Saturday, June 15, 2024

ಸತ್ಯ | ನ್ಯಾಯ |ಧರ್ಮ

ವಿಕಾರ ರೂಪ ಪಡೆಯುತ್ತಿರುವ ಮತೀಯ ದ್ವೇಷ

‘ತರಕಾರಿ ಬೆಲೆ ಏರಿಕೆಗೆ ಮುಸ್ಲಿಮರು ಕಾರಣ’ ಎಂದು ಮೊನ್ನೆ ಮೊನ್ನೆ ಹೇಳಿದ್ದು ಬೇರಾರೂ ಅಲ್ಲ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ! ಅಂದ ಮೇಲೆ ಜೀವವಿರೋಧಿ ಆಲೋಚನೆಗಳು ಜನಸಾಮಾನ್ಯರಲ್ಲಿ ಮೂಡುವುದು ಮತ್ತು ಅವರ ಮೆಜಾರಿಟೇರಿಯನ್ ಅಹಂಕಾರವು ಹಿಂದೂ ಮಹಿಳೆಯು ಮುಸ್ಲಿಂ ಬಸ್ ಕಂಡಕ್ಟರ್ ಮೇಲೆ ಸಾರ್ವಜನಿಕವಾಗಿಯೇ ದಬ್ಬಾಳಿಕೆ ನಡೆಸುವ ರೀತಿಯಲ್ಲಿ ವ್ಯಕ್ತಗೊಳ್ಳುವುದರಲ್ಲಿ ಅಚ್ಚರಿಯಾದರೂ ಏನಿದೆ? – ಶ್ರೀನಿವಾಸ ಕಾರ್ಕಳ

ಬೆಂಗಳೂರು ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್) ಬಸ್ ನಲ್ಲಿ, ಒಬ್ಬರು ಕಂಡಕ್ಟರ್ ಗೆ ಮಹಿಳಾ ಪ್ರಯಾಣಿಕರೊಬ್ಬರು ಕಿರುಕುಳ ನೀಡಿದ ಪ್ರಕರಣವನ್ನು ಕುರಿತ ಒಂದು ವೀಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು.

ಇದು ನಡೆದುದು ಇದೇ ಜುಲೈ ಮೊದಲ ವಾರದಲ್ಲಿ. ಶಿವಾಜಿನಗರ – ಉತ್ತರಹಳ್ಳಿ ಮಾರ್ಗದಲ್ಲಿ ಬಿಎಂಟಿಸಿ ಬಸ್ ನಲ್ಲಿ ಕೆಲಸ ಮಾಡುವ, ಮುಸ್ಲಿಂ ಸಮುದಾಯಕ್ಕೆ ಸೇರಿದ ಕಂಡಕ್ಟರ್ ಒಬ್ಬರು ತಲೆಗೆ ಹಸಿರು ಟೊಪ್ಪಿಯನ್ನು ಧರಿಸಿದ್ದರು. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ನಿನ್ನ ಧರ್ಮವನ್ನು ನಿನ್ನ ಮಸೀದಿಯಲ್ಲಿ, ನಿನ್ನ ಮನೆಯಲ್ಲಿ ಇರಿಸಿಕೋ, ಕೆಲಸದ ಸಮಯದಲ್ಲಿ ಪ್ರದರ್ಶಿಸಬೇಡ’ ಎಂದೆಲ್ಲ ಅಧಿಕಾರಿಯ ಮರ್ಜಿಯಲ್ಲಿ ಗದರಿಸಿದ್ದಲ್ಲದೆ, ಟೊಪ್ಪಿಯನ್ನು ತೆಗೆಯಲು ಬಲವಂತಪಡಿಸಿದಳು.

