ನಮ್ಮ ಮನೆ ಮುಂದೆ ಕಸ ಸುರಿದರೂ ಪರವಾಗಿಲ್ಲ, ಸರ್ಕಾರ ಪಾಪರ್ ಎಂದು ಘೋಷಿಸಿಕೊಳ್ಳಿ: ಡಿ.ಕೆ.ಶಿವಕುಮಾರ್‌ ಅವರಿಗೆ ಆರ್. ಅಶೋಕ್ ಬಹಿರಂಗ ಸವಾಲು

ಬೆಂಗಳೂರು: ರಾಜಧಾನಿಯ ಕಸ ವಿಲೇವಾರಿ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಗ್ದಾಳಿ ತಾರಕಕ್ಕೇರಿದೆ. “ಕಸ ವಿಲೇವಾರಿಗೆ ಅಡ್ಡಿಪಡಿಸಿದರೆ ಬಿಜೆಪಿ ನಾಯಕರ ಮನೆ ಮುಂದೆ ಕಸ ಸುರಿಯುತ್ತೇವೆ” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಠಿಣ ಪದಗಳಲ್ಲಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಡಿ.ಕೆ. ಶಿವಕುಮಾರ್ ಅವರ ಬೆದರಿಕೆಗೆ ತಾವು ಕಿಂಚಿತ್ತೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ನಮ್ಮ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಸುರಿದರೂ ನಮಗೆ ತೊಂದರೆಯಿಲ್ಲ. ಆದರೆ, ಕಸ ವಿಲೇವಾರಿ ಮಾಡಲು ಸರ್ಕಾರದ ಬಳಿ ಹಣವಿಲ್ಲ, ನಾವು ಪಾಪರ್ ಆಗಿದ್ದೇವೆ ಎಂದು ನೀವು ಬಹಿರಂಗವಾಗಿ ಘೋಷಿಸಿಕೊಳ್ಳಿ” ಎಂದು ಅವರು ಸವಾಲು ಹಾಕಿದರು.

ಕಸ ವಿಲೇವಾರಿ ಮಾಡುವ ಕನಿಷ್ಠ ಯೋಗ್ಯತೆ ಈ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ ಅಶೋಕ್, ಸಮಸ್ಯೆ ಬಗೆಹರಿಸಲು ಹಣ ಬಿಡುಗಡೆ ಮಾಡುವ ಬದಲು ಬೆದರಿಕೆ ಹಾಕುವುದು ಸರ್ಕಾರದ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. “ಜನರೇ ನಿಮಗೆ ಛೀಮಾರಿ ಹಾಕುವ ಕಾಲ ದೂರವಿಲ್ಲ. ಸಮಸ್ಯೆ ಬಗೆಹರಿಸುವ ಬದಲು ನಮ್ಮ ಮನೆ ಮುಂದೆ ಕಸ ಹಾಕುತ್ತೇನೆ ಎನ್ನುವುದು ಅಧಿಕಾರದಲ್ಲಿರುವವರಿಗೆ ಶೋಭೆ ತರುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು