ಇ-ಖಾತಾ ನೀಡಲು ಅಧಿಕಾರಿಗಳು ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದಾರೆ: ಆರ್. ಅಶೋಕ

ಬೆಂಗಳೂರು: ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಲು ಪಾಲಿಕೆ ಅಧಿಕಾರಿಗಳು ಫೋನ್ ಪೇ (PhonePe) ಮೂಲಕ ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಬುಧವಾರ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಈ ಕುರಿತು ತಮ್ಮ ಬಳಿ ಇರುವ “ಪುರಾವೆ”ಗಳನ್ನು ಸದನದ ಮುಂದಿಟ್ಟ ಅವರು, ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶೋಕ, “ಪ್ರತಿ ವಾರ್ಡ್‌ನಲ್ಲೂ 10-15 ಜನರ ತಂಡವೊಂದು ಇ-ಖಾತಾವನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದೆ. ಎಚ್‌ಬಿಆರ್ ಲೇಔಟ್‌ನಲ್ಲಿ ಬಿಡಿಎ ಹರಾಜಿನಲ್ಲಿ ಸೈಟ್ ಖರೀದಿಸಿದ ವ್ಯಕ್ತಿಯೊಬ್ಬರು ಇ-ಖಾತಾಕ್ಕಾಗಿ ಹೋದಾಗ, ಅಧಿಕಾರಿಗಳು ಅದು ‘ಬಿ’ ಖಾತಾ ಎಂದು ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ರಮೇಶ್ ಎಂಬ ಅಧಿಕಾರಿಯು ೩೦,೦೦೦ ರೂಪಾಯಿ ಲಂಚ ಕೇಳಿದ್ದು, ಮೊದಲ ಕಂತಿನ 15,000ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಪಡೆಯಲಾಗಿದೆ” ಎಂದು ಹೇಳಿ ವ್ಯವಹಾರದ ಸ್ಕ್ರೀನ್‌ಶಾಟ್ ಅನ್ನು ಸದನದಲ್ಲಿ ಪ್ರದರ್ಶಿಸಿದರು.

ಹಣ ನೀಡಿದರೂ ಮಾಲೀಕನ ಇ-ಖಾತಾ ಅರ್ಜಿಯನ್ನು ಮೂರು ಬಾರಿ ತಿರಸ್ಕರಿಸಲಾಗಿದೆ ಎಂದು ಅಶೋಕ ವಿವರಿಸಿದರು. “ಎರಡನೇ ಕಂತಿನ 20,000 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ನೀಡಿದರೂ ಕೆಲಸವಾಗಿಲ್ಲ. ಹಣ ವಾಪಸ್ ಕೇಳಿದರೆ ಅಧಿಕಾರಿ ನಿರಾಕರಿಸಿದ್ದಾನೆ. ಸಂತ್ರಸ್ತರು ಗ್ರಾಹಕ ನ್ಯಾಯಾಲಯ ಮತ್ತು ಸಹಾಯವಾಣಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇ-ಖಾತಾ ವಿತರಣೆಗೆ ಕನಕಪುರದಲ್ಲಿ 1 ಲಕ್ಷ ರೂ., ದೇವನಹಳ್ಳಿಯಲ್ಲಿ 50,000ರೂ. ಹಾಗೂ ಬೆಂಗಳೂರಿನಲ್ಲಿ ನಿವೃತ್ತ ಅಧಿಕಾರಿಯೊಬ್ಬರು ಪ್ರತಿ ಅರ್ಜಿಗೆ 30,00-40,000ರೂ. ವಸೂಲಿ ಮಾಡುತ್ತಿದ್ದಾರೆ ಎಂದು ದರ ಪಟ್ಟಿಯನ್ನೇ ಬಿಚ್ಚಿಟ್ಟರು.

ಇದೇ ವೇಳೆ ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಶೋಕ, “ಈಜಿಪುರ ಮೇಲ್ಸೇತುವೆ, ಉಲ್ಲಾಳ ಗ್ರೇಡ್ ಸಪರೇಟರ್ ಮತ್ತು ಕೆಂಗೇರಿ ಹೊರವರ್ತುಲ ರಸ್ತೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ. ಸರ್ಕಾರ ಬೆಂಗಳೂರಿಗೆ 7-8 ಸಾವಿರ ಕೋಟಿ ರೂ. ಘೋಷಣೆ ಮಾಡಿದೆಯಾದರೂ, ಬಿಡುಗಡೆಯಾಗಿರುವುದು ಕೇವಲ 3,00 ಕೋಟಿ ರೂ. ಮಾತ್ರ,” ಎಂದು ಟೀಕಿಸಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬೆಂಗಳೂರಿನ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅವರು ಮೌನ ವಹಿಸಿರುವುದನ್ನು ಅಶೋಕ ಪ್ರಶ್ನಿಸಿದರು. “ರೇವಂತ್ ರೆಡ್ಡಿ ಅವರನ್ನು ತಮ್ಮ ಸಹೋದರ ಎಂದು ಕರೆಯುವ ಶಿವಕುಮಾರ್, ಅದೇ ಸಹೋದರ ಬೆಂಗಳೂರನ್ನು ಹೈದರಾಬಾದ್‌ಗೆ ಹೋಲಿಸಬೇಡಿ ಎಂದು ಅವಹೇಳನ ಮಾಡಿದಾಗ ಯಾಕೆ ಸುಮ್ಮನಿದ್ದರು?” ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ವೈಫಲ್ಯಗಳು ಬೆಂಗಳೂರಿನ ಘನತೆಗೆ ಧಕ್ಕೆ ತರುತ್ತಿವೆ ಎಂದು ಅವರು ದೂರಿದರು.

Related Articles

ಇತ್ತೀಚಿನ ಸುದ್ದಿಗಳು