ದೆಹಲಿ: ಮಹಿಳಾ ಮೀಸಲಾತಿ ಮಸೂದೆಯ ಮರೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ (Delimitation) ಹುನ್ನಾರ ಅಡಗಿತ್ತು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶುಕ್ರವಾರ ಸಂಸತ್ತಿನಲ್ಲಿ ಮಸೂದೆಯನ್ನು ಸೋಲಿಸುವ ಮೂಲಕ ‘ಭಾರತದ ಕಲ್ಪನೆಯನ್ನು’ (Idea of India) ರಕ್ಷಿಸಿದ್ದೇವೆ ಎಂದು ಶನಿವಾರ ಹೇಳಿದ್ದಾರೆ.
ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಏಪ್ರಿಲ್ 16 ರಂದು ಹೊಸ ಮಸೂದೆಯನ್ನು ಮಂಡಿಸಿ, 2023ರಲ್ಲಿಯೇ ಅಂಗೀಕಾರವಾಗಿದ್ದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸುವ ನಾಟಕವಾಡುತ್ತಿದೆ ಎಂದು ದೂರಿದರು.
“ಈ ಕರೆಯಲಾಗುವ ‘ಮಹಿಳಾ ಮಸೂದೆ’ಯ ಒಳಗೆ ಕ್ಷೇತ್ರ ಪುನರ್ ವಿಂಗಡಣೆಯ ವಿಷಯವನ್ನು ಬಚ್ಚಿಡಲಾಗಿತ್ತು. ಇದರ ಹಿಂದಿನ ಉದ್ದೇಶ ಭಾರತದ ಒಕ್ಕೂಟದಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದಾಗಿತ್ತು. ಬಿಜೆಪಿಯ ಈ ನಡೆ ದಕ್ಷಿಣದ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳ ಬಲವನ್ನು ಕುಂದಿಸುವ ಪ್ರಯತ್ನವಾಗಿದೆ,” ಎಂದು ಅವರು ಆರೋಪಿಸಿದರು.
ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಧ್ವನಿ ಇರಬೇಕು ಮತ್ತು ಅದು ತನ್ನ ಸಂಪ್ರದಾಯವನ್ನು ರಕ್ಷಿಸಿಕೊಳ್ಳಲು ಸ್ವತಂತ್ರವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಚುನಾವಣೆ ಎಂಬುದು ಕೇವಲ ರಾಜಕೀಯ ಹೋರಾಟವಲ್ಲ, ಅದೊಂದು ಸೈದ್ಧಾಂತಿಕ ಕದನ ಎಂದ ಅವರು, ದೇಶವನ್ನು ಕೇವಲ ಎರಡು ಮೂರು ಕಾರ್ಪೊರೇಟ್ ಕಂಪನಿಗಳ ನಿಯಂತ್ರಣದಲ್ಲಿಡಲು ಬಿಜೆಪಿ ಬಯಸುತ್ತಿದೆ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿಯ ಹೆಸರಿನಲ್ಲಿ ದೇಶದ ಒಕ್ಕೂಟ ರಚನೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಮಸೂದೆಯ ಸೋಲು ಸಂವಿಧಾನ ಮತ್ತು ವಿರೋಧ ಪಕ್ಷಗಳ ಐಕ್ಯತೆಯ ಗೆಲುವು ಎಂದು ಅವರು ಬಣ್ಣಿಸಿದರು.
“ನಿನ್ನೆ ನಡೆದದ್ದು ಪ್ರಜಾಪ್ರಭುತ್ವದ ದೊಡ್ಡ ಗೆಲುವು. ಸದ್ಯದ ಲೋಕಸಭಾ ಸಂಖ್ಯಾಬಲದ ಆಧಾರದ ಮೇಲೆಯೇ 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿ,” ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು. ಬಿಜೆಪಿ ಸರ್ಕಾರವು ಅಧಿಕಾರದಲ್ಲಿ ಉಳಿಯಲು ಮಹಿಳೆಯರನ್ನು ಒಂದು ನೆಪವನ್ನಾಗಿ ಮಾಡಿಕೊಳ್ಳುತ್ತಿದೆ. ಮಸೂದೆ ಅಂಗೀಕಾರವಾದರೆ ಒಳ್ಳೆಯದು, ಇಲ್ಲದಿದ್ದರೆ ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿಗಳೆಂದು ಬಿಂಬಿಸಿ ತಾವು ಮಹಿಳೆಯರ ಪಾಲಿಗೆ ರಕ್ಷಕರು ಎಂದು ತೋರಿಸಿಕೊಳ್ಳುವುದು ಅವರ ತಂತ್ರವಾಗಿತ್ತು ಎಂದು ಪ್ರಿಯಾಂಕಾ ಟೀಕಿಸಿದರು.
