ಜ್ಞಾನೇಶ್ ಕುಮಾರ್, ಮೋದಿ ಮತ್ತು ಅಮಿತ್ ಶಾಗೆ ನಿದ್ದೆ ಬರುತ್ತಿಲ್ಲ: ಗೋವಾದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಮತ ಕಳ್ಳತನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇವರಿಂದ ಉತ್ತರ ಕೇಳುವ ಹಾಗೂ ನ್ಯಾಯ ದೊರಕಿಸುವ ದಿನ ಬಂದೇ ಬರುತ್ತದೆ ಎಂಬ ಭಯದಿಂದಾಗಿ ದೆಹಲಿಯಲ್ಲಿ ಕುಳಿತಿರುವ ಇವರಿಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.

ಗೋವಾದ ಭೂಮಿ, ಪರಿಸರ, ಸಾಂಸ್ಕೃತಿಕ ಪರಂಪರೆ ಮತ್ತು ಅಸ್ಮಿತೆಯನ್ನು ಉಳಿಸುವ ಉದ್ದೇಶದೊಂದಿಗೆ ದಕ್ಷಿಣ ಗೋವಾದ ಮಡಗಾಂವ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಗೋಂಯ್ ರಾಖಣ್ ಯಾತ್ರೆ’ಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು.

ನಂತರ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ ಎಂದರು. ಇದೇ ವೇಳೆ ಮತದಾರರ ಪಟ್ಟಿಯ ಅಕ್ರಮಗಳ ಕುರಿತು ಪ್ರಸ್ತಾಪಿಸಿದ ಅವರು, “ಪರದೆಯ ಹಿಂದಿದ್ದು ಮೋದಿ ಯೋಜನೆ ರೂಪಿಸಿದರೆ, ಅಮಿತ್ ಶಾ ಅದನ್ನು ಜಾರಿಗೊಳಿಸುತ್ತಾರೆ ಮತ್ತು ಜ್ಞಾನೇಶ್ ಕುಮಾರ್ ಮತ ಕಳ್ಳತನವನ್ನು ನಡೆಸಿಕೊಡುತ್ತಾರೆ,” ಎಂದು ಆರೋಪಿಸಿದರು.

ತಮ್ಮ ವಿರುದ್ಧ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವರು 45ಕ್ಕೂ ಹೆಚ್ಚು ಮಾನಹಾನಿ ಮೊಕದ್ದಮೆಗಳನ್ನು ಹೂಡಿದ್ದಾರೆ ಎಂದು ಸ್ಮರಿಸಿದ ರಾಹುಲ್ ಗಾಂಧಿ, ಮತ ಕಳ್ಳತನದ ಬಗ್ಗೆ ತಾನು ಸಾರ್ವಜನಿಕವಾಗಿ ಇಷ್ಟೆಲ್ಲಾ ಮಾತನಾಡಿದರೂ ತನ್ನ ವಿರುದ್ಧ ಏಕೆ ಹೊಸ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಸವಾಲು ಹಾಕಿದರು. “ಏಕೆಂದರೆ, ಪ್ರಕರಣ ದಾಖಲಿಸಿದರೆ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಆರಂಭವಾಗಿ ಅವರೇ ಸಿಕ್ಕಿಬೀಳುತ್ತಾರೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ,” ಎಂದರು.

ವಿಪಕ್ಷಗಳ ಮತಗಳನ್ನು ಅಳಿಸಿ ತಮ್ಮ ಮತಗಳನ್ನು ಹೆಚ್ಚಿಸಿಕೊಳ್ಳಲು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಅಥವಾ ಅಕ್ಕಪಕ್ಕದ ರಾಜ್ಯಗಳಿಂದ ಬೆಂಬಲಿಗರನ್ನು ವರ್ಗಾಯಿಸುವ ಕೆಲಸ ನಡೆಯುತ್ತಿದೆ ಎಂದು ಎಚ್ಚರಿಸಿದ ಅವರು, ಸಂವಿಧಾನದ ರಕ್ಷಕರಾದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ವೇಳೆ ಸದಾ ಜಾಗರೂಕರಾಗಿದ್ದು ಇಂತಹ ಅಕ್ರಮಗಳನ್ನು ತಡೆದು ಹಿಡಿಯಬೇಕು ಎಂದು ಕರೆ ನೀಡಿದರು.

ಸಂವಿಧಾನದ ಮೇಲಿನ ಈ ದಾಳಿಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರು ಕಾನೂನಿನ ಮುಂದೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಗುಡುಗಿದರು.

Related Articles

ಇತ್ತೀಚಿನ ಸುದ್ದಿಗಳು