Thursday, September 11, 2025

ಸತ್ಯ | ನ್ಯಾಯ |ಧರ್ಮ

ಮಳೆ ಮಳೆ ಮಳೆ : ಬಿಸಿಲ ಬೇಗೆಗೆ ತತ್ತರಿಸಿದ ರಾಜ್ಯಕ್ಕೆ ಇಂದಿನಿಂದ ಮಳೆ ಸಾಧ್ಯತೆ

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ವಾರದೊಳಗೆ ಕರಾವಳಿಗೆ ಪೂರ್ವ ಮುಂಗಾರು ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಬೇಸಿಗೆಯ ಮಳೆ ಇನ್ನು ಒಂದು ವಾರದಲ್ಲಿ ಬರುವ ಬಗ್ಗೆ ಸೂಚನೆ ನೀಡಿದೆ

ವಾಡಿಕೆಯಂತೆ ಕರಾವಳಿ ಭಾಗದಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಬೇಸಗೆ ಮಳೆ ಆರಂಭಗೊಳ್ಳುತ್ತದೆ. ಆದರೆ ಜಾಗತಿಕ ತಾಪಮಾನ ವೈಪರೀತ್ಯದ ಪರಿಣಾಮ ಕಳೆದ ಕೆಲವು ವರ್ಷಗಳಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಈ ಬಾರಿ ಚಳಿಗಾಲದ ಅವಧಿಯಲ್ಲಿ ಚಳಿಯ ಪ್ರಮಾಣ ಕಡಿಮೆಯಾದ ಪರಿಣಾಮ ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿದೆ.

ಗರಿಷ್ಠ ಉಷ್ಣಾಂಶದ ಮಾಹಿತಿಯಂತೆ ನಿನ್ನೆ (ಮಾರ್ಚ್‌ 20) ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹೋಬಳಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 41.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಕಲಬುರಗಿಯ ಇಜೇರಿ, ಕಳಗಿ, ನಿಂಬರ್ಗ ತಾಂಡಾ, ಶಹಾಬಾದ್‌, ಕೂಡ್ಲಿ, ರಾಯಚೂರಿನ ಹಾಲಾಪುರ, ಹಡಗನಹಾಳ್‌, ವಲ್ಕಂದಿನ್ನಿ, ಬಳ್ಳಾರಿಯ ಕೊಲೂರುಗಳಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಕರಾವಳಿಯ ಎರಡು ಜಿಲ್ಲೆ, ಉತ್ತರ ಒಳನಾಡಿನ ಆರು ಜಿಲ್ಲೆ, ದಕ್ಷಿಣ ಒಳನಾಡಿನ 15 ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗಬಹುದು. ಬೆಂಗಳೂರು ಸುತ್ತಮುತ್ತ ಒಂದೆರಡು ಕಡೆಗಳಲ್ಲಿ ಮಳೆ ಬೀಳಬಹುದಾದರೂ, ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಉಷ್ಣಾಂಶದಲ್ಲಿ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಏರಿಕೆ, ಇಳಿಕೆ ಕಂಡುಬರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಮಳೆ ಬೀಳಬಹುದು. ಇದೇ ರೀತಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ವಿಜಯಪುರ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರುಗಳಲ್ಲಿ ಒಂದೆರಡು ಕಡೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ ಎಂದು ಮಳೆ ಮುನ್ಸೂಚನೆ ವರದಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page