Thursday, October 9, 2025

ಸತ್ಯ | ನ್ಯಾಯ |ಧರ್ಮ

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ | ಬೆಂಗಳೂರಿನಲ್ಲಿ ತೆಲುಗು ನಟ, ನಟಿಯರು ಹಾಗೂ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮೆಟ್ರೋ ನಗರದಲ್ಲಿ ರೇವ್ ಪಾರ್ಟಿಗಳು ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ತಡರಾತ್ರಿ ನಗರದ ಹೊರವಲಯದಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ.

ಫಾರ್ಮ್ ಹೌಸ್ ಮೇಲೆ ಮುಂಜಾನೆ 3 ಗಂಟೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸ್ಥಳದಿಂದ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ರೇವ್ ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಮಾಹಿತಿ ಪ್ರಕಾರ ಹೈದರಾಬಾದ್ ನಿವಾಸಿ ವಾಸು ಅವರು ತಮ್ಮ ಹುಟ್ಟುಹಬ್ಬದ ನಿಮಿತ್ತ ಉದ್ಯಮಿಯೊಬ್ಬರ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಮಾಡಿದ್ದರು. ಅವರ ಎಲ್ಲಾ ಸ್ನೇಹಿತರು ಮತ್ತು ತೆಲುಗು ನಟ-ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ತಡರಾತ್ರಿಯವರೆಗೂ ರೇವ್ ಪಾರ್ಟಿ ನಡೆಯಿತು. ಫಾರ್ಮ್‌ಹೌಸ್‌ನಲ್ಲಿ ಗದ್ದಲ, ಗಲಾಟೆ ನಡೆಯುತ್ತಿದ್ದುದನ್ನು ಕಂಡು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಪೊಲೀಸರು ಸ್ಕ್ವಾಡ್‌ನೊಂದಿಗೆ ಸ್ಥಳಕ್ಕೆ ಆಗಮಿಸಿ ಪಾರ್ಟಿಯನ್ನು ತಡೆದರು.

ತನಿಖೆಯ ವೇಳೆ ಪೊಲೀಸರಿಗೆ ಸುಮಾರು 17 ಗ್ರಾಂ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿದೆ. ಈ ರೇವ್ ಪಾರ್ಟಿಯಲ್ಲಿ ಬೆಂಗಳೂರು ಮತ್ತು ಆಂಧ್ರಪ್ರದೇಶದಿಂದ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಮತ್ತೊಂದೆಡೆ ಪಾರ್ಟಿಗೆ ಬಂದಿದ್ದ ವ್ಯಕ್ತಿಯೊಬ್ಬರ ಕಾರಿನಲ್ಲಿ ಆಂಧ್ರದ ಶಾಸಕರೊಬ್ಬರ ಪಾಸ್ ಕೂಡ ಪತ್ತೆಯಾಗಿದೆ. ತನಿಖೆಯ ವೇಳೆ ಮರ್ಸಿಡಿಸ್ ಬೆಂಜ್, ಜಾಗ್ವಾರ್ ಮತ್ತು ಆಡಿ ಕಾರುಗಳು ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಾರ್ಟಿಯಲ್ಲಿ ಭಾಗವಹಿಸಿದವರಲ್ಲಿ ತೆಲುಗು ಚಿತ್ರರಂಗದ ಪೋಷಕ ನಟಿ ಸೇರಿದಂತೆ ಅನೇಕ ಟಿವಿ ನಟರು, ನಟಿಯರು, ರೂಪದರ್ಶಿಗಳು ಸೇರಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page