Thursday, May 22, 2025

ಸತ್ಯ | ನ್ಯಾಯ |ಧರ್ಮ

ನಗರದಲ್ಲಿ ಮಳೆ ಸಮಸ್ಯೆ, ಶಾಶ್ವತ ಪರಿಹಾರ ನಮ್ಮ ಆದ್ಯತೆ: ಡಿ.ಸಿ.ಎಂ

ಬೆಂಗಳೂರು: ರಾಜಧಾನಿಯಲ್ಲಿ ಮಳೆಯಿಂದಾಗಿರುವ ಸಮಸ್ಯೆ ಕುರಿತು ಜನರಿಗೆ ಆಕ್ರೋಶ ಇದೆ ನಿಜ. ಆದರೆ, ಮಳೆ ಪರಿಸ್ಥಿತಿ ನಿಭಾಯಿಸಲು ಶಾಶ್ವತ ಪರಿಹಾರ ನಮ್ಮ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಡಿನಲ್ಲಿ ಮಳೆ ಹೆಚ್ಚಾಗಬೇಕು ಎಂದುಕೊಳ್ಳುತ್ತೇನೆ. ಅದರಿಂದ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ಮೂಲಸೌಕರ್ಯಗಳಲ್ಲಿನ ಬಹುಕಾಲದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ, ಅಗತ್ಯ ಕ್ರಮಗಳಿಗೆ ಸೂಚಿಸಿದಂತೆ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ₹ 2,000 ಕೋಟಿಯಲ್ಲಿ ಇಡೀ ಬೆಂಗಳೂರಿನ ರಾಜಕಾಲುವೆಗಳ ಸಮಸ್ಯೆಗಳನ್ನು ಒಂದೇ ಸಾರಿ ಪೂರ್ಣಗೊಳಿಸಬೇಕೆಂದುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಮಳೆ ಬಾಧಿತ ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಟೌನ್ ಪ್ಲಾನಿಂಗ್‌ ನಲ್ಲಿ ಬದಲಾವಣೆ ತರುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮಳೆ ನೀರು ನುಗ್ಗದಿದ್ದರೂ, ಕೆಲವೆಡೆ ನೆಲಮಹಡಿಗಳಲ್ಲಿ ಅಂತರ್ಜಲ ಬರುತ್ತಿದೆ. ಇದರಿಂದ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ಗಳಾಗುತ್ತಿದೆ, ಇದರಿಂದ ಪ್ರಾಣ ಹಾನಿಗಳಾಗಿದೆ ಎಂದರು.

ಹೀಗಾಗಿ, ಹೊಸ ಕಟ್ಟಡಗಳಲ್ಲಿ ಈ ನೆಲಮಹಡಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಸಮಾಲೋಚಿಸಿ, ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಪರಿಹಾರ ಕ್ರಮಗಳು ಸದ್ಯಕ್ಕೆ ಸಮರೋಪಾದಿಯಲ್ಲಿದೆ. ಜನ ನೆಮ್ಮದಿಯಿಂದ ಬದುಕುವ, ಸುಸ್ಥಿರ ಬೆಂಗಳೂರು ನಿರ್ಮಾಣ ನಮ್ಮ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page