ಜೈಪುರದಲ್ಲಿ ಬಿಜೆಪಿ ಮುಖಂಡನ ಬಂಧನ: ನೀಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ರಾಜಕೀಯ ಆಯಾಮ

ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದ ಸ್ಥಳೀಯ ಬಿಜೆಪಿ ನಾಯಕ ದಿನೇಶ್ ಬಿನ್ವಾಲ್ ಎಂಬುವವರು ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, “ಬಂಧಿತ ದಿನೇಶ್ ಬಿನ್ವಾಲ್ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಈ ಕಾರಣಕ್ಕಾಗಿಯೇ ಸರ್ಕಾರವು ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಪೇಪರ್ ಸೋರಿಕೆ ಮಾಫಿಯಾವನ್ನು ಸರ್ಕಾರ ರಕ್ಷಿಸುತ್ತಿದೆಯೇ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಮತ್ತು ವಿರೋಧ ಪಕ್ಷದ ನಾಯಕ ಟಿಕಾರಾಮ್ ಜುಲಿ ಅವರು ಭಜನ್ ಲಾಲ್ ಶರ್ಮಾ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಖಚಿತ ಮಾಹಿತಿ ಇದ್ದರೂ ವಿಶೇಷ ಕಾರ್ಯಾಚರಣೆ ತಂಡ (SOG) ಯಾಕೆ ಕೂಡಲೇ ಎಫ್‌ಐಆರ್ ದಾಖಲಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಗರಣದ ಮೂಲ ಕೊಂಡಿಗಳು ಅಧಿಕಾರದ ಗದ್ದುಗೆಯಲ್ಲಿ ಇರುವವರ ಜೊತೆ ಸಂಪರ್ಕ ಹೊಂದಿವೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಜುಲಿ ಆರೋಪಿಸಿದ್ದಾರೆ. ಅಲ್ಲದೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯ ಘಟನೆಯ ಉಪಾಧ್ಯಕ್ಷ ಮುಖೇಶ್ ದಧೀಚ್, ದಿನೇಶ್ ಬಿನ್ವಾಲ್ ಪಕ್ಷದಲ್ಲಿ ಯಾವುದೇ ಅಧಿಕೃತ ಸ್ಥಾನ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ಬಿನ್ವಾಲ್ ಕುಟುಂಬಸ್ಥರು ಅವರು ಅಮಾಯಕರೆಂದು ವಾದಿಸಿದ್ದು, ರಾಜಕೀಯ ದ್ವೇಷದಿಂದಾಗಿ ಅವರನ್ನು ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಬಿನ್ವಾಲ್ ಮತ್ತು ಅವರ ಸಹೋದರನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ಸದ್ಯ ಎಸ್‌ಒಜಿ ತಂಡವು ವಶಕ್ಕೆ ಪಡೆದಿದ್ದ ಸುಮಾರು 20 ಜನರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ.

Related Articles

ಇತ್ತೀಚಿನ ಸುದ್ದಿಗಳು