Monday, February 2, 2026

ಸತ್ಯ | ನ್ಯಾಯ |ಧರ್ಮ

‘ಅದರಲ್ಲಿ ಅವರಿಗೆ ಭಯ ಹುಟ್ಟಿಸುವಂತಹದ್ದು ಏನಿದೆ?’: ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ವರದಿಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ

ದೆಹಲಿ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯನ್ನು ಉಲ್ಲೇಖಿಸಿ ಮಾಡಲಾದ ವರದಿಯೊಂದರ ಸಾಲುಗಳನ್ನು ಓದಲು ಮುಂದಾದ ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರಕ್ಕೆ ಸೋಮವಾರ ಸವಾಲು ಹಾಕಿದ್ದಾರೆ. ಆ ವಿಷಯದ ಬಗ್ಗೆ ಸರ್ಕಾರವೇಕೆ “ಅಷ್ಟೊಂದು ಹೆದರುತ್ತಿದೆ” ಎಂದು ಪ್ರಶ್ನಿಸಿದ ಅವರು, ನಿಜವಾದ ದೇಶಭಕ್ತಿಯನ್ನು ಎತ್ತಿ ತೋರಿಸುವ ಡೋಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಿಸಿದ ಆಯ್ದ ಭಾಗಗಳನ್ನು ಓದಲು ಪಟ್ಟು ಹಿಡಿದರು.

ಬಜೆಟ್ ಅಧಿವೇಶನದ ವೇಳೆ, ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಒಳಗೊಂಡಿರುವ ಮ್ಯಾಗಜೀನ್ ಲೇಖನವನ್ನು ಉಲ್ಲೇಖಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ ನಂತರ ಲೋಕಸಭೆಯಲ್ಲಿ ತೀವ್ರ ವಾಕ್ಸಮರ ನಡೆಯಿತು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕರು, “ಅದರಲ್ಲಿ ಅವರಿಗೆ ಅಷ್ಟೊಂದು ಭಯ ಹುಟ್ಟಿಸುವಂತಹದ್ದು ಏನಿದೆ? ಅವರು ಹೆದರದಿದ್ದರೆ, ನನ್ನನ್ನು ಓದಲು ಬಿಡಬೇಕು,” ಎಂದು ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಗಾಂಧಿ ಉತ್ತರಿಸುತ್ತಿದ್ದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಡ್ಡಿಪಡಿಸಿದರು. ಕಾಂಗ್ರೆಸ್ ಸಂಸದರು ಇನ್ನೂ ಪ್ರಕಟವಾಗದ ಮತ್ತು ದೃಢೀಕರಿಸದ ಪುಸ್ತಕದಿಂದ ಉಲ್ಲೇಖಿಸುವಂತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ವಿರುದ್ಧ ಮಾಡಿದ್ದ ಆರೋಪವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದರು, ಇದನ್ನು ಅವರು ದೇಶಭಕ್ತಿ ಮತ್ತು ರಾಷ್ಟ್ರೀಯ ಸಂಸ್ಕೃತಿಯ ಪ್ರಶ್ನೆಗಳಿಗೆ ತಳುಕು ಹಾಕಿದರು. ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಉಲ್ಲೇಖಿಸುವ ಗಾಂಧಿ ಅವರ ಪ್ರಯತ್ನಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗಾಂಧಿ, “ಅಲ್ಲಿರುವ ನನ್ನ ಯುವ ಸಹದ್ಯೋಗಿಯೊಬ್ಬರು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ನಾನು ಈ ವಿಷಯವನ್ನು ಪ್ರಸ್ತಾಪಿಸಲು ಹೋಗುತ್ತಿರಲಿಲ್ಲ, ಆದರೆ ಅವರು ನಮ್ಮ ದೇಶಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಬಗೆಗಿನ ನಮ್ಮ ತಿಳುವಳಿಕೆಯ ಬಗ್ಗೆ ಪ್ರಶ್ನೆ ಎತ್ತಿದ್ದರಿಂದ, ನಾನು ಕೆಲವೊಂದನ್ನು ಓದುವ ಮೂಲಕ ಪ್ರಾರಂಭಿಸಲು ಬಯಸುತ್ತೇನೆ. ಇದು ಸೇನಾ ಮುಖ್ಯಸ್ಥ ನರವಣೆ ಅವರ ಆತ್ಮಚರಿತ್ರೆಯಿಂದ ಆಯ್ದುಕೊಂಡಿದ್ದು. ನೀವು ಇದನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಯಾರು ದೇಶಭಕ್ತರು, ಯಾರು ಅಲ್ಲ ಎಂಬುದು ಆಗ ನಿಮಗೆ ನಿಖರವಾಗಿ ತಿಳಿಯುತ್ತದೆ,” ಎಂದರು.

ಮುಂದುವರಿದು ಮಾತನಾಡಿದ ಗಾಂಧಿ, ಆ ಸಾಲುಗಳು ಡೋಕ್ಲಾಮ್ ಘಟನೆಗೆ ಸಂಬಂಧಿಸಿವೆ ಎಂದರು. “ನಾಲ್ಕು ಚೀನೀ ಟ್ಯಾಂಕ್‌ಗಳು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸುತ್ತಿದ್ದವು” ಮತ್ತು ಪರ್ವತದ ಸಾಲೊಂದನ್ನು (ridge) ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. “ಸೇನಾ ಮುಖ್ಯಸ್ಥರು ಬರೆಯುತ್ತಾರೆ, ಮತ್ತು ಅವರ ಪುಸ್ತಕವನ್ನು ಉಲ್ಲೇಖಿಸಿರುವ ಲೇಖನದಿಂದ ನಾನಿದನ್ನು ಓದುತ್ತಿದ್ದೇನೆ,” ಎಂದು ಗಾಂಧಿ ಸೇರಿಸಿದರು.

ಆತ್ಮಚರಿತ್ರೆ ಇನ್ನೂ ಪ್ರಕಟವಾಗಿಲ್ಲ ಮತ್ತು ಅದನ್ನು ಸದನದಲ್ಲಿ ಉಲ್ಲೇಖಿಸುವಂತಿಲ್ಲ ಎಂದು ವಾದಿಸಿ ಎನ್‌ಡಿಎ (NDA) ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ತಾವು ಉಲ್ಲೇಖಿಸುತ್ತಿರುವ ಪುಸ್ತಕ ಅಧಿಕೃತವಾಗಿ ಪ್ರಕಟವಾಗಿದೆಯೇ ಎಂಬ ಬಗ್ಗೆ ವಿರೋಧ ಪಕ್ಷದ ನಾಯಕರಿಂದ ಸ್ಪಷ್ಟನೆ ಕೋರಿದರು. “ಲೋಕಸಭೆಯ ವಿರೋಧ ಪಕ್ಷದ ನಾಯಕರು (ರಾಹುಲ್ ಗಾಂಧಿ) ತಾವು ಉಲ್ಲೇಖಿಸುತ್ತಿರುವ ಪುಸ್ತಕವನ್ನು ಸದನದ ಮುಂದೆ ಹಾಜರುಪಡಿಸಬೇಕು ಎಂದು ನಾನು ಬಯಸುತ್ತೇನೆ, ಏಕೆಂದರೆ ಅವರು ಪ್ರಸ್ತಾಪಿಸುತ್ತಿರುವ ಪುಸ್ತಕ ಇನ್ನೂ ಪ್ರಕಟವಾಗಿಲ್ಲ,” ಎಂದು ರಾಜನಾಥ್ ಸಿಂಗ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ತಮ್ಮ ಮೂಲ ಅಧಿಕೃತವಾಗಿದೆ ಮತ್ತು ಡಿಸೆಂಬರ್ 2019 ರಿಂದ ಏಪ್ರಿಲ್ 2022 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಿ ಪ್ರಕಟವಾದ ಮ್ಯಾಗಜೀನ್ ಲೇಖನದಲ್ಲಿ ಈ ಸಾಲುಗಳು ಬಂದಿವೆ ಎಂದು ತಿಳಿಸಿದರು.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಕಟವಾಗದ ವಿಷಯವನ್ನು ಸದನದಲ್ಲಿ ಓದುವಂತಿಲ್ಲ ಎಂದು ತೀರ್ಪು ನೀಡಿದರು ಮತ್ತು ಓದಲು ಅನುಮತಿ ನಿರಾಕರಿಸಿದರು. ಗಾಂಧಿ ಅವರಿಗೆ ಆತ್ಮಚರಿತ್ರೆಯನ್ನು ಓದಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷದ ಸದಸ್ಯರು ಪದೇ ಪದೇ ಒತ್ತಾಯಿಸಿದರೆ, ಅಪ್ರಕಟಿತ ಕೃತಿಗಳ ಉಲ್ಲೇಖಕ್ಕೆ ಸದನದ ನಿಯಮಗಳು ಅನುಮತಿಸುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, “ನಿಯತಕಾಲಿಕೆಗಳು ಅಥವಾ ಪತ್ರಿಕೆಗಳ ಲೇಖನಗಳನ್ನು ಸದನದಲ್ಲಿ ಉಲ್ಲೇಖಿಸುವಂತಿಲ್ಲ ಎಂದು ಸ್ಪೀಕರ್ ತೀರ್ಪು ನೀಡಿದ್ದಾರೆ… ಸದನದಲ್ಲಿ ಚರ್ಚೆಯು ಕಾನೂನುಗಳ ಪ್ರಕಾರ ನಡೆಯಬೇಕು,” ಎಂದರು. ಪಟ್ಟಿಯಲ್ಲಿಲ್ಲದ ಚೀನಾ ವಿಚಾರವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಾ, ಸದನದ ನಿಯಮಗಳಿಗೆ ವಿರುದ್ಧವಾಗಿ ಮ್ಯಾಗಜೀನ್ ಲೇಖನವನ್ನು ಉಲ್ಲೇಖಿಸಲು ಪ್ರಯತ್ನಿಸುವುದನ್ನು ಮುಂದುವರಿಸಿದ್ದರಿಂದ, “ಲೋಕಸಭೆಯಲ್ಲಿ ಸ್ಪೀಕರ್ ಆದೇಶವನ್ನು ಪಾಲಿಸದ ಸದಸ್ಯರ ಬಗ್ಗೆ ಏನು ಮಾಡಬೇಕು ಎಂಬುದರ ಕುರಿತು ಕೂಡ ನಾವು ಚರ್ಚಿಸಬೇಕು,” ಎಂದು ರಿಜಿಜು ಹೇಳಿದರು.

ವಿರೋಧ ಪಕ್ಷದವರು ಅಪ್ರಕಟಿತ ಲೇಖನ ಅಥವಾ ಪುಸ್ತಕದಿಂದ ಓದುವಂತಿಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿದ್ದರಿಂದ, ಉಭಯ ಕಡೆಯಿಂದ ಗದ್ದಲ ಉಂಟಾಗಿ ಸುಮಾರು 30 ನಿಮಿಷಗಳ ಕಾಲ ಈ ಬಿಕ್ಕಟ್ಟು ಮುಂದುವರಿಯಿತು.

ನಂತರ, ವಿರೋಧ ಪಕ್ಷದ ನಾಯಕರ ಬೆಂಬಲಕ್ಕೆ ನಿಂತ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಖಿಲೇಶ್ ಯಾದವ್, “ಚೀನಾಕ್ಕೆ ಸಂಬಂಧಿಸಿದ ವಿಷಯ ಬಹಳ ಸೂಕ್ಷ್ಮವಾದುದು. ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು,” ಎಂದರು.

ಸದನದಲ್ಲಿ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಮುಂದುವರಿದಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮಧ್ಯಪ್ರವೇಶಿಸಿದರು. ನಂತರ ನಿರಂತರ ಅಡಚಣೆಗಳ ನಡುವೆಯೇ ಕಲಾಪ ಮುಂದವರಿಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page