Saturday, March 15, 2025

ಸತ್ಯ | ನ್ಯಾಯ |ಧರ್ಮ

ಕೆಪಿಎಸ್‌‍ಸಿ ನೇಮಕಾತಿ ವಿಳಂಬ, ಪರೀಕ್ಷೆ ನಡೆಸುವಲ್ಲಿ ಎಡವಟ್ಟು ವಿಧಾನ ಸಭೆಯಲ್ಲಿ ಗುಡುಗಿದ ಆರ್ ಅಶೋಕ್‌

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ವಿಳಂಬ, ಪರೀಕ್ಷೆ ನಡೆಸುವಲ್ಲಿ ಎಡವಟ್ಟು, ವ್ಯವಸ್ಥೆಯ ವೈಫಲ್ಯದ ಆರೋಪದ ಕುರಿತ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಚರ್ಚೆಗೆ ಗ್ರಾಸವಾಯಿತು.ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ 2 ಲಕ್ಷ ಅಭ್ಯರ್ಥಿಗಳಿಗೆ ಕೆಪಿಎಸ್‌‍ಸಿಯಿಂದ ತೊಂದರೆಯಾಗಿದೆ. ಸರ್ಕಾರದ 30 ಕೋಟಿ ರೂ. ಹಣ ಖರ್ಚಾಗಿದೆ. ಕನ್ನಡ ಭಾಷೆಗೆ ಅಪಮಾನವಾಗಿದೆ, ಕನ್ನಡವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಪರೀಕ್ಷೆಗೆ 15 ಕೋಟಿ ರೂ. ವೆಚ್ಚವಾಗಿದೆ. ಬರಗಾಲ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿ ರೂಪಾಯಿ ಅನುದಾನಕ್ಕೂ ನಾವು ಮುಖ್ಯಮಂತ್ರಿಗಳ ಮನೆಗೆ ಹೋಗುತ್ತೇವೆ. 2 ಲಕ್ಷ ಅಭ್ಯರ್ಥಿಗಳು ಕೆಪಿಎಸ್‌‍ಸಿ ವ್ಯವಸ್ಥೆ ವೈಫಲ್ಯದಿಂದ ಬೀದಿಗೆ ಬಂದಿದ್ದಾರೆ. ಹೀಗೇ ಮುಂದುವರೆದರೆ ಎಷ್ಟು ಮಂದಿ ಉದ್ಯೋಗಾಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಈ ವಿಚಾರದ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಕೆಪಿಎಸ್‌‍ಸಿ ವಿರುದ್ಧ ರಸ್ತೆ ತಡೆ, ಪ್ರತಿಭಟನೆ ಆಗುತ್ತಿದೆ. ಸಭಾಧ್ಯಕ್ಷರೂ ಪತ್ರ ಬರೆದಿದ್ದಾರೆ. ಕೆಪಿಎಸ್‌‍ಸಿಯಿಂದ ಕನ್ನಡದ ಕೊಲೆಯಾಗಿದೆ. ಕನ್ನಡ ಉಳಿಯಬೇಕಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಯು.ಟಿ. ಖಾದರ್‌ ಮಾತನಾಡಿ, ಈ ವಿಚಾರವನ್ನು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಪ್ರಸ್ತಾಪಿಸಲು ಅವಕಾಶವಿದೆ ಎಂದರು.

ನಿರುದ್ಯೋಗ ಪದವೀಧರರ ಪಾಲಿಗೆ ಆಶಾಕಿರಣವಾಗಬೇಕಿದ್ದ ಕೆಪಿಎಸ್‌‍ಸಿ ಅವ್ಯವಸ್ಥೆಗಳ ಆಗರವಾಗಿದೆ. ಕೆಎಎಸ್‌‍ ಪರೀಕ್ಷೆ ಮತ್ತು ಮರುಪರೀಕ್ಷೆ ನಡೆಸುವಲ್ಲಿ ಪದೇ ಪದೆ ಎಡವಟ್ಟು ಮಾಡಿದೆ. ಪ್ರಶ್ನೆ ಪತ್ರಿಕೆಗಳ ತಯಾರಿಕೆ ಮತ್ತು ಅನುವಾದ ಮಾಡುವಲ್ಲಿ ಆಗುತ್ತಿರುವ ತಪ್ಪುಗಳಿಂದ ಪರೀಕ್ಷೆ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪ್ರಕಟಿಸುವಲ್ಲೂ ವಿಳಂಬವಾಗುತ್ತಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ. ಸರ್ಕಾರದ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣವಾಗಿದೆ ಎಂದು ದೂರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page