Home ದೇಶ ಹತ್ರಾಸ್‌ನಲ್ಲಿ ರಾಹುಲ್ ಗಾಂಧಿ | ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತೈಸಿದ ವಿಪಕ್ಷ ನಾಯಕ

ಹತ್ರಾಸ್‌ನಲ್ಲಿ ರಾಹುಲ್ ಗಾಂಧಿ | ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತೈಸಿದ ವಿಪಕ್ಷ ನಾಯಕ

0

ಲಖನೌ: ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದರು.

ಸಂತ್ರಸ್ತರ ಪರ ನಿಲ್ಲುವುದಾಗಿ ಭರವಸೆ ನೀಡಿದರು. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಇದೇ 2ರಂದು ಹತ್ರಾಸ್ ಜಿಲ್ಲೆಯ ಪೂಲ್‌ ರಾಯ್ ಗ್ರಾಮದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ನಡೆದಿತ್ತು. ಈ ದುರಂತದಲ್ಲಿ ಇದುವರೆಗೆ 121 ಮಂದಿ ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಹತ್ರಾಸ್ ಗೆ ಭೇಟಿ ನೀಡಿದ ರಾಹುಲ್ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಅವರು ಅಲಿಗಢದ ಪಿಲ್ಖಾನಾದಲ್ಲಿ ಅಪಘಾತದಲ್ಲಿ ಮೃತಪಟ್ಟ ಛೋಟೆ ಲಾಲ್ ಅವರ ಪತ್ನಿ ಮಂಜು, ಛೋಟೆ ಲಾಲ್ ಅವರ ಪುತ್ರ ಪಂಕಜ್, ಪ್ರೇಮಾವತಿ ಮತ್ತು ವಿಜಯ್ ಸಿಂಗ್ ಅವರ ಪತ್ನಿ ಶಾಂತಿ ದೇವಿ ಅವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನದ ಮಾತುಗಳನ್ನಾಡಿದರು.

ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಪೊಲೀಸರು ಸತ್ಸಂಗದ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಹತ್ರಾಸ್‌ಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದರು. ಈ ಅಪಘಾತಕ್ಕೆ ಕಾರಣನಾದ ಭೋಲೆ ಬಾಬಾ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸತ್ಸಂಗ ಮುಗಿಯುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೋಲೆ ಬಾಬಾ ನಡೆದುಕೊಂಡು ಹೋಗುವಾಗ ಭಕ್ತರು ಅವನನ್ನು ಹತ್ತಿರದಿಂದ ನೋಡಲು, ಅವನ ಪಾದಗಳನ್ನು ಸ್ಪರ್ಶಿಸಲು ಮತ್ತು ಪಾದದಡಿಯ ಮಣ್ಣನ್ನು ತೆಗೆದುಕೊಳ್ಳಲು ಪೈಪೋಟಿ ನಡೆಸಿದ್ದರಿಂದ ಕಾಲ್ತುಳಿತ ನಡೆದಿದೆ ಎನ್ನಲಾಗಿದೆ.

You cannot copy content of this page

Exit mobile version