ಸಿಬಿಎಸ್‌ಇ 9ನೇ ತರಗತಿ ಭಾಷಾ ವಿವಾದ: ಪ್ರಧಾನಿ ಮೋದಿ ದೇಶದ ಮಕ್ಕಳ ಕ್ಷಮೆ ಕೇಳಲಿ ಎಂದ ರಾಹುಲ್ ಗಾಂಧಿ

ಸಿಬಿಎಸ್‌ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ತರಾತುರಿಯಲ್ಲಿ ತ್ರಿಭಾಷಾ ಸೂತ್ರ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿಯವರು ದೇಶದ ಮಕ್ಕಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೇ 15 ರಂದು ಸಿಬಿಎಸ್‌ಇ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಮುಂಬರುವ ಜುಲೈ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ಭಾಷೆಗಳನ್ನು (R1, R2, R3) ಕಲಿಯಬೇಕಾಗುತ್ತದೆ ಮತ್ತು ಇದರಲ್ಲಿ ಕನಿಷ್ಠ ಎರಡು ಭಾರತೀಯ ಮೂಲದ ಭಾಷೆಗಳಾಗಿರಬೇಕು.

ಆದರೆ ಜುಲೈ 1 ರಿಂದಲೇ ಹೊಸ ಭಾಷೆ ಕಲಿಯಲು ಸೂಚಿಸಿರುವ ಮಂಡಳಿಯು, ಅದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಶಿಕ್ಷಕರನ್ನಾಗಲಿ ಅಥವಾ ಪಠ್ಯಪುಸ್ತಕಗಳನ್ನಾಗಲಿ ವ್ಯವಸ್ಥೆ ಮಾಡಿಲ್ಲ.

ತಾತ್ಕಾಲಿಕ ವ್ಯವಸ್ಥೆಯಾಗಿ 14 ವರ್ಷದ 9ನೇ ತರಗತಿ ಮಕ್ಕಳಿಗೆ 6ನೇ ತರಗತಿಯ ಪಠ್ಯಪುಸ್ತಕಗಳನ್ನು ನೀಡಲಾಗುವುದು ಹಾಗೂ ಭಾಷಾ ಪ್ರಾವೀಣ್ಯತೆ ಇರುವ ಇತರ ವಿಷಯಗಳ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದು ಸಿಬಿಎಸ್‌ಇ ಹೇಳಿರುವುದಕ್ಕೆ ಪೋಷಕರು ಮತ್ತು ಶಿಕ್ಷಣ ತಜ್ಞರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಇತ್ತೀಚಿನ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಉಲ್ಲೇಖಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಜಾಕ್ಕೆ ಒತ್ತಾಯಿಸಿದ್ದಾರೆ. “ಮೊದಲು 22 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದ ನೀಟ್ ಪೇಪರ್ ಲೀಕ್ ಹಗರಣ. ನಂತರ ಸಿಬಿಎಸ್‌ಇ 12ನೇ ತರಗತಿಯ ಒಎಸ್ಎಮ್ ಡಿಜಿಟಲ್ ಮೌಲ್ಯಮಾಪನ ದೋಷದಿಂದಾಗಿ ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಕಡಿಮೆ ಅಂಕ ಗಳಿಸಿ ಕಾಲೇಜು ಪ್ರವೇಶದ ಅರ್ಹತೆ ಕಳೆದುಕೊಂಡಿದ್ದು ಈಗ 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ತರಾತುರಿಯಲ್ಲಿ ಹೊಸ ಭಾಷೆಯ ಹೊರೆ ಹೇರುತ್ತಿರುವುದು. ಮೂರು ಪರೀಕ್ಷೆಗಳು, ಮೂರು ವಿಭಿನ್ನ ವಯಸ್ಸಿನ ವಿದ್ಯಾರ್ಥಿ ಸಮೂಹ, ಆದರೆ ಇವೆಲ್ಲದಕ್ಕೂ ಕಾರಣ ಒಬ್ಬರೇ ಸಚಿವರು” ಎಂದು ಅವರು ಕಿಡಿಕಾರಿದ್ದಾರೆ.

ಶಿಕ್ಷಣ ಸಚಿವರು ದೇಶದ ಪ್ರತಿಯೊಂದು ವಯೋಮಾನದ ವಿದ್ಯಾರ್ಥಿಗಳ ಭವಿಷ್ಯದೊಂದಿಗೂ ಏಕಕಾಲದಲ್ಲಿ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಕೇಂದ್ರದ ಈ ತಪ್ಪು ನೀತಿಗಳಿಂದಾಗಿ ತೊಂದರೆಗೆ ಒಳಗಾಗಿರುವ ದೇಶದ ಮಕ್ಕಳಲ್ಲಿ ಪ್ರಧಾನಿ ಮೋದಿಯವರು ಕನಿಷ್ಠ ಪಕ್ಷ ಕ್ಷಮೆಯನ್ನಾದರೂ ಕೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ತರಗತಿಗಳು ಹಾಗೂ ಯುನಿಟ್ ಟೆಸ್ಟ್‌ಗಳು ಈಗಾಗಲೇ ಆರಂಭವಾಗಿರುವ ಈ ಸಂದರ್ಭದಲ್ಲಿ ಇಂತಹ ದಿಢೀರ್ ಬದಲಾವಣೆ ತಂದಿರುವುದು ನಗರ ಪ್ರದೇಶಗಳ ಶಾಲೆಗಳಲ್ಲಿ ಫ್ರೆಂಚ್, ಜರ್ಮನ್ ಅಥವಾ ಸ್ಪ್ಯಾನಿಷ್‌ನಂತಹ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಭಾರಿ ಶೈಕ್ಷಣಿಕ ಅಡಚಣೆ ಉಂಟುಮಾಡಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು