Monday, July 8, 2024

ಸತ್ಯ | ನ್ಯಾಯ |ಧರ್ಮ

ಇಂಫಾಲ ತಲುಪಿದ ರಾಹುಲ್ ಗಾಂಧಿ; ಸಂಜೆ ಮಣಿಪುರ ರಾಜ್ಯಪಾಲರ ಭೇಟಿ

ಲೋಕಸಭೆಯ ಪ್ರಮುಖ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ಅವರು ಈಗಾಗಲೇ ಮಣಿಪುರದ ರಾಜಧಾನಿ ಇಂಫಾಲ್ ತಲುಪಿದ್ದಾರೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಮೈತಿ ಸಮುದಾಯದ ಜನರು ಉಳಿದುಕೊಂಡಿರುವ ಜಿರಿಬಾಮ್ ಜಿಲ್ಲೆಯ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.

ನಂತರ, ರಾಹುಲ್ ಚುರಾಚಂದ್‌ಪುರ ಮತ್ತು ಬಿಷ್ಣುಪುರದ ಮೊಯಿರಾಂಗ್ ಪ್ರದೇಶದ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಕುಕಿ ಮತ್ತು ಮೈತಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಿಂದಾಗಿ, ಎರಡೂ ಬುಡಕಟ್ಟುಗಳಿಗೆ ಸೇರಿದ ಅನೇಕ ಜನರು ತಮ್ಮ ನೆಲೆಗಳನ್ನು ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯದಿಂದಾಗಿ ಮಣಿಪುರದಲ್ಲಿ ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದೀಗ ರಾಹುಲ್ ಗಾಂಧಿ ಪುನರ್ವಸತಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡುತ್ತಿದ್ದಾರೆ.

ಇಂದು ಮುಂಜಾನೆ ರಾಹುಲ್ ಗಾಂಧಿ ಕ್ಯಾಚಾರ್ ಜಿಲ್ಲೆಯ ಕುಂಭಿಗ್ರಾಮ್ ವಿಮಾನ ನಿಲ್ದಾಣವನ್ನು ತಲುಪಿದರು. ಆ ಬಳಿಕ ಅಸ್ಸಾಂ ಪ್ರವಾಹದಿಂದ ಮನೆ ಕಳೆದುಕೊಂಡು ಲಖಿಂಪುರದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿದರು. ನಂತರ ರಸ್ತೆ ಮಾರ್ಗವಾಗಿ ಮಣಿಪುರ ತಲುಪಿದರು.

ಪುನರ್ವಸತಿ ಕೇಂದ್ರಗಳಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ನಂತರ ಸಂಜೆ ಮಣಿಪುರ ರಾಜ್ಯಪಾಲರಾದ ಅನಸೂಯಾ ಉಯ್ಕಿ ಅವರನ್ನು ರಾಹುಲ್ ಭೇಟಿಯಾಗಲಿದ್ದಾರೆ. ಅಲ್ಲಿ ಮಣಿಪುರದ ಘರ್ಷಣೆಯ ಕುರಿತು ಚರ್ಚೆ ನಡೆಯಲಿದೆ. ಇದೇ ವಿಷಯವಾಗಿ ಮಣಿಪುರದಲ್ಲಿ ಹೊಸದಾಗಿ ಗೆದ್ದಿರುವ ಕಾಂಗ್ರೆಸ್ ಸಂಸದರನ್ನು ಸಹ ರಾಹುಲ್ ಭೇಟಿ ಮಾಡಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು