ನಾಗಾಂವ್ (ಅಸ್ಸಾಂ): ಶನಿವಾರ ಮುಂಜಾನೆ ನವದೆಹಲಿಗೆ ತೆರಳುತ್ತಿದ್ದ ಸೈರಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಮೃತಪಟ್ಟಿವೆ. ಆದರೆ, ಈ ದುರ್ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಅಪಘಾತ ಡಿಸೆಂಬರ್ 20 ರಂದು ಬೆಳಗಿನ ಜಾವ ಸುಮಾರು 2.17ರ ಸುಮಾರಿಗೆ ಈಶಾನ್ಯ ಗಡಿನಾಡು ರೈಲ್ವೆಯ ಲುಮ್ಡಿಂಗ್ ವಿಭಾಗದ ಜಮುನಾಮುಖ್–ಕಂಪುರ ನಡುವಿನ ಹಳಿ ಭಾಗದಲ್ಲಿ ಸಂಭವಿಸಿದೆ. ರೈಲು ಸಂಖ್ಯೆ 20507 ಡೌನ್ ಸೈರಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹಳಿಯಲ್ಲಿ ಇದ್ದ ಆನೆಗಳನ್ನು ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ಸೇರಿದಂತೆ ಐದು ಬೋಗಿಗಳು ಹಳಿ ತಪ್ಪಿವೆ.
ಘಟನೆಯ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿಲೋಮೀಟರ್ ದೂರದಲ್ಲಿದ್ದು, ಈ ಭಾಗವನ್ನು ಅಧಿಕೃತವಾಗಿ ಆನೆ ಕಾರಿಡಾರ್ ಎಂದು ಗುರುತಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯಲ್ಲಿ ಆನೆಗಳಿರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದರೂ, ಡಿಕ್ಕಿ ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಡಿಕ್ಕಿಯ ತೀವ್ರತೆ ಹೆಚ್ಚಾಗಿದ್ದರೂ ಸಹ ಯಾವುದೇ ಮಾನವ ಜೀವಹಾನಿ ಸಂಭವಿಸಿಲ್ಲ. ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಪಘಾತದಲ್ಲಿ ಭಾಗಿಯಾದ ಆನೆಗಳ ನಿಖರ ಸ್ಥಿತಿಯನ್ನು ಮೊದಲ ಹಂತದಲ್ಲಿ ರೈಲ್ವೆ ಮೂಲಗಳು ದೃಢಪಡಿಸಿರಲಿಲ್ಲ, ಆದರೆ ಬಳಿಕ ಏಳು ಆನೆಗಳು ಮೃತಪಟ್ಟಿರುವುದು ದೃಢವಾಗಿದೆ.
ಅಪಘಾತದ ಮಾಹಿತಿ ದೊರಕುತ್ತಿದ್ದಂತೆ ಪರಿಹಾರ ರೈಲುಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಲುಮ್ಡಿಂಗ್ ವಿಭಾಗೀಯ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಈಶಾನ್ಯ ಗಡಿನಾಡು ರೈಲ್ವೆಯ ಜನರಲ್ ಮ್ಯಾನೇಜರ್ ಹಾಗೂ ಲುಮ್ಡಿಂಗ್ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೇರಿದಂತೆ ಹಿರಿಯ ಅಧಿಕಾರಿಗಳು ರಕ್ಷಣಾ ಮತ್ತು ಹಳಿ ಪುನಃಸ್ಥಾಪನಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
