Monday, August 19, 2024

ಸತ್ಯ | ನ್ಯಾಯ |ಧರ್ಮ

ರೈತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ ರಾಹುಲ್‌: ಸಂಸತ್ತಿನ ಆವರಣದಲ್ಲಿ ರೈತರೊಂದಿಗೆ ಸಭೆ

ನವದೆಹಲಿ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ 12 ರೈತ ಮುಖಂಡರ ನಿಯೋಗವು ಲೋಕಸಭೆಯ ಸಂಕೀರ್ಣದಲ್ಲಿಂದು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಕನಿಷ್ಟ ಬೆಂಬಲ ಬೆಲೆ ನೀತಿ ಪರೀಷ್ಕರಣೆಗೆ ಆಗ್ರಹಿಸಿ ಸಭೆ ನಡೆಸಿತು.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರು ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಾರಿಂಗ್‌ ಅವರು, ರಾಹುಲ್ ಗಾಂಧಿಯವರು ಸಂಸತ್ತಿನ ಒಳಗೆ ರೈತರ ಪರ ಧ್ವನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ರೈತರು ಮತ್ತೆ ದೆಹಲಿಗೆ ಬಂದು ಮತ್ತೊಂದು ಮೆರವಣಿಗೆ ಆಯೋಜಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರೈತರು ದೆಹಲಿಗೆ ಬಂದು ಪ್ರತಿಭಟಿಸಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಖಾಸಗಿ ಸದಸ್ಯರ ಮಸೂದೆ ಅಗತ್ಯವಿದ್ದರೆ ನಾವು ಅದನ್ನು ಸಹ ತರುತ್ತೇವೆ” ಎಂದರು.

ರೈತರಲ್ಲಿ ಒಬ್ಬರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, “ಸರ್ಕಾರ ಇದುವರೆಗೆ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ; ಸ್ವಾಮಿನಾಥನ್ ವರದಿ ಅನುಷ್ಠಾನ ಅತ್ಯಗತ್ಯ. ನಾವು ದೆಹಲಿ ಕಡೆಗೆ ಪಾದಯಾತ್ರೆಯನ್ನು ಮುಂದುವರಿಸಲಿದ್ದೇವೆ ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು, ರೈತರು ತಮ್ಮ ರಾಜ್ಯಗಳಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿದರು. ದೀರ್ಘಾವಧಿಯ ಬೇಡಿಕೆಗಳನ್ನು ಈಡೇರಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಲು ಕೇಳಿಕೊಂಡರು. ಎಂಎಸ್‌ಪಿಯನ್ನು ಪರಿಷ್ಕರಿಸಲು ಮತ್ತು ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಈ ಬೇಡಿಕೆಗಳು 2020 ರಲ್ಲಿ ಪ್ರಾರಂಭವಾದಾಗಿನಿಂದ ಅವರ ಪ್ರತಿಭಟನೆಯ ಮುಖ್ಯ ಭಾಗವಾಗಿದೆ ಎಂದರು.

ದೇಶದಾದ್ಯಂತದ ರೈತ ಸಂಘಗಳು ಎಂಎಸ್‌ಪಿಯನ್ನು ಬಯಸುತ್ತವೆ, ಸ್ವಾಮಿನಾಥನ್ ಆಯೋಗದ ಸಿ2+50 ಸೂತ್ರವನ್ನು ಆಧರಿಸಿರಬೇಕು, ಇದು ಬಂಡವಾಳದ ವೆಚ್ಚ ಮತ್ತು ಬೆಂಬಲ ಬೆಲೆಯನ್ನು ಲೆಕ್ಕಾಚಾರ ಮಾಡುವಾಗ ಭೂಮಿ ಬಾಡಿಗೆಯೂ ಸೇರಿರುತ್ತದೆ. ಆದರೆ, ಈಗಿರುವ ಎ2+ಎಫ್‌ಎಲ್‌+50 ಶೇಕಡಾ ವಿಧಾನವನ್ನು ಕೈಬಿಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ರೈತರನ್ನು ಸಂಸತ್ತಿ ಅವರಣದೊಳಕ್ಕೆ ಬಿಡದಿರುವುದಕ್ಕೆ ಆಕ್ರೋಶ: ರೈತರನ್ನು ಸಂಸತ್ತಿನ ಆವರಣದೊಳಕ್ಕೆ ಬಿಡದಿರುವುದಕ್ಕೆ ರೈತರು ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು. ಸಭೆಗೂ ಮುನ್ನ ಗೊಂದಲ ಉಂಟಾಯಿತು.

“ನಾನು ರೈತರನ್ನು ಆಹ್ವಾನಿಸಿದ್ದೆ. ಆದರೆ, ರೈತರನ್ನು ಸಂಸತ್ತಿನ ಆವರಣದೊಳಗೆ ಬರುವುದನ್ನು ಸರ್ಕಾರದ ನಿರ್ದೇಶನದಿಂದ ಸಿಬ್ಬಂದಿ ತಡೆದರು. ಬಹುಶಃ ಅವರು ರೈತರಾಗಿರುವ ಕಾರಣಕ್ಕೆ ಇರಬಹುದು. ಇದಕ್ಕೆ ಕಾರಣವನ್ನು ನೀವು ಪ್ರಧಾನಿಯವರನ್ನು ಕೇಳಬೇಕಾಗುತ್ತದೆ.” ಎಂದು ರಾಹುಲ್ ಗಾಂಧಿ ಲೇವಡಿಯಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page