Thursday, November 6, 2025

ಸತ್ಯ | ನ್ಯಾಯ |ಧರ್ಮ

ಐದು ಮಾರ್ಗಗಳಲ್ಲಿ ವೋಟ್ ಗೋಲ್‌ಮಾಲ್: ಅಗೆದಷ್ಟೂ ಹೊರಬರುತ್ತಿದೆ ಮತಗಳ್ಳತನದ ಕತೆಗಳು

ಇತ್ತೀಚೆಗೆ ನಡೆದ ಮಹಾರಾಷ್ಟ್ರ, ಹರಿಯಾಣ ಮೊದಲಾದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ವಿಶ್ಲೇಷಣೆ ಚುನಾವಣಾ ಪ್ರಕ್ರಿಯೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುನಾವಣೆಗೆ ಪೂರ್ವಭಾವಿಯಾಗಿ ನಡೆದ ಸಮೀಕ್ಷೆಗಳು ಒಂದು ಪಕ್ಷ ಗೆಲ್ಲುವುದಾಗಿ ಹೇಳುತ್ತವೆ, ಜನರ ನಡುವೆ ಅದೇ ಪಕ್ಷ ಗೆಲ್ಲುವ ಬಗ್ಗೆ ಚರ್ಚೆಯಿರುತ್ತದೆ, ಮತದಾರರು ಕೂಡ ತಮ್ಮ ಕಷ್ಟ ಸುಖ ನೋಡಿಕೊಳ್ಳುವ ಪಕ್ಷದ ನಾಯಕನಿಗೆ ಮತ ಹಾಕುವುದಾಗಿ ಹೇಳುತ್ತಾರೆ.

ಪೋಲಿಂಗ್ ನಂತರದ ಎಕ್ಸಿಟ್ ಪೋಲ್‌ಗಳು ಮತ್ತು ಪೋಸ್ಟ್-ಪೋಲ್ ಸಮೀಕ್ಷೆಗಳೂ ಕೂಡ ಅದೇ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ತೋರಿಸುತ್ತವೆ. ಆದರೆ, ಚುನಾವಣಾ ಆಯೋಗ (ಇಸಿ) ಅಧಿಕೃತವಾಗಿ ಫಲಿತಾಂಶಗಳನ್ನು ಪ್ರಕಟಿಸಿದಾಗ ಅನಿರೀಕ್ಷಿತವಾಗಿ ಗೆಲ್ಲಬೇಕೆಂದಿದ್ದ ಪಕ್ಷದ ಮತಗಳು ಕಡಿಮೆಯಾಗಿ, ಯಾರೂ ಊಹಿಸದ ಮತ್ತೊಂದು ಪಕ್ಷ ವಿಚಿತ್ರವಾಗಿ ವಿಜಯ ಸಾಧಿಸುತ್ತದೆ.

ಮತದಾರರ ಪಟ್ಟಿಯಲ್ಲಿ ಗೋಲ್‌ಮಾಲ್, ಮತಗಳ್ಳತನ ಮತ್ತು ರಿಗ್ಗಿಂಗ್‌ನಂತಹ ವಿಷಯಗಳು ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶಗಳ ಮೇಲೆ ತೀವ್ರವಾಗಿ ಪ್ರಭಾವ ಬೀರಿ, ಚುನಾವಣಾ ಪ್ರಕ್ರಿಯೆಯನ್ನು ಅಪಹಾಸ್ಯ ಮಾಡುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಕಲಿ ಮತಗಳನ್ನು ಕೆಲವೇ ಸೆಕೆಂಡುಗಳಲ್ಲಿ ತೆಗೆದುಹಾಕುವ ತಂತ್ರಜ್ಞಾನ ಲಭ್ಯವಿದ್ದರೂ, ಆಯೋಗವು ಆ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕೇಂದ್ರದ ಮೋದಿ ಸರ್ಕಾರಕ್ಕೆ ಅನುಕೂಲಕರವಾಗಿ ಇಸಿ ವರ್ತಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಗೋಲ್‌ಮಾಲ್ ಬಗ್ಗೆ ಆಳವಾದ ಚರ್ಚೆ ಅಗತ್ಯ ಎಂದು ರಾಜಕೀಯ ವಿಶ್ಲೇಷಕರು ಒತ್ತಿ ಹೇಳುತ್ತಿದ್ದಾರೆ.

ಯಾವುದೇ ಒಂದು ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಗೋಲ್‌ಮಾಲ್ ಮಾಡಲು ಮುಖ್ಯವಾಗಿ ಐದು ವಿಧಾನಗಳನ್ನು ಬಳಸಲಾಗುತ್ತಿದೆ:

ಡೂಪ್ಲಿಕೇಟ್ ವೋಟ್‌ಗಳು (ನಕಲಿ ಮತಗಳು): ಒಂದೇ ಫೋಟೋ, EPIC ನಂಬರ್ ಅಥವಾ ವೋಟರ್ ಐಡಿ ನಂಬರ್ ಒಂದಕ್ಕಿಂತ ಹೆಚ್ಚು ಬೂತ್‌ಗಳಲ್ಲಿ ಅಥವಾ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತಗಳನ್ನು ನಕಲಿ ಮತಗಳು ಎನ್ನುತ್ತಾರೆ.

ಒಂದೇ ಫೋಟೋ, ಬೇರೆ ಹೆಸರುಗಳು: ಈ ವಿಧಾನದಲ್ಲಿ ಮತದಾರರ ಫೋಟೋ ಒಂದೇ ಆಗಿರುತ್ತದೆ, ಆದರೆ ಹೆಸರುಗಳು ಮತ್ತು ಇತರ ವಿವರಗಳು ಭಿನ್ನವಾಗಿರುತ್ತವೆ.

ಒಂದೇ ಹೆಸರು, ಬೇರೆ ಫೋಟೋಗಳು: ಈ ವಿಧಾನದಲ್ಲಿ ಮತದಾರರ ಹೆಸರು ಮತ್ತು ಇತರ ವಿವರಗಳು ಒಂದೇ ಆಗಿರುತ್ತವೆ, ಆದರೆ ಫೋಟೋಗಳು ಬೇರೆ ಬೇರೆ ಇರುತ್ತವೆ.

ಅಮಾನ್ಯ ವಿಳಾಸ (Invalid Address): ಮತದಾರರ ಕಾರ್ಡ್‌ನಲ್ಲಿ ನಮೂದಿಸಲಾದ ವಿಳಾಸವು ವಾಸ್ತವದಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಬೇರೊಬ್ಬರ ವಿಳಾಸವನ್ನು ಉದ್ದೇಶಪೂರ್ವಕವಾಗಿ ಈ ನಕಲಿ ಕಾರ್ಡ್‌ಗಳಿಗೆ ಬಳಸಲಾಗುತ್ತದೆ. ಇತರ ರಾಜ್ಯಗಳ ವಿಳಾಸಗಳನ್ನು ಪಿನ್‌ಕೋಡ್ ಬದಲಾಯಿಸಿ ಬಳಸಿಕೊಳ್ಳಲಾಗುತ್ತದೆ. ‘ಜೀರೋ ಅಡ್ರೆಸ್’ ಹೆಸರಿನಲ್ಲಿ ಕೆಲವು ನಕಲಿ ಮತದಾರರ ಕಾರ್ಡ್‌ಗಳು ವಿತರಣೆಯಾಗಿವೆ.

ಬಲ್ಕ್ ಮತದಾರರು (Bulk Voters): ಒಂದೇ ಮನೆ ಸಂಖ್ಯೆಯ ಮೇಲೆ 10 ಕ್ಕಿಂತ ಹೆಚ್ಚು ಮತದಾರರು ನೋಂದಾಯಿಸಿಕೊಂಡಿದ್ದರೆ ಅವರನ್ನು ಬಲ್ಕ್ ಮತದಾರರು ಎಂದು ಕರೆಯಲಾಗುತ್ತದೆ. ನಕಲಿ ಮತಗಳ ಸೃಷ್ಟಿಗೆ ಇತ್ತೀಚಿನ ದಿನಗಳಲ್ಲಿ ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ 10 ಚದರ ಅಡಿ ವಿಸ್ತೀರ್ಣದ ಒಂದೇ ಮನೆಯಲ್ಲಿ 80 ಮಂದಿ ಮತದಾರರು ಇರುವ ಬಗ್ಗೆ ಇಂಡಿಯಾ ಟುಡೇ ನಡೆಸಿದ ಕ್ಷೇತ್ರಮಟ್ಟದ ಪರಿಶೀಲನೆಯಲ್ಲಿ ತಿಳಿದುಬಂದಿದೆ.

ಫಾರ್ಮ್-6 ದುರುಪಯೋಗ (Misuse of Form-6): ಹೊಸ ಮತದಾರರ ನೋಂದಣಿಗೆ ಈ ಫಾರ್ಮ್-6 ಅನ್ನು ಬಳಸಲಾಗುತ್ತದೆ. ತಪ್ಪು ಹೆಸರು, ಒಂದೇ ಹೆಸರಿನಲ್ಲಿ ಅನೇಕ ಎಂಟ್ರಿಗಳನ್ನು ನೀಡುವುದು, ಒಂದೇ ರೀತಿಯ ವಿವರಗಳೊಂದಿಗೆ ಬಲ್ಕ್ ಮತದಾರರ ನೋಂದಣಿ, ತಪ್ಪು ವಿಳಾಸಗಳು ಮತ್ತು ನಕಲಿ ಪ್ರಮಾಣಪತ್ರಗಳನ್ನು ನೀಡುವುದು ಈ ಫಾರ್ಮ್-6 ದುರುಪಯೋಗಕ್ಕೆ ಬರುತ್ತದೆ. ಉದಾಹರಣೆಗೆ, ಹಿಂದೆ ನಡೆದ ಚುನಾವಣೆಗಳಲ್ಲಿ ಕಾಣದ ಕೆಲವು ಮತದಾರರು, ನಂತರದ ಚುನಾವಣೆಗಳಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದು ಈ ದುರುಪಯೋಗದಡಿ ಬರುತ್ತದೆ.