ಆಕೆಯ ಮಾತಿನಲ್ಲಿ ದರ್ಪವಿತ್ತು, ಆತನ ಸಮುದಾಯದ ಬಗ್ಗೆ ಅಸಹನೆ ಇತ್ತು. ಆತನೊಡನೆ ಅನಾಗರಿಕವಾಗಿ ನಡೆದುಕೊಂಡುದು ಮಾತ್ರವಲ್ಲ, ಆತನ ವೀಡಿಯೋ ಕೊಡ ಮಾಡಿದ್ದಳು ಆಕೆ (ಇದೇ ವೀಡಿಯೋ ವೈರಲ್ ಆದುದು). ಆಕೆಯ ವರ್ತನೆ ಇಷ್ಟೊಂದು ಒರಟಾಗಿದ್ದರೂ ಕೂಡಾ ಆ ಕಂಡಕ್ಟರ್ ತಾಳ್ಮೆ ಕಳೆದುಕೊಳ್ಳಲಿಲ್ಲ. ನಗು ನಗುತ್ತಲೇ ಆಕೆಯ ಮಾತುಗಳನ್ನು ಆಲಿಸಿದ. ಆಕೆಯ ಆಗ್ರಹ ಅತಿಯಾದಾಗ ತನ್ನ ಟೊಪ್ಪಿಯನ್ನು ತಣ್ಣಗೆ ಕಳಚಿ ಜೇಬಿಗೆ ತುರುಕಿಕೊಂಡ.

ಜನರ ಪ್ರತಿಕ್ರಿಯೆ

ಈ ಘಟನೆ ಇಂದಿನ ದ್ವೇಷ ಭಾರತದಲ್ಲಿ ಮುಸ್ಲಿಂ ಸಮುದಾಯದ ಸ್ಥಿತಿಯ ರೂಪಕದಂತಿದೆ. ಈ ವೀಡಿಯೋ ನೋಡಿದ ಜನರಿಂದ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಒಂದು ವರ್ಗದ ಜನ ಆ ಮಹಿಳೆ ಮಾಡಿದ ಕೆಲಸವನ್ನು ಮೆಚ್ಚಿಕೊಂಡು ಶ್ಲಾಘಿಸಿತು. ಕಂಡಕ್ಟರ್ ತನ್ನ ಧರ್ಮಕ್ಕೆ ಸಂಬಂಧಿಸಿದ ಸಂಕೇತವನ್ನು ಕರ್ತವ್ಯದ ಸಮಯದಲ್ಲಿ ಪ್ರದರ್ಶಿಸಿದ್ದು ತಪ್ಪು, ಸರಕಾರಿ ಬಸ್ ಕಂಡಕ್ಟರ್ ಆಗಿ ಆತ ಸಮವಸ್ತ್ರ ಮಾತ್ರ ಧರಿಸಬೇಕು ಎಂಬುದು ಅವರ ವಾದ. ಹೀಗೆ ವಾದಿಸುತ್ತಿರುವವರು ಯಾವ ಪಂಥದವರು ಎಂಬುದನ್ನು ಇಲ್ಲಿ ಬಿಡಿಸಿಹೇಳಬೇಕಾಗಿಲ್ಲ. ಬೇರೆಯವರು ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು, ಯಾರನ್ನು ಮದುವೆಯಾಗಬೇಕು ಎಂದೆಲ್ಲ ತಾವೇ ನಿರ್ಧರಿಸಿ ಫರ್ಮಾನು ಹೊರಡಿಸುತ್ತಿರುವ ಮತ್ತು ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರ ವಿರುದ್ಧ ದಾಳಿ ನಡೆಸುವ ಬಹಸಂಖ್ಯಾತ ಅಹಂಕಾರದ ವರ್ಗ ಇದು.

ಇನ್ನೊಂದು ವರ್ಗ, ಬಸ್ ನಲ್ಲಿ ಆ ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿತು. ಪ್ರಯಾಣಿಕಳಾಗಿ ಬಂದ ಆಕೆಯದ್ದು ಅಧಿಕಪ್ರಸಂಗಿತನದ ವರ್ತನೆ. ಆಕೆಯ ದರ್ಪದ ಮೂಲ ಬಹುಸಂಖ್ಯಾತ ಅಹಂನಿಂದ ಹುಟ್ಟಿದ್ದು ಮತ್ತು ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದವರನ್ನು ಅನ್ಯರು, ಕೆಟ್ಟವರು ಎಂದು ಬಿಂಬಿಸುವ, ವಿಶೇಷವಾಗಿ ವಾಟ್ಸಪ್ ಅಭಿಯಾನಗಳಿಂದ ಪ್ರೇರಿತವಾದುದು ಎಂದ ಈ ವರ್ಗದವರು, ಆ ಕಂಡಕ್ಟರ್ ನ ಸೌಜನ್ಯದ ನಡೆವಳಿಕೆಯನ್ನು, ತೀವ್ರ ನಿಂದನೆಯ ಹೊರತಾಗಿಯೂ ಪ್ರಚೋದನೆಗೆ ಒಳಗಾಗದ ಆತನ ಸಮಚಿತ್ತತೆಯನ್ನು  ಕೊಂಡಾಡಿತು.

