ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಸಂವಾದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಸಿಗದ ಕಾರಣ ಕಾರ್ಯಕ್ರಮವನ್ನು ಒಂದು ವಾರ ಮುಂದೂಡಲಾಗಿದ್ದು, ಇದು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮೊದಲು ಸೆಪ್ಟೆಂಬರ್ 12ರಂದು ಆಯೋಜನೆಗೊಂಡಿದ್ದ ಈ ಕಾರ್ಯಕ್ರಮವನ್ನು ಈಗ ಸೆಪ್ಟೆಂಬರ್ 19ಕ್ಕೆ ಮುಂದೂಡಲಾಗಿದೆ.
ನಗರದ ಹೃದಯಭಾಗದಲ್ಲಿರುವ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಸಲು ಮಧ್ಯಪ್ರದೇಶದ ಮೋಹನ್ ಯಾದವ್ ಸರ್ಕಾರ ಅನುಮತಿ ನಿರಾಕರಿಸಿದ್ದೇ ಮುಂದೂಡಿಕೆಗೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಬುಧವಾರ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ, ಈ ಕಾರ್ಯಕ್ರಮದಲ್ಲಿ ಇಂದೋರ್ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಸುಮಾರು 50,000 ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದು ಕೇವಲ ರಾಜಕೀಯ ರ‍್ಯಾಲಿಯಲ್ಲ, ಬದಲಾಗಿ ದೇಶದ ಭವಿಷ್ಯ, ಯುವಜನತೆಯ ಕನಸುಗಳು, ಶಿಕ್ಷಣದ ಹಕ್ಕು ಮತ್ತು ಉದ್ಯೋಗದ ಸಮಸ್ಯೆಗಳ ಕುರಿತು ನಡೆಯುವ ಮುಕ್ತ ಸಂವಾದ ಎಂದು ವಿವರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಅನುಮತಿ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಬಿಜೆಪಿ ಸರ್ಕಾರವು ವಿದ್ಯಾರ್ಥಿಗಳ ಧ್ವನಿ ಹಾಗೂ ರಾಹುಲ್ ಗಾಂಧಿಯವರ ಅಭಿಯಾನಕ್ಕೆ ಹೆದರಿ ಆಡಳಿತ ಯಂತ್ರದ ಮೇಲೆ ಒತ್ತಡ ಹೇರಿ ಅನುಮತಿ ತಡೆಹಿಡಿದಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಚಿಂಟು ಚೌಕ್ಸೆ ಟೀಕಿಸಿದ್ದಾರೆ.
ಈ ಆರೋಪಗಳನ್ನು ತಳ್ಳಿಹಾಕಿರುವ ಇಂದೋರ್ ಮಹಾನಗರ ಪಾಲಿಕೆ ಆಯುಕ್ತ ಕ್ಷಿತಿಜ್ ಸಿಂಘಾಲ್ ಹಾಗೂ ಮೇಯರ್ ಪುಷ್ಯಮಿತ್ರ ಭಾರ್ಗವ್, ಹೈಕೋರ್ಟ್ ಆದೇಶದಂತೆ ಕ್ರೀಡಾಂಗಣವನ್ನು ಕೇವಲ ಕ್ರೀಡಾ ಚಟುವಟಿಕೆಗಳು ಅಥವಾ ರಾಜ್ಯ ಮಟ್ಟದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಬಳಸಲು ಅವಕಾಶವಿದೆ ಎಂದಿದ್ದಾರೆ. ಇದು ನ್ಯಾಯಾಲಯದ ನಿಯಮ ಪಾಲನೆಯೇ ವಿನಃ ಯಾವುದೇ ರಾಜಕೀಯ ಪ್ರೇರಿತ ತೀರ್ಮಾನವಲ್ಲ ಎಂದು ಆಡಳಿತ ಸ್ಪಷ್ಟಪಡಿಸಿದೆ.
ಕಳೆದ ಮೂರು ತಿಂಗಳಲ್ಲಿ ಕೋಟಾ, ಡೆಹ್ರಾಡೂನ್, ಪ್ರಯಾಗ್‌ರಾಜ್ ಮತ್ತು ಪುಣೆಯಲ್ಲಿ ಯಶಸ್ವಿಯಾಗಿ ನಡೆದಿರುವ ‘ಛಾತ್ರೋಂ ಕಿ ಗೂಂಜ್’ ಅಭಿಯಾನವು ದೇಶದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಉದ್ದೇಶ ಹೊಂದಿದೆ.
