೊಲೀಸ್ ಠಾಣೆಯಿಂದಲೇ ಕರೆ ಮಾಡಿ ವರದಿ ಮಾಡಲು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಅಧಿಕಾರಿಗಳು ಮಾತನಾಡಿದ ಅಂಶಗಳನ್ನೇ ಯೂಟ್ಯೂಬರ್ ವರದಿ ಮಾಡಿದ್ದು, ವಿವಾದ ಸೃಷ್ಟಿಯಾದ ನಂತರ ಪೊಲೀಸರ ಸೂಚನೆಯಂತೆ ವಿಡಿಯೋವನ್ನು ಡಿಲೀಟ್ ಕೂಡ ಮಾಡಲಾಗಿತ್ತು. ಆದರೂ, ವಿವಾದದ ಹೊಣೆಗಾರಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ವರದಿಗಾರನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ನೊಂದ ಯೂಟ್ಯೂಬರ್ ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.
ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆಕ್ರೋಶ ಹೊರಹಾಕಿರುವ ಆರ್. ಅಶೋಕ್, “ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು ಎಂದು ಸಮರ್ಥಿಸಿಕೊಳ್ಳುವ ಸರ್ಕಾರ, ಅದನ್ನು ವರದಿ ಮಾಡಿದ ಪತ್ರಕರ್ತನ ಮೇಲೆ ಎಫ್‌ಐಆರ್ ಹಾಕಿರುವುದಕ್ಕೆ ಏನು ಆಧಾರ? ಮಾಧ್ಯಮಗಳ ಬಾಯಿ ಮುಚ್ಚಿಸಲು ಪ್ರಕರಣ ದಾಖಲಿಸುವುದು ತುರ್ತು ಪರಿಸ್ಥಿತಿಯ ಪಾಳೇಗಾರಿಕೆ ಮನಸ್ಥಿತಿ” ಎಂದು ವಾಗ್ದಾಳಿ ನಡೆಸಿದ್ದಾರೆ.
ದಲಿತರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ, ಕರ್ತವ್ಯ ನಿರ್ವಹಿಸಿದ ದಲಿತ ಯೂಟ್ಯೂಬರ್‌ನ ಅಭಿವ್ಯಕ್ತಿ ಸ್ವಾತಂತ್ರ್ಯ ಏಕೆ ಕಾಣಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಇಂತಹ ಪ್ರಯತ್ನಗಳ ವಿರುದ್ಧ ವಿಪಕ್ಷವು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದಾರೆ. ಸರ್ಕಾರ ಕೂಡಲೇ ಪ್ರಕರಣದ ಪಾರದರ್ಶಕ ತನಿಖೆ ನಡೆಸಿ, ಯೂಟ್ಯೂಬರ್ ಮೇಲಿನ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