ಈ ಘಟನೆಯ ಬಗ್ಗೆ ತಕ್ಷಣ ಅನೇಕ ವೆಬ್ ಮತ್ತು ಪತ್ರಿಕಾ ಮಾಧ್ಯಮಗಳು ವರದಿ ಮಾಡಿದವು. ಮಾತ್ರವಲ್ಲ, ಬಿಎಂಟಿಸಿಯ ಮುಖ್ಯಸ್ಥರನ್ನು ಮತ್ತು ಆ ಕಂಡಕ್ಟರ್ ನ ಸಹೋದ್ಯೋಗಿಗಳನ್ನು ಮಾತನಾಡಿಸಿದವು. ‘ತಲೆಗೆ ಟೋಪಿ ಧರಿಸಬಾರದು ಎಂಬ ನಿಯಮ ಇಲ್ಲ, ಆದರೆ ಸಮವಸ್ತ್ರ ಧರಿಸಬೇಕು ಅಷ್ಟೇ’ ಎಂದು ಬಿಎಂಟಿಸಿ ಮುಖ್ಯ ಅಧಿಕಾರಿ ಹೇಳಿದರು. ಸಹೋದ್ಯೋಗಿಗಳಲ್ಲಿ ಒಂದು ವರ್ಗ ‘ಆತ ಮಾಡಿದ್ದು ತಪ್ಪು, ಸಮವಸ್ತ್ರ ಮಾತ್ರ ಧರಿಸಬೇಕು’ ಎಂದು ಹೇಳಿದರೆ, ಇನ್ನು ಕೆಲವರು ‘ಆತ ಅನೇಕ ವರ್ಷಗಳಿಂದ ಹಸಿರು ಟೊಪ್ಪಿ ಧರಿಸುತ್ತಿದ್ದ, ಯಾರೂ ಆಕ್ಷೇಪ ವ್ಯಕ್ತಪಡಿಸಿದ್ದಿಲ್ಲ, ಅದರಿಂದ ಸಮಸ್ಯೆಯೇನೂ ಇಲ್ಲ’ ಎಂದರು.

ಧಾರ್ಮಿಕ ಸಂಕೇತಗಳ ಪ್ರದರ್ಶನ ಹೊಸದೇ?

ನಮ್ಮಲ್ಲಿ ಸರಕಾರಿ ಸಹಿತ ಅನೇಕ ವಲಯಗಳಲ್ಲಿ ಸಮವಸ್ತ್ರ ನಿಯಮಗಳಿವೆ. ಆದರೆ ಹಣೆಗೆ ಸಿಂಧೂರ, ವಿಭೂತಿ, ಕೈಗೆ ಬಳೆ, ದಾರ, ಅಯ್ಯಪ್ಪ ವ್ರತದ ವಸ್ತ್ರ ಇವನ್ನೆಲ್ಲ ಧರಿಸಬಾರದು ಎಂಬ ನಿಯಮ ಇಲ್ಲ. ಆದ್ದರಿಂದಲೇ ಇಂತಹ ಧಾರ್ಮಿಕ ಸಂಕೇತಗಳ ಪ್ರದರ್ಶನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಸರಕಾರಿ ಬಸ್ ಗಳಲ್ಲಿ ಹಿಂದೂ ದೇವರ ಫೋಟೋಗಳಿವೆ. ಸರಕಾರಿ ಬಸ್ ಗಳನ್ನು ಆಯುಧ ಪೂಜೆಯ ಸಮಯದಲ್ಲಿ ಹಿಂದೂ ಸಂಪ್ರದಾಯದಂತೆಯೇ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಪೊಲೀಸರೇ ಕೇಸರಿ ದಿರಿಸು ತೊಟ್ಟು ಫೋಟೋ ತೆಗೆಸಿಕೊಂಡ ಉದಾಹರಣೆಯೂ ಇದೆ.

ಹೀಗೆ, ಇಲ್ಲಿ ಹಿಂದೂ ಸಂಪ್ರದಾಯಗಳೇ ವಿಜೃಂಭಿಸುತ್ತಿರುವಾಗ, ಯಾರೋ ಒಬ್ಬ ಅಲ್ಪಸಂಖ್ಯಾತ ಸಮುದಾಯದ ಸಿಬ್ಬಂದಿಯು ತಲೆಗೆ ಯಕಃಶ್ಚಿತ್ ಹಸಿರು ಟೋಪಿ ಧರಿಸಿದ್ದು ತಪ್ಪು ಎನಿಸಿದ್ದಾದರೂ ಹೇಗೆ?! ಅದನ್ನು ಸಾರ್ವಜನಿಕರೊಬ್ಬರಿಗೆ ಅದರಲ್ಲೂ ಹೆಣ್ಣುಮಗಳೊಬ್ಬಳಿಗೆ ಪ್ರತಿಭಟಿಸಬೇಕು ಅನಿಸಿದ್ದಾದರೂ ಹೇಗೆ? ಹೀಗೆ ಪ್ರತಿಭಟಿಸಿ ಆ ವ್ಯಕ್ತಿಯ ಮನಸನ್ನು ನೋಯಿಸಿ ಮಾಡಿದ ಸಾಧನೆಯಾದರೂ ಏನು?! ಪರಸ್ಪರರನ್ನು ಗೌರವಿಸಿಕೊಂಡು ಕೂಡಿ ಬಾಳುವ ಮಾನವೀಯ ಮನಸು ಮಾಯವಾದುದಾದರೂ ಹೇಗೆ?!

ಹಾಗೆಂದು ಇಂತಹ ಘಟನೆ ಇದು ಮೊದಲನೆಯದೂ ಅಲ್ಲ, ಪ್ರಾಯಶಃ ಕೊನೆಯದೂ ಆಗಿರಲಾರದು. ಮುಸ್ಲಿಂ ಸಮುದಾಯದವರ ಆರಾಧ್ಯ ಪ್ರವಾದಿಯನ್ನು ಟಿವಿ ಡಿಬೇಟಿನಲ್ಲಿಯೇ ಅತ್ಯಂತ ಕೀಳು ರೀತಿಯಲ್ಲಿ ನಿಂದಿಸಿದ್ದು ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ. ಈ ಘಟನೆಯಿಂದಾಗಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುವಂತಾಯಿತು.

ನೂಪುರ್ ಶರ್ಮಾ.

