ಕರ್ನಾಟಕದ ಎಸ್ ವಿಘ್ನೇಶ್ ಶಿಶಿರ್ ಎಂಬ ಅರ್ಜಿದಾರರಿಂದ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆಗೆ ಸಹ ಕೋರಿಕೆ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಅಲಹಾಬಾದ್ ಹೈಕೋರ್ಟ್‌ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ತಿಳಿಸಿದೆ. ರಾಹುಲ್ ಗಾಂಧಿ ಅವರು ಯುಕೆ ಪ್ರಜೆಯೂ ಆಗಿದ್ದಾರೆ ಮತ್ತು ಅದನ್ನು ಪರಿಗಣಿಸಿ ಅವರ ಭಾರತೀಯ ಪೌರತ್ವವನ್ನು ರದ್ದು ಪಡಿಸಬೇಕು ಎಂಬ ಮನವಿಯೊಂದಿಗೆ ಸಲ್ಲಿಕೆಯಾದ ಅರ್ಜಿಯ ಕುರಿತು ನ್ಯಾಯಾಲಯವು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿತ್ತು. ಕರ್ನಾಟಕದ ಎಸ್ ವಿಘ್ನೇಶ್ ಶಿಶಿರ್ ಎಂಬ ಈ ಅರ್ಜಿದಾರ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆಯನ್ನು ನಡೆಸುವಂತೆ ಕೋರಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅವರಿಗೆ ಮೂರು ವಾರಗಳಲ್ಲಿ ಈ ಸಂಬಂಧ ಗೃಹ ಸಚಿವಾಲಯದಿಂದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಮತ್ತು ಅದರ ಪ್ರತಿಕ್ರಿಯೆಯನ್ನು ಮುಂದಿನ ದಿನಾಂಕದಂದು ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ.
ಕೇಂದ್ರ ಗೃಹ ಸಚಿವಾಲಯವು, “ಅರ್ಜಿದಾರರು ಮಾಡಿದ ಮನವಿಯನ್ನು ಸಚಿವಾಲಯದಲ್ಲಿ ಸ್ವೀಕರಿಸಲಾಗಿದೆ ಮತ್ತು ಅದು ಪ್ರಕ್ರಿಯೆಯಲ್ಲಿದೆ. ಈ ವಿಚಾರವನ್ನು ಡಿಸೆಂಬರ್ 19, 2024 ಕ್ಕೆ ಪಟ್ಟಿ ಮಾಡಲಾಗಿದೆ. ಇದರ ಫಲಿತಾಂಶವನ್ನು ಪಟ್ಟಿ ಮಾಡಲಾಗುವ ಮಾರನೆ ದಿನವೇ ನ್ಯಾಯಾಲಯಕ್ಕೆ ತಿಳಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಹೇಳಿದೆ.
ವಿಘ್ನೇಶ್, “ಈ ವಿಷಯದ ಬಗ್ಗೆ ಸ್ಪಷ್ಟ ಮತ್ತು ಅಂತಿಮ ನಿರ್ಧಾರವನ್ನು ಡಿಸೆಂಬರ್ 19 ರೊಳಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಗೃಹ ಸಚಿವಾಲಯವು ತನ್ನ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ತಿಳಿಸಬೇಕಾಗಿದೆ,” ಎಂದು ಹೇಳಿದ್ದಾರೆ.
“ಸರ್ಕಾರವು ತಕ್ಷಣವೇ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಹಿಂಪಡೆಯುತ್ತದೆ ಎಂದು ನಾನು ನಂಬುತ್ತೇನೆ. ಅವರ ಹೆಸರು ಯುಕೆಯ ಪೌರತ್ವ ದಾಖಲೆಗಳಲ್ಲಿದೆ ಎಂಬ ಬಗ್ಗೆ ನಾವು ಯುಕೆ ಸರ್ಕಾರದಿಂದ ನೇರ ಮಾಹಿತಿಯನ್ನು ಸ್ವೀಕರಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.
“ನಾವು ಎಲ್ಲಾ ದಾಖಲೆಗಳನ್ನು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದೇವೆ…. ಭಾರತೀಯ ಕಾನೂನುಗಳ ಅಡಿಯಲ್ಲಿ ದ್ವಿಪೌರತ್ವವನ್ನು ಅನುಮತಿಸಲಾಗುವುದಿಲ್ಲ. ಯಾರಾದರೂ ಮತ್ತೊಂದು ರಾಷ್ಟ್ರದ ಪೌರತ್ವವನ್ನು ತೆಗೆದುಕೊಂಡ ನಂತರ, ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ” ಎಂದು ವಿಘ್ನೇಶ್ ಹೇಳಿದ್ದಾರೆ.