“ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದು ಕಾಂಗ್ರೆಸ್ ನ ದ್ವೇಷದ ರಾಜಕಾರಣ. ಆ ಧ್ವನಿ ಮುದ್ರಣ ಅವರದ್ದೇ ಎಂಬ ಬಗ್ಗೆ ಅನುಮಾನಗಳಿವೆ. ಅವರನ್ನೇ ಉದ್ದೇಶಪೂರ್ವಕವಾಗಿ ಬಂಧಿಸಿರುವ ಹಿಂದೆ ಡಿಕೆ ಬ್ರದರ್ಸ್ ಕೈವಾಡವಿದೆ” ಇವು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಮಾತು.
ಶನಿವಾರ ಸಂಜೆಯ ವೇಳೆಗೆ ಬಂಧನಕ್ಕೊಳಗಾದ ಶಾಸಕ ಮುನಿರತ್ನ ವಿಚಾರವಾಗಿ ಮಾಧ್ಯಮಗಳು ಒಂದೊಂದೇ ಪ್ರತಿಪಕ್ಷಗಳ ನಾಯಕರ ಅಭಿಪ್ರಾಯ ಕೇಳುತ್ತಿರುವಾಗಲೇ ಪ್ರತಿಪಕ್ಷ ನಾಯಕ ಆರ್ ಅಶೋಕ್ ಶಾಸಕ ಮುನಿರತ್ನರನ್ನೇ ಸಮರ್ಥಿಸುವಂತೆ ಮಾತಾಡಿದ್ದಾರೆ.
ಒಕ್ಕಲಿಗ ಎಂಬ ಏಕೈಕ ಕಾರಣಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಂಡ ಆರ್ ಅಶೋಕ್ ಮಾತು ಒಂದು ಕಡೆ ಸಮುದಾಯದ ಪರ ಇರಲಿ, ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿದ ಮುನಿರತ್ನ ಮಾತನ್ನು ಖಂಡಿಸಬಹುದಿತ್ತು. ಆದರೆ ಇತ್ತ ಒಕ್ಕಲಿಗ ಸಮುದಾಯದ ಜೊತೆಗೂ ನಿಲ್ಲದೇ, ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಶಾಸಕನ ಪರ ವಹಿಸಿ ಮಾತಾಡಿದ್ದು ಒಕ್ಕಲಿಗ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೊಂದು ಕಡೆ ದಲಿತರ ಬಗ್ಗೆಯೂ ಅಸಹ್ಯವಾಗಿ ಮಾತನಾಡಿದ ಮುನಿರತ್ನ ವಿರುದ್ಧವಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅತ್ಯಂತ ತೀಕ್ಷ್ಣವಾಗಿ ಖಂಡಿಸಿರುವುದು ಗಮನಾರ್ಹ. ಛಲವಾದಿ ನಾರಾಯಣಸ್ವಾಮಿಗೆ ಇರುವ ಸಾಮುದಾಯಿಕ ಬದ್ಧತೆ ಆರ್ ಅಶೋಕ್ ಗೆ ಇಲ್ಲವಾಯಿತಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಜಾತಿ ನಿಂದನೆ, ಕೀಳು ಪದ ಪ್ರಯೋಗ, ಜೀವ ಬೆದರಿಕೆ, ಭ್ರಷ್ಟಾಚಾರದಂತಹ ಕೃತ್ಯಗಳಲ್ಲಿ ಭಾಗಿಯ ಬಗ್ಗೆ ದೂರು ದಾಖಲಿಸಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮುನಿರತ್ನ ಈಗ ಪೊಲೀಸರ ಅತಿಥಿಯಾಗಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.