ಮುಸ್ಲಿಮರನ್ನು ಸಾರಾಸಗಟಾಗಿ ಜಿಹಾದಿಗಳು ಎನ್ನುವ ಮಹಿಳಾ ಶಾಸಕರು, ಸಂಸದರು ಮತ್ತು ಕೇಂದ್ರ ಮಂತ್ರಿಗಳು ನಮ್ಮ ಹತ್ತಿರವೇ ಇದ್ದಾರೆ. ಕೋಮು ಹಿಂಸೆಗೆ ಪ್ರಚೋದನೆ ನೀಡುವಂತೆ ಉಗ್ರ ಕೋಮುವಾದಿ ಭಾಷಣ ಮಾಡುವ ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಸಿಗುತ್ತಾರೆ. ‘ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ರೇಪ್ ಮಾಡಿ’ ಎಂದು ಕರೆಕೊಡುವ ಮಟ್ಟಕ್ಕೂ ಇವರು ಮುಂದುವರಿಯುತ್ತಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಗಲಭೆ ಸಮಯದಲ್ಲಿ ಕುಕಿ ಸಮುದಾಯದ ಹೆಣ್ಣುಗಳನ್ನು ರೇಪ್ ಮಾಡುವಂತೆ ಮೈತೆಯಿ ಸಮುದಾಯದ ಮಹಿಳೆಯರು ಕರೆ ನೀಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಲೈಂಗಿಕ ಅತ್ಯಾಚಾರವನ್ನು ಪ್ರತೀಕಾರದ ಅಸ್ತ್ರವಾಗಿ ಬಳಸುವ ಆಲೋಚನೆಗೆ ದೊಡ್ಡ ಇತಿಹಾಸವೇ ಇದೆ. ಯುದ್ಧ ಕಾಲದಲ್ಲಿ ಸೋತ ರಾಜ್ಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗುತ್ತಿತ್ತು. ಗಂಡಿಗೆ ಪಾಠ ಕಲಿಸಲು ಆತನ ಹೆಣ್ಣಿನ ಮೇಲೆ ಅತ್ಯಾಚಾರ ಎಸಗುವುದೂ ಒಂದು ವಿಧಾನ. ಇಲ್ಲಿ ಕೆಲಸ ಮಾಡುವುದು ಗಂಡಿನ ಲೈಂಗಿಕ ದಾಹ ತೀರಣೆ ಮಾತ್ರವಲ್ಲ, ಹೆಣ್ಣಿನ ಶೀಲ, ಪಾವಿತ್ರ್ಯಗಳ ಬಗ್ಗೆ ಸಮಾಜದಲ್ಲಿ ಇರುವ ರೂಢಿಯ ಸವಕಲು ಮನಸ್ಥಿತಿ ಕೂಡ. ‘ರಾಜಕೀಯ ಅಸ್ತ್ರವಾಗಿ ಹೆಣ್ಣಿನ ಮೇಲೆ ಲೈಂಗಿಕವಾಗಿ  ಅತ್ಯಾಚಾರವನ್ನು ಬಳಸುವುದರಲ್ಲಿ ತಪ್ಪಿಲ್ಲ’ ಎಂದು ಸಮರ್ಥನೆ ಮತ್ತು ಶಿಫಾರಸು ಮಾಡಿದ್ದು ಬಲಪಂಥೀಯರ ಅಚ್ಚುಮೆಚ್ಚಿನ ‘ವೀರ’, ಸಾವರ್ಕರ್ ಅಲ್ಲವೇ?!

ನಮ್ಮ ಧರ್ಮವೇ ಮೇಲು!

ಜನಾಂಗೀಯ ದ್ವೇಷಕ್ಕೆ ಬಹುದೊಡ್ಡ ದೊಡ್ಡ ಇತಿಹಾಸವಿದೆ. ‘ದೇವನೊಬ್ಬ ನಾಮ ಹಲವು’, ‘ನಾವೆಲ್ಲ ಒಂದೇ ದೇವರ ಮಕ್ಕಳು’, ‘ಎಲ್ಲ ಧರ್ಮಗಳು ಶಾಂತಿಯನ್ನು ಬೋಧಿಸುತ್ತವೆ, ಪರಧರ್ಮ ಸಹಿಷ್ಣುತೆಯನ್ನು ಬೋಧಿಸುತ್ತವೆ’ ಎನ್ನುವುದೆಲ್ಲ ಬರಿಯ ಬೊಗಳೆ. ಪ್ರತಿಯೊಂದು ಧರ್ಮವೂ ತಾನು ಶ್ರೇಷ್ಠ ಅಂದುಕೊಳ್ಳುತ್ತದೆ. ಈ ಶ್ರೇಷ್ಠತೆಯನ್ನು ಸಾಬೀತುಪಡಿಸುವ ದಾರಿಯಲ್ಲಿ ಬೇರೆ ಧರ್ಮಗಳನ್ನು ಕೀಳು ಎಂದೇ ಭಾವಿಸುತ್ತದೆ, ಅವುಗಳ ವಿರುದ್ಧ ಅಸಹನೆ ಮತ್ತು ದ್ವೇಷ ಭಾವನೆಯನ್ನು ಹೊಂದಿರುತ್ತದೆ.