ಫಾರ್ಮ್-7 ದುರುಪಯೋಗ (Misuse of Form-7): ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಈ ಫಾರ್ಮ್-7 ಅನ್ನು ಬಳಸಲಾಗುತ್ತದೆ. ಉದಾಹರಣೆಗೆ, ಹಿಂದೆ ನಡೆದ ಚುನಾವಣೆಗಳಲ್ಲಿ ಇದ್ದ ಕೆಲವು ಮತದಾರರು, ನಂತರದ ಚುನಾವಣೆಗಳಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು ಈ ಫಾರ್ಮ್-7 ದುರುಪಯೋಗದಡಿ ಬರುತ್ತದೆ. ಉದ್ದೇಶಿತ ರಾಜಕೀಯ ಪಕ್ಷಕ್ಕೆ ನಷ್ಟವನ್ನುಂಟು ಮಾಡಲು ಆ ಪಕ್ಷದ ಬೆಂಬಲಿಗರ ಮತಗಳನ್ನು ಕಾರಣವಿಲ್ಲದೆ ತೆಗೆದುಹಾಕುವುದು ಈ ದುರುಪಯೋಗದ ಅಡಿಯಲ್ಲಿ ಬರುತ್ತದೆ.

2024 ರ ಹರಿಯಾಣ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಸುಮಾರು 12.5 ಶೇಕಡಾ ಮತಗಳು ನಕಲಿ ಮತಗಳಾಗಿವೆ, ಒಟ್ಟಾರೆಯಾಗಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹರಿಯಾಣ ಚುನಾವಣೆಯಲ್ಲಿ ಬ್ರೆಜಿಲ್‌ಗೆ ಸೇರಿದ ಒಬ್ಬ ಮಾಡೆಲ್‌ ಹೆಸರಿನಲ್ಲಿ 22 ಮತದಾರರ ಗುರುತಿನ ಚೀಟಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಕೆಯ ಫೋಟೋ ಒಂದೇ ಆಗಿದ್ದರೂ, ಸೀಮಾ, ಸ್ವೀಟಿ, ಸರಸ್ವತಿ ಮುಂತಾದ ವಿವಿಧ ಹೆಸರುಗಳೊಂದಿಗೆ ನಕಲಿ ಮತಗಳನ್ನು ಸೃಷ್ಟಿಸಲಾಗಿದೆ ಎಂದರು.

ಬಿಜೆಪಿ ಮತಗಳ್ಳತನಕ್ಕೆ ಮುಂದಾಗಿದೆ ಎಂದು ಆರೋಪಿಸಿದ ಅವರು, ಮತ ಕಳ್ಳರನ್ನು ಇಸಿ ರಕ್ಷಿಸುತ್ತಾ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು. ಈ ಸಂಬಂಧ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ‘ಹೈಡ್ರೋಜನ್ ಬಾಂಬ್’ ಹೆಸರಿನಲ್ಲಿ ರಾಹುಲ್ ಗಾಂಧಿ ಬಿಜೆಪಿ ಮತ್ತು ಇಸಿ ವಿರುದ್ಧ ಕಿಡಿ ಕಾರಿದರು.

ರಾಹುಲ್ ಗಾಂಧಿಯವರ ಆರೋಪಗಳಿಗೆ ಚುನಾವಣಾ ಆಯೋಗ (ಇಸಿ) ತಿರುಗೇಟು ನೀಡಿದೆ. ಹರಿಯಾಣ ಚುನಾವಣೆಯಲ್ಲಿ ಮತದಾರರ ಪಟ್ಟಿ ಕುರಿತು ಕಾಂಗ್ರೆಸ್ ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ ಎಂದು ಅದು ಹೇಳಿದೆ. ಆ ಸಮಯದಲ್ಲಿ ಪೋಲಿಂಗ್ ಸ್ಟೇಷನ್‌ಗಳಲ್ಲಿ ಕಾಂಗ್ರೆಸ್‌ನ ಪೋಲಿಂಗ್ ಏಜೆಂಟರು ಏನು ಮಾಡುತ್ತಿದ್ದರು ಎಂದು ಇಸಿ ಪ್ರಶ್ನಿಸಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (SER) ರಾಹುಲ್ ಬೆಂಬಲಿಸುತ್ತಾರೆಯೇ ಅಥವಾ ವಿರೋಧಿಸುತ್ತಾರೆಯೇ ಎಂದು ಇಸಿ ಪ್ರಶ್ನಿಸಿದೆ. ರಾಹುಲ್ ಅವರ ಆರೋಪಗಳು ಸಂಪೂರ್ಣವಾಗಿ ನಿರಾಧಾರ ಎಂದು ಬಿಜೆಪಿ ತೀವ್ರವಾಗಿ ಆಕ್ಷೇಪಿಸಿತು. ಸೋನಿಯಾ ಗಾಂಧಿಯನ್ನು ಉಲ್ಲೇಖಿಸಿ, ಇಟಲಿ ಮಹಿಳೆಗೆ ದೇಶದಲ್ಲಿ ಮತದಾನದ ಹಕ್ಕು ಇದೆ ಎಂದು ಲೇವಡಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page