ಫಾರ್ಮ್‌ 7 ವಿವಾದ | ಸಾಕ್ಷಿಯಿದ್ದರೆ ಕೋರ್ಟ್‌ಗೆ ಹೋಗಿ, ಧರಣಿ ನಾಟಕ ಬೇಡ: ಡಿ.ಕೆ. ಶಿವಕುಮಾರ್‌ ವಿರುದ್ಧ ಆರ್‌ ಅಶೋಕ್‌ ಗರಂ

ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ‘ಫಾರ್ಮ್ 7’ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿಯಲ್ಲಿ ನಡೆಸಿದ ಧರಣಿ ಸತ್ಯಾಗ್ರಹವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಸರ್ಕಾರದ ಪ್ರಭಾವ ಬೀರುವ ಯತ್ನ ಇದಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ ಅಶೋಕ್, “ಅರ್ಜಿ ಸಲ್ಲಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ, ಬೀದಿಯಲ್ಲಿ ಹೋಗುವವರು ಕೂಡ ಅರ್ಜಿ ಸಲ್ಲಿಸಬಹುದು. ಆದರೆ, ಆ ಅರ್ಜಿಯನ್ನು ಪರಿಶೀಲಿಸಿ ಹೆಸರನ್ನು ಸೇರಿಸಬೇಕೋ ಅಥವಾ ಅಳಿಸಬೇಕೋ ಎಂಬುದನ್ನು ತೀರ್ಮಾನಿಸುವ ಅಂತಿಮ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಮಾತ್ರ,” ಎಂದು ಸ್ಪಷ್ಟಪಡಿಸಿದರು.

ಎಲ್ಲಾ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ಮತ್ತು ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಅವರು ವಿವರಿಸಿದರು.

ಧರಣಿ ನಾಟಕವಾಡುವ ಬದಲು ದಾಖಲೆಗಳೊಂದಿಗೆ ಬರುವಂತೆ ಸರ್ಕಾರಕ್ಕೆ ಸವಾಲು ಹಾಕಿದ ಅವರು, “ನಿಜವಾಗಿಯೂ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿದ್ದರೆ ಅಂತಹ ವ್ಯಕ್ತಿಗಳನ್ನು ನೇರವಾಗಿ ಆಯೋಗದ ಮುಂದೆ ನಿಲ್ಲಿಸಿ. ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿ ಅಥವಾ ನ್ಯಾಯಾಲಯದ ಮೊರೆ ಹೋಗಿ. ನಿಮ್ಮ ಬಳಿ ಸೂಕ್ತ ಪುರಾವೆಗಳಿದ್ದರೆ ನ್ಯಾಯಾಲಯವೇ ಆಯೋಗಕ್ಕೆ ಚಾಟಿ ಬೀಸುತ್ತದೆ,” ಎಂದರು.

ಇದೇ ವೇಳೆ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕರು, “ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಆಯೋಗವು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಅದರ ಮೇಲೆ ನಿಮ್ಮ ನಿಯಂತ್ರಣವಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ದೇಶದ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿದ ಅವರು, ಭಾರತೀಯ ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಅಕ್ರಮವಾಗಿ ನುಸುಳಿರುವ ವಲಸಿಗರಿಗೆ ಮತದಾರರ ಪಟ್ಟಿಯಲ್ಲಿ ಯಾವುದೇ ಸ್ಥಾನವಿರಬಾರದು, ಅವರು ದೇಶದ ಭದ್ರತೆಗೆ ಗಂಭೀರ ಬೆದರಿಕೆ ಎಂದು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು