ಆದಿವಾಸಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಪ್ರವೇಶಕ್ಕೆ ಪ್ರೆಗ್ನೆನ್ಸಿ ಟೆಸ್ಟ್‌ ರೀತಿಯ ಅಸಂಬದ್ಧ ನಿಯಮ: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದ ರಾಹುಲ್‌ ಗಾಂಧಿ

ಮಹಾರಾಷ್ಟ್ರದಲ್ಲಿ ಹಾಸ್ಟೆಲ್ ನಿಯಮಗಳು ಮತ್ತು ಸೌಲಭ್ಯಗಳ ಕೊರತೆಯನ್ನು ವಿರೋಧಿಸಿ ಆದಿವಾಸಿ ವಿದ್ಯಾರ್ಥಿಗಳು ಕಳೆದ ಹತ್ತು ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ತಕ್ಷಣ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.

ಪುಣೆಯಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಮ್ಮ ಕಷ್ಟಗಳನ್ನು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹಾಸ್ಟೆಲ್‌ಗಳಲ್ಲಿ ವಿಧಿಸಲಾಗಿರುವ 30 ವರ್ಷಗಳ ವಯೋಮಿತಿ, ಅಸುರಕ್ಷಿತ ವಾತಾವರಣ ಮತ್ತು ವಿದ್ಯಾರ್ಥಿನಿಯರಿಗೆ ಪ್ರೆಗ್ನೆನ್ಸಿ (ಗರ್ಭಧಾರಣೆ) ಪರೀಕ್ಷೆ ಸೇರಿದಂತೆ ಅಮಾನವೀಯ ನಿಯಮಗಳನ್ನು ಜಾರಿಗೆ ತಂದಿರುವುದನ್ನು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ದೂರದ ಹಳ್ಳಿಗಳಿಂದ ನಗರಗಳಿಗೆ ಬಂದು ಓದುತ್ತಿರುವ ಆದಿವಾಸಿ ವಿದ್ಯಾರ್ಥಿಗಳು ಸರ್ಕಾರಿ ಹಾಸ್ಟೆಲ್‌ಗಳನ್ನೇ ಅವಲಂಬಿಸಿದ್ದಾರೆ ಎಂದು ಉಲ್ಲೇಖಿಸಿದ ಅವರು, ದೀರ್ಘ ರಜೆಯ ನಂತರ ಹಾಸ್ಟೆಲ್‌ಗೆ ಮರಳುವ ವಿದ್ಯಾರ್ಥಿನಿಯರು ಫಿಟ್‌ನೆಸ್ ಸಾಬೀತುಪಡಿಸಲು ಗರ್ಭಧಾರಣೆ ಪರೀಕ್ಷೆ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕೆಂಬ ನಿಯಮ ಅವರ ಸ್ವಾಭಿಮಾನ ಹಾಗೂ ಮಾನವೀಯ ಘನತೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸ್ಟೆಲ್‌ಗಳಲ್ಲಿ ಆಹಾರ, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾವು ಕಡಿತ ಸೇರಿದಂತೆ ಅನೇಕ ಅವಘಡಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಆದಿವಾಸಿ ವಿದ್ಯಾರ್ಥಿಗಳು ಯಾವುದೇ ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ; ಆದ್ದರಿಂದ ಮುಖ್ಯಮಂತ್ರಿಗಳು ಖುದ್ದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು