Home ದೇಶ ಎಸ್‌ಐಆರ್ ವಿವಾದ: ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂ...

ಎಸ್‌ಐಆರ್ ವಿವಾದ: ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಸಾಧ್ಯತೆ

0

ದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರಗಳ ವಿಧಾನವನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ ಒಕ್ಕೂಟದ ಇತರ 12 ಪ್ರಮುಖ ನಾಯಕರು ಸಲ್ಲಿಸಿರುವ ಮಹತ್ವದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅಕ್ಟೋಬರ್ 15) ವಿಚಾರಣೆ ನಡೆಸುವ ಸಾಧ್ಯತೆಯಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಇದೇ ರೀತಿಯ ಮತ್ತೊಂದು ಅರ್ಜಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣಾಧೀನವಾಗಿದೆ.

ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಮಾಹಿತಿಯ ಪ್ರಕಾರ, ಅಕ್ಟೋಬರ್ 12 ರಂದು ಸಲ್ಲಿಕೆಯಾದ ಈ ಅರ್ಜಿಯು ಅಕ್ಟೋಬರ್ 13 ರಂದು ‘ರಿಟ್ ಪಿಟಿಷನ್ (ಸಿವಿಲ್) ಸಂಖ್ಯೆ 1351/2026’ ಆಗಿ ನೋಂದಣಿಯಾಗಿದ್ದು, ಅಕ್ಟೋಬರ್ 15 ರಂದು ವಿಚಾರಣೆಗೆ ಬರುವ ತಾತ್ಕಾಲಿಕ ಪಟ್ಟಿಯಲ್ಲಿದೆ. ರಾಹುಲ್ ಗಾಂಧಿ ಅವರಲ್ಲದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಟಿಎಂಸಿಯ ಸೌಗತ ರಾಯ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ಈ ಜಂಟಿ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಅಕ್ಟೋಬರ್ 5 ರಂದು, ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಒಪ್ಪಿಗೆ ಪಡೆಯದೆಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್‌ಐಆರ್ ಕುರಿತು ಏಕಪಕ್ಷೀಯವಾಗಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಲೋಪವಾಗಿದ್ದು, ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಮತ್ತು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಧ್ಯಂತರ ತಡೆ ನೀಡಬೇಕೆಂದು ಸಿಂಗ್ ಕೋರಿದ್ದರು.

ಆದರೆ, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸದೆ ಮತ್ತು ಪ್ರತಿವಾದಿಗಳ ವಾದ ಆಲಿಸದೆ ಕೇವಲ ಪತ್ರಿಕಾ ವರದಿಗಳ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತರನ್ನು ನಿರ್ಬಂಧಿಸಲು ಅಥವಾ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ತಕ್ಷಣದ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು. ಆದಾಗ್ಯೂ, ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದ ನ್ಯಾಯಪೀಠವು, ಕಾನೂನು ಉಲ್ಲಂಘಿಸಿ ನಿರ್ಧಾರ ತೆಗೆದುಕೊಂಡಿರುವುದು ಸಾಬೀತಾದರೆ ಅಂತಹ ನಿರ್ಧಾರಗಳನ್ನು ರದ್ದುಗೊಳಿಸುವುದಾಗಿ ಸುಳಿವು ನೀಡಿತ್ತು.

2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯ ಸೆಕ್ಷನ್ 18ರ ಪ್ರಕಾರ, ಮೂವರು ಸದಸ್ಯರ ಆಯೋಗದ ನಿರ್ಧಾರಗಳು ಸಾಧ್ಯವಾದಷ್ಟು ಸರ್ವಾನುಮತದಿಂದ ಕೂಡಿರಬೇಕು ಮತ್ತು ಭಿನ್ನಾಭಿಪ್ರಾಯಗಳಿದ್ದಲ್ಲಿ ಬಹುಮತದ ಅಭಿಪ್ರಾಯದಂತೆ ಬಗೆಹರಿಸಿಕೊಳ್ಳಬೇಕು. ಕಳೆದ ಹತ್ತು ತಿಂಗಳಲ್ಲಿ ಸಂಧು ಮತ್ತು ಜೋಶಿ ಅವರು ಮತದಾರರ ಪಟ್ಟಿ ಹಾಗೂ ತಂತ್ರಜ್ಞಾನ ಸಂಬಂಧಿತ ವಿಷಯಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿತ್ತು. ಆದರೆ, ತನ್ನ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದು, ವರದಿಯಾದ ಭಿನ್ನಾಭಿಪ್ರಾಯಗಳು ಕೇವಲ ಆಂತರಿಕ ಚರ್ಚೆಯ ಭಾಗವಾಗಿದ್ದವು ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿತ್ತು.

ಇದೀಗ ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷ ನಾಯಕರು ಸಲ್ಲಿಸಿರುವ ಅರ್ಜಿಯು ಕೇವಲ ಜ್ಞಾನೇಶ್ ಕುಮಾರ್ ಅವರ ಅಧಿಕಾರ ವ್ಯಾಪ್ತಿಯ ಪ್ರಶ್ನೆಗೆ ಸೀಮಿತವಾಗಿರದೆ, ಎಸ್‌ಐಆರ್ ಅನುಷ್ಠಾನದ ವೇಳೆ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು, ಚುನಾವಣಾ ಡೇಟಾಬೇಸ್‌ನಲ್ಲಿ ಮಾಡಲಾದ ಬದಲಾವಣೆಗಳು ಹಾಗೂ ತೆಗೆದುಕೊಂಡ ನಿರ್ಧಾರಗಳ ಕುರಿತು ನ್ಯಾಯಾಂಗದ ಪರಿಶೀಲನೆ ನಡೆಸಬೇಕೆಂದು ಕೋರಿದೆ.

ವಿವಾದಿತ ಎಸ್‌ಐಆರ್ ನಿರ್ಧಾರಗಳಿಗೆ ಸಂಬಂಧಿಸಿದ ಕಡತಗಳು, ಸಭೆಯ ಕಾರ್ಯಸೂಚಿಗಳು, ನಡಾವಳಿಗಳು, ಆಂತರಿಕ ಟಿಪ್ಪಣಿಗಳು ಹಾಗೂ ಆಯುಕ್ತರು ದಾಖಲಿಸಿದ ಆಕ್ಷೇಪಣೆಗಳ ಜೊತೆಗೆ ಇಸಿಐನೆಟ್ (ECINET) ಮತ್ತು ಎರೋನೆಟ್ (ERONET) ವ್ಯವಸ್ಥೆಗಳ ಆಕ್ಸೆಸ್ ಲಾಗ್‌ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಇದಲ್ಲದೆ, ಎಸ್‌ಐಆರ್ ವೇಳೆ ಮತದಾರರ ಹೆಸರು ಡಿಲೀಟ್ ಮಾಡಿರುವುದು ಮತ್ತು ಮಾರ್ಪಾಡುಗಳ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ಸ್ವತಂತ್ರ ಆಡಿಟ್ (ಪರಿಶೋಧನೆ) ನಡೆಸಬೇಕು ಹಾಗೂ ಪಟ್ಟಿಯಿಂದ ಕೈಬಿಡಲಾದ ಮತದಾರರ ಹೆಸರು ಮತ್ತು ಅದಕ್ಕೆ ಕಾರಣಗಳನ್ನು ಬೂತ್ ವಾರು ಪ್ರಕಟಿಸಬೇಕು ಎಂದು ಆಗ್ರಹಿಸಲಾಗಿದೆ.

ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ರಲ್ಲಿ ಮಾಡಲಾದ ಬದಲಾವಣೆಗಳನ್ನು ಪ್ರಶ್ನಿಸಿರುವ ಅರ್ಜಿದಾರರು, ಸೂಕ್ತ ನೋಟಿಸ್ ನೀಡದೆ ಮತ್ತು ಅಹವಾಲು ಆಲಿಸದೆ ಮತದಾರರ ಹೆಸರನ್ನು ಕೈಬಿಡದಂತೆ ರಕ್ಷಣೆ ಕೋರಿದ್ದಾರೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಸಾಮಾನ್ಯ ಅಧಿಕಾರವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಹಿಂದಿನ ವಿಚಾರಣೆಗಳಲ್ಲಿ ಪರಿಶೀಲಿಸಿರುವುದರಿಂದ, ಈ ಹೊಸ ಅರ್ಜಿಯು ನಿರ್ದಿಷ್ಟ ನಿರ್ಧಾರಗಳ ಕಾನೂನುಬದ್ಧತೆ ಮತ್ತು ಎಸ್‌ಐಆರ್ ಅನುಷ್ಠಾನದ ವಿಧಾನವನ್ನು ಮಾತ್ರ ಪ್ರಶ್ನಿಸಿದೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಸಂಬಂಧಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 5 ರಂದೇ ರಾಕೇಶ್ ಕುಮಾರ್ ಸಿಂಗ್ ಅವರ ಅರ್ಜಿಯೊಂದಿಗೆ ಜೋಡಿಸಿತ್ತು.

ಆದರೆ ರಾಹುಲ್ ಗಾಂಧಿ ಅವರ ಅರ್ಜಿಯನ್ನು ಆ ಪ್ರಕರಣಗಳೊಂದಿಗೆ ಸೇರಿಸುವ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ನ್ಯಾಯಾಂಗ ನಿರ್ದೇಶನ ಹೊರಬಿದ್ದಿಲ್ಲ. ಈ ಹೊಸ ಅರ್ಜಿಯನ್ನು ಬಾಕಿ ಇರುವ ಪ್ರಕರಣಗಳ ಜೊತೆಗೇ ವಿಚಾರಣೆ ನಡೆಸಲಾಗುತ್ತದೆಯೇ ಎಂಬುದು ವಿಷಯ ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟ್ ನೀಡುವ ನಿರ್ದೇಶನಗಳನ್ನು ಅವಲಂಬಿಸಿರುತ್ತದೆ.

You cannot copy content of this page

Exit mobile version