Home ದೇಶ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಕಾಲುವೆಗೆ ಉರುಳಿಬಿದ್ದ ಟೆಂಪೋ ಟ್ರಾವೆಲರ್, 7 ಯಾತ್ರಿಕರ ಸಾವು, 10...

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಕಾಲುವೆಗೆ ಉರುಳಿಬಿದ್ದ ಟೆಂಪೋ ಟ್ರಾವೆಲರ್, 7 ಯಾತ್ರಿಕರ ಸಾವು, 10 ಮಂದಿಗೆ ಗಂಭೀರ ಗಾಯ

0

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯ ವ್ಯಾಪ್ತಿಯಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 7 ಮಂದಿ ಯಾತ್ರಿಕರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದಿಂದ ರಾಜಸ್ಥಾನದ ಪ್ರಸಿದ್ಧ ಖಾಟು ಶ್ಯಾಮ್ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟೆಂಪೋ ಟ್ರಾವೆಲರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಸುಮಾರು 20 ಅಡಿ ಆಳದ ಕಾಲುವೆಗೆ ಉರುಳಿಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಸುಮಾರು 20 ಪ್ರಯಾಣಿಕರಿದ್ದ ಈ ವಾಹನವು ಶುಕ್ರವಾರ ರಾತ್ರಿ ಸಿಕಾರ್ ಜಿಲ್ಲೆಯ ರೀಂಗಸ್‌ನಲ್ಲಿರುವ ಖಾಟು ಶ್ಯಾಮ್ ದೇವಾಲಯದ ದರ್ಶನಕ್ಕೆಂದು ಹೊರಟಿತ್ತು. ಶನಿವಾರ ಬೆಳಿಗ್ಗೆ ಸುಮಾರು 7:00 ಗಂಟೆಯ ವೇಳೆಗೆ ಕರಾಡಿಯಾ ಟೋಲ್ ಪ್ಲಾಜಾ ದಾಟಿ ಸುಲ್ತಾನ್‌ಪುರದ ಕಡೆಗೆ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಚಾಲಕ ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಪ್ರಾಥಮಿಕ ಕಾರಣವೆಂದು ಶಂಕಿಸಲಾಗಿದ್ದು, ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದರಿಂದ ಹಲವು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು.

ಸ್ಥಳೀಯ ಗ್ರಾಮಸ್ಥರು, ಹೆದ್ದಾರಿ ಪ್ರಾಧಿಕಾರದ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಕ್ರೇನ್ ಮೂಲಕ ವಾಹನವನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಕೋಟಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ದುರಂತದ ಕುರಿತು ಸಂತಾಪ ಸೂಚಿಸಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿ, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.

You cannot copy content of this page

Exit mobile version