ಇದೇ ಕಾರಣದಿಂದ, ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದು ಎಷ್ಟೇ ಬೆನ್ನು ತಟ್ಟಿಕೊಂಡರೂ, ಆಳದಲ್ಲಿ ಇನ್ನೊಂದು ಧರ್ಮದ ಬಗ್ಗೆ ಅಸಹನೆ ಇದ್ದೇ ಇರುತ್ತದೆ. ಪ್ರಭುತ್ವದ ಬೆಂಬಲ ಸಿಗದಿದ್ದಾಗ ಇದು ಸುಪ್ತಾವಸ್ಥೆಯಲ್ಲಿರುತ್ತದೆ. ಪ್ರಭುತ್ವದ ಬೆಂಬಲ ಸಿಕ್ಕಾಗ ಈ ಎಲ್ಲ ವಿಕಾರಗಳೂ ಬಹಿರಂಗವಾಗಿ ಮತ್ತು ನಿರ್ಭಿಢೆಯಿಂದ ವ್ಯಕ್ತವಾಗಲಾರಂಭಿಸುತ್ತವೆ.

ನಮ್ಮಲ್ಲಿ ಈಗ ನಡೆಯುತ್ತಿರುವುದೂ ಅದೇ ತಾನೇ? ಮುಸ್ಲಿಂ ದ್ವೇಷ ಎನ್ನುವುದು ಪ್ರಭುತ್ವದ ಮಟ್ಟದಲ್ಲಿಯೇ ಇದೆ. ಈ ದ್ವೇಷದ ಮೂಲಕವೇ ಅಧಿಕಾರ ಹಿಡಿದವರು ನಮ್ಮನ್ನು ಆಳುತ್ತಿದ್ದಾರೆ. ಮುಸ್ಲಿಂ ಸಮುದಾಯದವರನ್ನು ಅವರು ಯಾವ ಅಳುಕೂ ಇಲ್ಲದೆ ನಿಂದಿಸುತ್ತಿದ್ದಾರೆ. ಮುಸ್ಲಿಮರನ್ನು ವ್ಯಾಪಾರ ಸಹಿತ ಎಲ್ಲೆಡೆ ಬಹಿಷ್ಕರಿಸಿ ಎಂದು ಸಂಸದರೇ ಕರೆಕೊಡುತ್ತಿದ್ದಾರೆ. ‘ತರಕಾರಿ ಬೆಲೆ ಏರಿಕೆಗೆ ಮುಸ್ಲಿಮರು ಕಾರಣ’ ಎಂದು ಮೊನ್ನೆ ಮೊನ್ನೆ ಹೇಳಿದ್ದು ಬೇರಾರೂ ಅಲ್ಲ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ! ಅಂದ ಮೇಲೆ ಇಂತಹ ಜೀವವಿರೋಧಿ ಆಲೋಚನೆಗಳು ಜನಸಾಮಾನ್ಯರಲ್ಲಿ ಮೂಡುವುದು ಮತ್ತು ಅವರ ಮೆಜಾರಿಟೇರಿಯನ್ ಅಹಂಕಾರವು ಹಿಂದೂ ಮಹಿಳೆಯು ಮುಸ್ಲಿಂ ಬಸ್ ಕಂಡಕ್ಟರ್ ಮೇಲೆ ಸಾರ್ವಜನಿಕವಾಗಿಯೇ ದಬ್ಬಾಳಿಕೆ ನಡೆಸುವ ರೀತಿಯಲ್ಲಿ ವ್ಯಕ್ತಗೊಳ್ಳುವುದರಲ್ಲಿ ಅಚ್ಚರಿಯಾದರೂ ಏನಿದೆ?

ಇಂತಹ ಕೋಮುವಾದಿ ಮತ್ತು ಹಿಂಸೆಯ ಮನಸ್ಥಿತಿ ಗಂಡುಲೋಕದಲ್ಲಿ ಇರುವುದು ಸಾಮಾನ್ಯ. ಆದರೆ ಹೆಣ್ಣು ಅಂದರೆ ಅಹಿಂಸೆ, ಸಹನೆ, ಮಾನವೀಯತೆಯ ಪ್ರತಿರೂಪ, ಹೆಣ್ಣು ಅಂದರೆ ತಾಯಿ ಎನಿಸಿಕೊಂಡ ಹೆಣ್ಣುಮಕ್ಕಳಲ್ಲಿಯೂ ಈ ಹಿಂಸೆಯ ಆಲೋಚನೆಗಳು ಭಯಾನಕ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಬೇಸರದ ಸಂಗತಿ. ಇದು ಸಮಾಜವು ಪೂರ್ತಿಯಾಗಿ ಕೊಳೆತು ನಾರುತ್ತಿರುವುದರ ಸಂಕೇತವಲ್ಲವೇ?

