ಒಂದೆಡೆ ಕೇಂದ್ರ ಸರ್ಕಾರವು ‘ನವ ಭಾರತ’ ಮತ್ತು ‘ವಿಕಸಿತ ಭಾರತ’ ಎಂಬ ಘೋಷಣೆಗಳೊಂದಿಗೆ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ದೇಶದ ವಿವಿಧ ಭಾಗಗಳಲ್ಲಿ ಸ್ವಂತ ಪೌರರ ಮೇಲೆಯೇ ಜನಾಂಗೀಯ ದ್ವೇಷದ ದಾಳಿಗಳು ಮಿತಿಮೀರುತ್ತಿವೆ.
ಇತ್ತೀಚೆಗೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ತ್ರಿಪುರಾದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ (24) ಎಂಬುವವರನ್ನು ಗುಂಪೊಂದು ಹತ್ಯೆ ಮಾಡಿರುವುದು ಈಶಾನ್ಯ ರಾಜ್ಯಗಳಲ್ಲಿ ಕಿಚ್ಚು ಹಚ್ಚಿದೆ. ಮಳಿಗೆಯೊಂದರಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾಗ ಏಂಜೆಲ್ ಮತ್ತು ಅವರ ಸಹೋದರನನ್ನು ‘ಚೀನಿಯರು’ ಎಂದು ಹೀಯಾಳಿಸಿದ ಗುಂಪು, ತಾವು ಭಾರತೀಯರು ಎಂದು ಸಾಬೀತುಪಡಿಸಲು ದಾಖಲೆ ಕೇಳಿದೆ. ಈ ಗಲಾಟೆಯಲ್ಲಿ ಏಂಜೆಲ್ ಅವರನ್ನು ಕತ್ತಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯ ಬೆನ್ನಲ್ಲೇ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ತಾರಕಕ್ಕೇರಿವೆ. ತ್ರಿಪುರಾ ಚಕ್ಮಾ ವಿದ್ಯಾರ್ಥಿ ಸಂಘಟನೆಯು ವಿವಿಧ ರಾಜ್ಯಗಳಲ್ಲಿ ತಮ್ಮವರ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳನ್ನು ತಡೆಯಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.
ವಿರೋಧ ಪಕ್ಷದ ನಾಯಕರು ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೋದಿ ಅವರ ಆಡಳಿತದಲ್ಲಿ ಸಮಾಜದಲ್ಲಿ ಅಸಹನೆ ಮತ್ತು ದ್ವೇಷದ ವಾತಾವರಣ ಹೆಚ್ಚುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಪೌರರ ಮೇಲೆ ಇಂತಹ ರಾಕ್ಷಸೀ ದಾಳಿಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಕೇವಲ ಉತ್ತರಾಖಂಡ ಮಾತ್ರವಲ್ಲದೆ, ಒಡಿಶಾ ಮತ್ತು ಕೇರಳ ರಾಜ್ಯಗಳಲ್ಲೂ ಇದೇ ಮಾದರಿಯ ದಾಳಿಗಳು ವರದಿಯಾಗಿವೆ. ಕೇರಳದ ಪಾಲಕ್ಕಾಡ್‌ನಲ್ಲಿ ಛತ್ತೀಸ್‌ಗಢದ ಕಾರ್ಮಿಕ ರಾಮನಾರಾಯಣ್ ಎಂಬುವವರನ್ನು ‘ಬಾಂಗ್ಲಾದೇಶಿ’ ಎಂದು ಕರೆದು ಗುಂಪೊಂದು ಹಲ್ಲೆ ನಡೆಸಿದೆ. ಅದೇ ರೀತಿ ಒಡಿಶಾದ ಸಂಬಲ್‌ಪುರದಲ್ಲಿ ಬಂಗಾಳದ ಜುಯೆಲ್ ರಾಣಾ ಎಂಬುವವರ ಮೇಲೆ ದಾಳಿ ನಡೆದಿದೆ.
ಈ ಇಬ್ಬರೂ ಕಾರ್ಮಿಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊರ ರಾಜ್ಯಗಳಿಂದ ಬಂದವರನ್ನು ವಿದೇಶಿಯರೆಂದು ಬಿಂಬಿಸಿ ಹತ್ಯೆ ಮಾಡುತ್ತಿರುವ ಈ ಪ್ರವೃತ್ತಿಯು ದೇಶದ ಆಂತರಿಕ ಭದ್ರತೆ ಮತ್ತು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
