ಬಿಜೆಪಿ ದ್ವೇಷದ ಬೆಂಕಿಯಲ್ಲಿ ತನ್ನ ರೊಟ್ಟಿ ಸುಡುವ ಆಸೆಯಲ್ಲಿದೆ: ರಾಹುಲ್ ಗಾಂಧಿ ಕಿಡಿ

ಹೋಳಿ ಹಬ್ಬದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ನಡುವೆ ನಡೆದ ಸಂಘರ್ಷದಲ್ಲಿ ತರುಣ್ ಬುಟೋಲಿಯಾ ಎಂಬ ಯುವಕ ಮೃತಪಟ್ಟಿದ್ದಾರೆ. ಈ ಘಟನೆಯು ಮಾರ್ಚ್ 4 ರಂದು ನಡೆದಿದ್ದು, ಹೋಳಿ ಆಚರಣೆಯ ವೇಳೆ ತರುಣ್ ಅವರ ಸೋದರಮಾವನ ಮಗಳು ನೀರಿನ ಬಲೂನ್ ಎಸೆದ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಈ ಕೋಮು ಸಂಘರ್ಷದಲ್ಲಿ ತರುಣ್ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮಾತ್ರ ದೇಶದಲ್ಲಿ ರಕ್ತಪಾತವನ್ನು ಬಯಸುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಉತ್ತಮ್ ನಗರ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಕೋಮು ಹಿಂಸಾಚಾರವನ್ನು ಪ್ರಚೋದಿಸುತ್ತಿದೆ ಎಂದು ಅವರು ದೂರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, “ಉತ್ತಮ್ ನಗರದ ಜನರು ಈ ಹಿಂಸಾಚಾರಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ತರುಣ್ ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ ಮತ್ತು ಈಗ ಅವರ ಇಡೀ ಕುಟುಂಬವು ಕಿರುಕುಳವನ್ನು ಎದುರಿಸುತ್ತಿದೆ. ಅವರು ರಕ್ತಪಾತವನ್ನು ಬಯಸುತ್ತಿಲ್ಲ, ಆದರೆ ಬಿಜೆಪಿ ಮಾತ್ರ ಅದನ್ನು ಬಯಸುತ್ತಿದೆ. ದ್ವೇಷದ ಹಂಚಿನ ಮೇಲೆ ಹಿಂಸೆಯ ರೊಟ್ಟಿಯನ್ನು ಬೇಯಿಸಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಬಿಜೆಪಿ ಬಳಸಿಕೊಳ್ಳುತ್ತದೆ; ಇದು ಅವರ ಸಹಜ ಗುಣ,” ಎಂದು ಕಟುವಾಗಿ ಟೀಕಿಸಿದ್ದಾರೆ.

ದೇಶವು ಸದಾ ಹಿಂದೂ-ಮುಸ್ಲಿಂ ಗಲಾಟೆಗಳಲ್ಲಿಯೇ ಸಿಲುಕಿಕೊಂಡಿರಲಿ ಎಂಬುದು ಬಿಜೆಪಿ ನಾಯಕರ ಆಶಯವಾಗಿದೆ ಎಂದು ರಾಹುಲ್ ಹೇಳಿದ್ದಾರೆ. “ದೇಶದ ರಕ್ಷಣೆ, ಇಂಧನ ಭದ್ರತೆ, ಆಹಾರ ಭದ್ರತೆ ಮತ್ತು ಆಯಕಟ್ಟಿನ ಸಾರ್ವಭೌಮತ್ವವನ್ನು ಅಮೆರಿಕಕ್ಕೆ ಒಪ್ಪಿಸುವಂತೆ ಪ್ರಧಾನಿಯವರನ್ನು ಏಕೆ ಒತ್ತಾಯಿಸಲಾಗುತ್ತಿದೆ ಎಂದು ಜನರು ಪ್ರಶ್ನಿಸಬಾರದು ಎಂಬ ಕಾರಣಕ್ಕಾಗಿಯೇ ದೇಶದ ರಾಜಧಾನಿಯಲ್ಲಿ ಹಾಡಹಗಲೇ ಇಂತಹ ದಂಗೆಗಳನ್ನು ಸೃಷ್ಟಿಸಲಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.

ಇಂತಹ ಪ್ರಚೋದನಾಕಾರಿ ಕ್ರಮಗಳಿಗೆ ಮಣಿಯಬಾರದು ಎಂದು ದೆಹಲಿ ಜನತೆಗೆ ಮನವಿ ಮಾಡಿರುವ ಅವರು, ಏಕತೆ, ಸಹೋದರತ್ವ ಮತ್ತು ಪ್ರೀತಿಯನ್ನು ಹರಡುವ ಮೂಲಕ ಒಟ್ಟಾಗಿ ಇರಬೇಕೆಂದು ಕರೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು