Monday, December 22, 2025

ಸತ್ಯ | ನ್ಯಾಯ |ಧರ್ಮ

ರೈಲು ಪ್ರಯಾಣ ದರ ಏರಿಕೆ: ಡಿಸೆಂಬರ್ 26ರಿಂದ ಹೊಸ ದರ ಜಾರಿ; ಯಾರಿಗೆ ಎಷ್ಟು ಹೊರೆ?

ದೆಹಲಿ: ರೈಲ್ವೆ ಇಲಾಖೆಯು ತನ್ನ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಪ್ರಯಾಣ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಆದರೆ, ಸಬರ್ಬನ್ (ಉಪನಗರ) ರೈಲುಗಳ ಪ್ರಯಾಣಿಕರಿಗೆ ಯಾವುದೇ ದರ ಏರಿಕೆ ಮಾಡದೆ ಸಮಾಧಾನಕರ ಸುದ್ದಿ ನೀಡಿದೆ.

ಹೊಸ ದರ ಪಟ್ಟಿ ಹೀಗಿದೆ:

ಜನರಲ್ ಕ್ಲಾಸ್: 215 ಕಿಲೋಮೀಟರ್‌ಗಳವರೆಗೆ ದರ ಬದಲಾವಣೆ ಇಲ್ಲ. 215 ಕಿ.ಮೀ ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಏರಿಕೆಯಾಗಲಿದೆ.

ನಾನ್-ಎಸಿ ಕ್ಲಾಸ್ (ಮೇಲ್/ಎಕ್ಸ್‌ಪ್ರೆಸ್): ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಏರಿಕೆಯಾಗಲಿದೆ. ಅಂದರೆ 500 ಕಿ.ಮೀ ಪ್ರಯಾಣಕ್ಕೆ ಸುಮಾರು 10 ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ.

ಎಸಿ ಕ್ಲಾಸ್: ಎಸಿ ಕ್ಲಾಸ್ ಪ್ರಯಾಣಕ್ಕೂ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಏರಿಕೆ ಮಾಡಲಾಗಿದೆ.

ರೈಲ್ವೆ ಜಾಲದ ವಿಸ್ತರಣೆ ಮತ್ತು ಸಿಬ್ಬಂದಿ ವೇತನ ಹಾಗೂ ಪಿಂಚಣಿ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಇಲಾಖೆ ತಿಳಿಸಿದೆ. ನೌಕರರ ವೇತನ ವೆಚ್ಚ 1,15,000 ಕೋಟಿ ರೂ.ಗೆ ಹಾಗೂ ಪಿಂಚಣಿ ವೆಚ್ಚ 60,000 ಕೋಟಿ ರೂ.ಗೆ ಏರಿಕೆಯಾಗಿದ್ದು, ಇದನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಏರಿಕೆಯಿಂದ ರೈಲ್ವೆಗೆ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ.

ಇದೇ ವೇಳೆ, ರೈಲ್ವೆಯಲ್ಲಿನ ಸಿಬ್ಬಂದಿ ಕೊರತೆಯ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ರೈಲ್ವೆ ಇಲಾಖೆ ನೀಡಿರುವ ಮಾಹಿತಿಯಂತೆ:

ಲೋಕೋ ಪೈಲಟ್: 1,42,814 ಹುದ್ದೆಗಳ ಪೈಕಿ ಕೇವಲ 1,07,928 ಮಂದಿ ಕೆಲಸ ಮಾಡುತ್ತಿದ್ದಾರೆ.

ಗೂಡ್ಸ್ ರೈಲು ಮ್ಯಾನೇಜರ್ಸ್ (ಗಾರ್ಡ್ಸ್): 22,082 ಹುದ್ದೆಗಳ ಪೈಕಿ ಕೇವಲ 12,345 ಮಂದಿ ಮಾತ್ರ ಲಭ್ಯವಿದ್ದಾರೆ.

ಒಟ್ಟು ಸಿಬ್ಬಂದಿ: ಎಲ್ಲಾ ವಿಭಾಗಗಳಲ್ಲಿ 2,06,495 ಹುದ್ದೆಗಳಿದ್ದು, ಅದರಲ್ಲಿ 1,59,219 ಹುದ್ದೆಗಳು ಮಾತ್ರ ಭರ್ತಿಯಾಗಿವೆ.

ಸರಕು ಸಾಗಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಮತ್ತು ರೈಲ್ವೆಯ ದಕ್ಷತೆಯನ್ನು ಹೆಚ್ಚಿಸಲು ಈ ಸಿಬ್ಬಂದಿ ಕೊರತೆಯನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಬೇಕು ಎಂದು ಸಮಿತಿ ಸೂಚಿಸಿದೆ. ಅಲ್ಲದೆ, ಆದಾಯ ಹೆಚ್ಚಿಸಲು ರೈಲು ಬೋಗಿಗಳ ಮೇಲೆ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುವತ್ತ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page