ಕಾಮನ್‌ವೆಲ್ತ್ ಗೇಮ್ಸ್: ಗ್ಲ್ಯಾಸ್ಗೋದಲ್ಲಿ ಮಿಂಚಿದ ಭಾರತೀಯ ವೇಟ್‌ಲಿಫ್ಟರ್‌ಗಳು, ರಾಜ ಮುತ್ತುಪಾಂಡಿಗೆ ಬೆಳ್ಳಿ ಪದಕ

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ನಾಲ್ಕನೇ ದಿನವಾದ ಭಾನುವಾರ (ಜುಲೈ 27) ಭಾರತದ ವೇಟ್‌ಲಿಫ್ಟರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟ ರಾಜ ಮುತ್ತುಪಾಂಡಿ, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು ನಾಲ್ಕಕ್ಕೇರಿಸಿದ್ದಾರೆ. ಪುರುಷರ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 286 ಕೆಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಪಂದ್ಯಾವಳಿಯನ್ನು ಸ್ಮರಣೀಯವಾಗಿಸಿದ್ದಾರೆ.

ಮುತ್ತುಪಾಂಡಿ ಸ್ನ್ಯಾಚ್ ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಜಿ ತೂಕ ಎತ್ತಿದರು. ಮಲೇಷ್ಯಾದ ಮುಹಮ್ಮದ್ ಅಜ್ನಿಲ್ ಬಿನ್ ಬಿದಿನ್ ಒಟ್ಟು 299 ಕೆಜಿ ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂಗಿನಿಯ ಮೋರಿಯಾ ಬಾರೂ (282 ಕೆಜಿ) ಕಂಸದ ಪದಕ ಪಡೆದರು.

2022 ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿರಲಿಲ್ಲ

26 ವರ್ಷದ ರಾಜ ಮುತ್ತುಪಾಂಡಿ 2019 ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಸ್ನ್ಯಾಚ್ ಸ್ಪರ್ಧೆಯ ವೇಳೆ ಬಲ ಮೊಣಕೈಯಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ (ಲಿಗಮೆಂಟ್ ಟೇರ್) ಒಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಸುದೀರ್ಘ ಕಾಲ ತರಬೇತಿಯಿಂದ ದೂರ ಉಳಿಯಬೇಕಾಯಿತು. 2021 ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮೂಲಕ ಕಂಬ್ಯಾಕ್ ಮಾಡಿ ಮೂರನೇ ಸ್ಥಾನ ಪಡೆದಿದ್ದ ಅವರು, 2022 ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು.

ಪದಕ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿ ಭಾರತ

ಇದಕ್ಕೂ ಮುನ್ನ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರೆ, ಋಷಿಕಾಂತ್ ಸಿಂಗ್ ಬೆಳ್ಳಿ ಪದಕ ತಂದುಕೊಟ್ಟಿದ್ದರು. ಶುಕ್ರವಾರ ನಡೆದ ಪುರುಷರ ಹೆವಿವೇಟ್ ವಿಭಾಗದಲ್ಲಿ ಪ್ಯಾರಾ ಪವರ್‌ಲಿಫ್ಟರ್ ಝಂಡು ಕುಮಾರ್ ಕಂಸದ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು. ವೇಟ್‌ಲಿಫ್ಟರ್‌ಗಳ ಈ ಭರ್ಜರಿ ಪ್ರದರ್ಶನದಿಂದಾಗಿ ಭಾರತದ ಪದಕಗಳ ಸಂಖ್ಯೆ 4 ಕ್ಕೆ (1 ಚಿನ್ನ, 2 ಬೆಳ್ಳಿ ಮತ್ತು 1 ಕಂಚು) ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ ಭಾರತ 8 ನೇ ಸ್ಥಾನದಲ್ಲಿದೆ.

ಬಾಕ್ಸರುಗಳ ಶ್ರೇಷ್ಠ ಪ್ರದರ್ಶನ

ಇನ್ನೊಂದೆಡೆ ಭಾರತೀಯ ಬಾಕ್ಸರ್‌ಗಳು ಸಹ ರಿಂಗ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಜದುಮಣಿ ಸಿಂಗ್ ಪಾಕಿಸ್ತಾನದ ಸುಮಾಮಾ ರೆಹಮಾನ್ ಅವರನ್ನು ಏಕಪಕ್ಷೀಯ ಪಂದ್ಯದಲ್ಲಿ ಸೋಲಿಸಿದರೆ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಸುಲಭ ಜಯದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎಸ್‌ಇಸಿ ಸೆಂಟರ್‌ನಲ್ಲಿ ಅಭಿಮಾನಿಗಳ ‘ಭಾರತ್ ಮಾತಾ ಕಿ ಜೈ’ ಮತ್ತು ‘ಇಂಡಿಯಾ-ಇಂಡಿಯಾ’ ಜಯಘೋಷಗಳ ನಡುವೆ ಜದುಮಣಿ ಸಿಂಗ್ ತಮ್ಮ ಅತ್ಯುತ್ತಮ ತಂತ್ರಜ್ಞಾನ ಮತ್ತು ವೇಗದ ಮೂಲಕ ರೆಹಮಾನ್ ಅವರನ್ನು 5-0 ಅಂತರದಿಂದ ಪರಾಭವಗೊಳಿಸಿದರು.

Related Articles

ಇತ್ತೀಚಿನ ಸುದ್ದಿಗಳು