ಮನೆಯೊಳಗಣ ಕಿಚ್ಚು

ಕಂಡಕ್ಟರ್‌ ಮನೆಗೆ ಹೋಗಿ ವಸೀಮ್‌ ನೀಡಿದ ಪ್ರೀತಿಯ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿಯವರು ಪತ್ರಕರ್ತರಿಂದ ಮುಕ್ತವಾಗಿ ಪ್ರಶ್ನೆ ಆಹ್ವಾನಿಸಿ ಅದನ್ನು ಉತ್ತರಿಸದೆ ಬರೋಬ್ಬರಿ ಒಂಬತ್ತು ವರ್ಷಗಳಾದವು. ಆದರೆ ಇತ್ತೀಚೆಗೆ ಅಮೆರಿಕ ಪ್ರವಾಸ ಸಮಯದಲ್ಲಿ ಅವರು ಇಷ್ಟವಿಲ್ಲದಿದ್ದರೂ ಪತ್ರಕರ್ತರ ಪ್ರಶ್ನೆಯನ್ನು ಎದುರಿಸಲೇಬೇಕಾಯಿತು. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ವಾಲ್ ಸ್ಟ್ರೀಟ್ ಜರ್ನಲ್ ಪತ್ರಕರ್ತೆ, ಭಾರತದಲ್ಲಿ ಮಾನವಹಕ್ಕುಗಳ ದಮನ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ಕುರಿತೇ ಪ್ರಶ್ನೆ ಮಾಡಿದರು. ಒಂದು ಸಾಲಿನ ಪ್ರಶ್ನೆಗೆ ಹಲವು ನಿಮಿಷಗಳ ಉತ್ತರ ನೀಡಿದ ನಮ್ಮ ಪ್ರಧಾನಿಗಳು ‘ಪ್ರಜಾಪ್ರಭುತ್ವವು ನಮ್ಮ ಡಿಎನ್ ಎ ಯಲ್ಲಿಯೇ ಇದೆ, ನಮ್ಮಲ್ಲಿ ಜಾತಿ, ಕುಲ, ಮತಧರ್ಮ, ಲಿಂಗ ಇತ್ಯಾದಿ ಯಾವುದೇ ನೆಲೆಯಲ್ಲಿ ಭೇದಭಾವ ಇಲ್ಲ’ ಎಂದು ಹೇಳಿದರು.

ಇದೊಂದು ಭಯಂಕರ ಸುಳ್ಳು ಎಂಬುದು ಎಲ್ಲರಿಗೂ ಗೊತ್ತಿತ್ತು. ಮೋದಿ ಸರಕಾರದ ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಜನಾಂಗೀಯ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಗಳು ಅಮಾನುಷವಾದವು. ಅವರ ಧರ್ಮ, ಪ್ರಾರ್ಥನಾ ಸ್ಥಳ, ಆಹಾರ, ಉಡುಗೆ, ವ್ಯಾಪಾರ ಹೀಗೆ ಪ್ರತಿಯೊಂದನ್ನೂ ಗುರಿಯಾಗಿರಿಸಿಕೊಂಡು ದಾಳಿ ನಡೆದಿದೆ, ನಡೆಯುತ್ತಿದೆ. ಅವರ ಹಕ್ಕುಗಳನ್ನು ಮೊಟಕು ಗೊಳಿಸುವ ಕಾನೂನುಗಳನ್ನು ಒಕ್ಕೂಟ ಸರಕಾರವೇ ತಂದಿದೆ.

ಬರಿಯ ರಾಜಕೀಯ ಲಾಭಕ್ಕಾಗಿ ಹರಡಲಾದ ದ್ವೇಷದ ಸಿದ್ದಾಂತ ಈಗ ಜನಮಾನಸದ ಆಳಕ್ಕೆ ಇಳಿದು ಅದರ ವಿಕಾರ ರೂಪಗಳು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಾರಂಭಿಸಿವೆ. ಹಿಂದೂ ರಾಷ್ಟ್ರ ನಿರ್ಮಾಣದ ತಯಾರಿ ಈಗ ಕೊನೆಯ ಹಂತದಲ್ಲಿದ್ದು ಅಲ್ಲಿ ಹಿಂದೂಗಳು ಪ್ರಥಮ ಪ್ರಜೆಗಳಾದರೆ ಇತರ ಎಲ್ಲರೂ ದ್ವಿತೀಯ ಪ್ರಜೆಗಳು! ಈ ವಿಭಜನಕಾರಿ ರಾಜಕಾರಣಕ್ಕೆ ಭಾರತ ತೆರಲಿರುವ ಬೆಲೆಯಾದರೂ ಏನು? ಖ್ಯಾತ ಹಿಂದಿ ನಟ ನಾಸೀರುದ್ದೀನ್ ಶಾ ಈ ಅಪಾಯಕಾರಿ ಸ್ಥಿತಿಯ ಬಗ್ಗೆ ಮಾತನಾಡುತ್ತಾ, “ದೇಶದಲ್ಲಿರುವ ಇಪ್ಪತ್ತು ಕೋಟಿಗೂ ಅಧಿಕ ಮಂದಿಯನ್ನು ನಿವಾರಿಸಲು ಹೊರಟರೆ ಅವರೇನು ಸುಮ್ಮನೆ ಇರುವರೇ?” ಎಂದು ಪ್ರಶ್ನಿಸುತ್ತಾರೆ. ದಾಳಿಗೆ ಪ್ರತಿ ದಾಳಿ ಶುರುವಾಗಿ ಅದು ಸಿವಿಲ್ ವಾರ್ ರೂಪ ಪಡೆದಾಗ ಇದರಿಂದ ಒಟ್ಟಾರೆಯಾಗಿ ಆಗುವ ನಷ್ಟ ಇಡೀ ಭಾರತಕ್ಕೆ ಎಂಬುದು ಈ ದ್ವೇಷ ಸಿದ್ಧಾಂತದ ಹರಿಕಾರರಿಗೆ ಗೊತ್ತಿದೆಯೇ? ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೇ’ ಎಂಬ ಬಸವಣ್ಣರ ಮಾತೇ ಇದೆಯಲ್ಲ?

ಇತ್ತೀಚೆಗೆ ಅಮೆರಿಕಾ ಅಧ‍್ಯಕ್ಷ ಒಬಾಮಾ ಕೂಡಾ ಇದನ್ನೇ ಹೇಳಿದ್ದು. ಸಿಎನ್ ಎನ್ ವಾರ್ತಾಸಂಸ್ಥೆಯ ಕ್ರಿಸ್ತಿಯಾನ್ ಅಮನ್‍ಪೋರ್ ಗೆ ನೀಡಿದ ಸಂದರ್ಶನದಲ್ಲಿ ಅವರು, ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಆತಂಕ ವ್ಯಕ್ತಪಡಿಸುತ್ತಾ, If you don’t protect the rights of the ethnic minorities in India, there is a strong possibility that India would at some point start pulling apart. We have seen what happens when you start getting those kinds of large internal conflicts. So that would be contrary to the interests of not only the Muslim India but also the Hindu India ಎಂದಿದ್ದರು. ಅಂದರೆ, ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಒಂದಲ್ಲ ಒಂದು ದಿನ ಭಾರತ ಕುಸಿದು ಬೀಳಲಾರಂಭಿಸುವ ಎಲ್ಲ ಸಾಧ್ಯತೆಯೂ ಇದೆ. ಆಂತರಿಕ ಸಂಘರ್ಷದಿಂದ ಹಾನಿಯಾಗುವುದು ಮುಸ್ಲಿಂ ಭಾರತಕ್ಕೆ ಮಾತ್ರವಲ್ಲ, ಹಿಂದೂ ಭಾರತಕ್ಕೆ ಕೂಡಾ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-<strong>ಬೆದರಿಕೆಯ ಬಾಗಿಲಲ್ಲಿ ಬಹುತ್ವ ಭಾರತ</strong>

Related Articles

ಇತ್ತೀಚಿನ ಸುದ್ದಿಗಳು