ದೆಹಲಿ: ಭಾರತದ ಚುನಾವಣಾ ಪ್ರಕ್ರಿಯೆಯು ಮೂಲಭೂತವಾಗಿಯೇ ಕಳಚಿಬಿದ್ದಿದೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು “ದೇಶದ್ರೋಹಿ” ಎಂದು ಕರೆದಿದ್ದು, ತಕ್ಷಣವೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಗುರುವಾರ ಆಗ್ರಹಿಸಿದ್ದಾರೆ.
ನವದೆಹಲಿಯ ಇಂದಿರಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮತಗಳ ದುರುಪಯೋಗವು ಕೇವಲ ಚುನಾವಣಾ ಫಲಿತಾಂಶಗಳಿಗೆ ಮಾತ್ರ ಸೀಮಿತವಾಗಿಲ್ಲ; ಅದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ರಚನೆಯಾಗುವ ಕಾಯ್ದೆಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಕಾನೂನುಬದ್ಧತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ ಎಂದರು.
“ಮತಗಳ ಕಳ್ಳತನದಿಂದಲೇ ಕಾನೂನುಗಳ ಕಳ್ಳತನ ಆರಂಭವಾಗುತ್ತದೆ” ಎಂದು ಹೇಳಿದ ರಾಹುಲ್, ಒಂದು ವೇಳೆ ಮತಗಳೇ ಕಳ್ಳತನವಾದರೆ ಅಂತಹ ಪ್ರತಿನಿಧಿಗಳು ರೂಪಿಸುವ ಕಾನೂನುಗಳು ಕೂಡ ಪ್ರಶ್ನಾರ್ಹವಾಗುತ್ತವೆ ಎಂದು ವಾದಿಸಿದರು. ಮತವೇ ದೇಶದ ಅಡಿಪಾಯವಾಗಿದ್ದು, ಸಂವಿಧಾನಕ್ಕೆ ಪ್ರಜಾಸತ್ತಾತ್ಮಕ ಶಕ್ತಿ ನೀಡುವುದು ಮತದಾನ. ಮತವನ್ನೇ ನಾಶಪಡಿಸಿದರೆ ಸಂವಿಧಾನವೂ ನಾಶವಾದಂತೆ ಮತ್ತು ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮತದಾನದ ಹಕ್ಕಿನ ಮೇಲೆ ದಾಳಿ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿರುವ ವ್ಯಕ್ತಿಯನ್ನು ಬೇರೆ ಪದಗಳಿಂದ ಕರೆಯಲು ಸಾಧ್ಯವಿಲ್ಲ ಎಂದ ಅವರು, ಜ್ಞಾನೇಶ್ ಕುಮಾರ್ ದೇಶದ್ರೋಹಿ ಎಂದು ಜರೆದರು.
ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಆಯೋಗದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ತನಿಖಾ ವರದಿಯ ಬೆನ್ನಲ್ಲೇ ರಾಹುಲ್ ಈ ಆರೋಪ ಮಾಡಿದ್ದಾರೆ. ಹೊಸ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ, ಇಬ್ಬರು ಆಯುಕ್ತರ ಗಮನಕ್ಕೆ ಬಾರದೆ ತೆಗೆದುಕೊಂಡ ನಿರ್ಧಾರಗಳು ಮತ್ತು ಮತದಾರರ ಡೇಟಾಬೇಸ್ನ ಅತಿಯಾದ ಕೇಂದ್ರೀಕರಣದಂತಹ ಗಂಭೀರ ವಿಷಯಗಳ ಬಗ್ಗೆ ಈ ಆಕ್ಷೇಪಣೆಗಳಿದ್ದವು.
