ಬೆಂಗಳೂರು: ಕರ್ನಾಟಕದಲ್ಲಿ ನಡೆದ ನಾಯಕತ್ವ ಬದಲಾವಣೆಯ ವಿಷಯವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಿದ್ದರಾಮಯ್ಯ ಅವರು ತಮ್ಮ ಉತ್ತರಾಧಿಕಾರಿ ಡಿ.ಕೆ. ಶಿವಕುಮಾರ್ ಅವರಿಗೆ ಚಲಾಯಿಸಲು ಒಂದು ಕೆಟ್ಟು ನಿಂತಿರುವ ಲಾರಿಯನ್ನು ಬಿಟ್ಟು ಸದ್ದಿಲ್ಲದೆ ನಿರ್ಗಮಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ, “ಕಾಂಗ್ರೆಸ್ ಸರ್ಕಾರವು ಒಂದು ಹಳೆಯ ಲಾರಿಯಿದ್ದಂತೆ. ಇಲ್ಲಿ ಕೇವಲ ಚಾಲಕ ಬದಲಾಗಿದ್ದಾನೆಯೇ ಹೊರತು ವಾಹನವಲ್ಲ. ಈ ಕೆಟ್ಟು ನಿಂತಿರುವ ವಾಹನವನ್ನು ದುರಸ್ತಿ ಮಾಡಲು ಸಾಧ್ಯವೇ ಇಲ್ಲ,” ಎಂದು ಟೀಕಿಸಿದರು.
ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ಅವರು ಸಾಲದ ಹಣದಲ್ಲೇ ಸರ್ಕಾರ ನಡೆಸಿದ್ದಾರೆ ಎಂದು ಆರೋಪಿಸಿದ ಅಶೋಕ, “ಬಾಕಿ ಉಳಿದಿರುವ ಬಿಲ್ ಹಾಗೂ ಸಾಲದ ಸಂಪೂರ್ಣ ಹೊರೆ ಈಗ ಶಿವಕುಮಾರ್ ಹೆಗಲಿಗೇರಿದೆ. ಈ ಹೊರೆಯನ್ನು ಸರಿದೂಗಿಸಲು ಅವರು ಜನರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೇರಲಿದ್ದಾರೆ,” ಎಂದರು.
“ರಾಜ್ಯದ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಪಾಯಿಯಾಗಿದ್ದರೆ, ಸಾಲದ ಮೊತ್ತ ಬರೋಬ್ಬರಿ 7.64 ಲಕ್ಷ ಕೋಟಿ ರೂಪಾಯಿ ತಲುಪಿದೆ. ಈ ವರ್ಷದ ಕೊರತೆಯು 94,428 ಕೋಟಿ ರೂಪಾಯಿಗಳಷ್ಟಿದೆ. ಹೀಗಿರುವಾಗ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣವೇ ಉಳಿದಿಲ್ಲ,” ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.
ಹಿಂದಿನ ಬಿಜೆಪಿ ಆಡಳಿತಾವಧಿಯನ್ನು ಸ್ಮರಿಸಿದ ಅವರು, “ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ 84,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ‘ಅವೈಜ್ಞಾನಿಕ ಗ್ಯಾರಂಟಿ’ ಯೋಜನೆಗಳ ಜಾರಿಯ ನಂತರ ಆ ಮೊತ್ತ ಸಂಪೂರ್ಣವಾಗಿ ಕುಸಿದಿದೆ,” ಎಂದು ದೂರಿದರು.
ಇದೇ ವೇಳೆ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅಶೋಕ, “ತಾವು ದೇಶದಲ್ಲೇ ಇರುವ ಏಕೈಕ ಹಿಂದುಳಿದ ವರ್ಗದ ಮುಖ್ಯಮಂತ್ರಿ ಮತ್ತು ಪ್ರಬಲ ಅಹಿಂದ ನಾಯಕ ಎಂಬ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ನಂಬಿದ್ದರು. ಆದರೆ ರಾಹುಲ್ ಗಾಂಧಿ ಅವರ ‘ಒತ್ತಡ’ಕ್ಕೆ ಮಣಿದು ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು,” ಎಂದು ಹೇಳಿದರು.