ಕಳೆದ ಮೂರು ವರ್ಷಗಳಿಂದ ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ಚುನಾವಣೆಗಳ ಕುರಿತು ತಾವು ಸತತವಾಗಿ ಧ್ವನಿ ಎತ್ತುತ್ತಿದ್ದು, ಯಾವುದೇ ಊಹಾಪೋಹಗಳ ಆಧಾರದಲ್ಲಲ್ಲ, ಕೇವಲ ನಿಖರವಾದ ಸತ್ಯಾಂಶಗಳ ಆಧಾರದ ಮೇಲೆಯೇ ಈ ಆರೋಪಗಳನ್ನು ಮಾಡುತ್ತಿದ್ದೇನೆ ಎಂದು ರಾಹುಲ್ ಹೇಳಿದರು. ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜವಾಗಿ ಕಂಡುಬರುವ ಆಡಳಿತ ವಿರೋಧಿ ಅಲೆ ಬಿಜೆಪಿ ಪ್ರಬಲವಾಗಿರುವ ರಾಜ್ಯಗಳಲ್ಲಿ ಹೇಗೆ ಮಾಯವಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಬಳಿಕ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಕೆಲವೇ ವರ್ಷಗಳಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿ ಬಂದ ಇತಿಹಾಸವನ್ನು ಅವರು ಸ್ಮರಿಸಿದರು. ಆಡಳಿತ ವಿರೋಧಿ ಅಲೆ ಸಂಪೂರ್ಣವಾಗಿ ಕಾಣೆಯಾಗುವುದು ಉತ್ತರ ಕೊರಿಯಾ ಅಥವಾ ಸದ್ದಾಂ ಹುಸೇನ್ ಕಾಲದ ಇರಾಕ್ನಂತಹ ವ್ಯವಸ್ಥೆಗಳಲ್ಲಿ ಮಾತ್ರ ಸಾಧ್ಯ ಎಂದು ಹೋಲಿಸಿದರು.
ಫೆಬ್ರವರಿ 2025 ರಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಆಗಿ ನೇಮಕ ಮಾಡಿದ ಪ್ರಕ್ರಿಯೆಯನ್ನೂ ರಾಹುಲ್ ಪ್ರಸ್ತಾಪಿಸಿ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ತಮ್ಮನ್ನು ಒಳಗೊಂಡಿದ್ದ ತ್ರಿಸದಸ್ಯ ಆಯ್ಕೆ ಸಮಿತಿ ಸಭೆಯಲ್ಲೇ ತಾವು ಅಧಿಕೃತವಾಗಿ ಭಿನ್ನಮತದ ಟಿಪ್ಪಣಿ ದಾಖಲಿಸಿದ್ದನ್ನು ನೆನಪಿಸಿದರು. ಚುನಾವಣಾ ಆಯೋಗವನ್ನು ಕಾರ್ಯಾಂಗದ ಪ್ರಭಾವದಿಂದ ಮುಕ್ತವಾಗಿಡುವುದು ಅತ್ಯಗತ್ಯ ಎಂದ ಅವರು, ಆಯುಕ್ತರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುವ 2023ರ ಕಾಯ್ದೆಯ 16ನೇ ಸೆಕ್ಷನ್ ಅನ್ನು ಪ್ರಶ್ನಿಸಿದರು.
ಇಬ್ಬರು ಆಯುಕ್ತರು ಎತ್ತಿರುವ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಿಇಸಿ ಜ್ಞಾನೇಶ್ ಕುಮಾರ್ ಅವರು “ಅಪ್ರೂವರ್” (ಸಾಕ್ಷಿದಾರ) ಆಗಿ ತಮಗೆ ತಿಳಿದಿರುವ ಸತ್ಯಾಂಶಗಳನ್ನು ಬಹಿರಂಗಪಡಿಸಬೇಕು ಎಂದು ರಾಹುಲ್ ಆಗ್ರಹಿಸಿದರು. 2024ರ ಲೋಕಸಭಾ ಚುನಾವಣೆ ಹಾಗೂ ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ತಮಗೆ ಸಂಪೂರ್ಣ ಖಚಿತತೆಯಿದೆ ಎಂದ ಅವರು, ಮುಂಬರುವ ತಿಂಗಳುಗಳಲ್ಲಿ ಈ ಕುರಿತು ಮತ್ತಷ್ಟು ಆಘಾತಕಾರಿ ಸತ್ಯಗಳು ಹೊರಬರಲಿವೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸಿದವರ ವಿರುದ್ಧ ತನಿಖೆಗಾಗಿ ವಿರೋಧ ಪಕ್ಷಗಳ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
